ಬೆಳಗಾವಿ- ತನ್ನ ಹೆಂಡತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪ್ರೇಮಿಯನ್ನು ಇತ್ತೀಚಿಗಷ್ಟೆ ಕೊಲೆ ಮಾಡಿದ್ದ ಭೂಪ ಗಂಡ ತನ್ನ ಹೆಂಡತಿಯನ್ನೂ ಕೊಲೆ ಮಾಡಲು ಹೋದಾಗ ಪೋಲೀಸರ ಸಮಯ ಪ್ರಜ್ಞೆ ಯಿಂದಾಗಿ ಹೆಂಡತಿ ಜಸ್ಟ್ ಮಿಸ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಪ್ರಿಯಕರ ಫಿನಿಶ್….ಹೆಂಡತಿ ಜಸ್ಟ್ ಮಿಸ್….ಭೂಪ ಗಂಡ ಹಿಂಡಲಗಾ ಜೈಲಿಗೆ……
ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ನೆತ್ತರು ಹರಿದಿದೆ. ಪತ್ನಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಶಂಕೆ ಹಿನ್ನಲೆಯಲ್ಲಿ ಯುವಕನನ್ನೇ ಪತಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಯುವಕನ ಬಳಿಕ ತನ್ನ ಪತ್ನಿಯ ಕೊಲೆಗೂ ಸ್ಕೆಚ್ ಹಾಕಿದ್ದ. ಸಾಲದೆಂಬಂತೆ ಲಾಂಗ್ ಸಮೇತ ಪತ್ನಿಯ ಮನೆಗೂ ಹೋಗಿದ್ದ. ಪೊಲೀಸರ ಸಮಯ ಪ್ರಜ್ಞೆಯಿಂದ ವಿವಾಹಿತೆಯ ಜೀವ ಉಳಿದಿದೆ.
ಬಸವರಾಜ್ ಬುಕಟನಟ್ಟಿ ಮೂರು ವರ್ಷಗಳ ಹಿಂದೆ ಚಿಕ್ಕೋಡಿ ಪಟ್ಟಣದ ಅಕ್ಷತಾ ಎಂಬುವವಳ ಜೊತೆಗೆ ವಿವಾಹವಾಗಿದ್ದ. ಮದುವೆ ಬಳಿಕವೂ ಇಬ್ಬರೂ ಅನೋನ್ಯವಾಗಿದ್ದರು. ಮದುವೆ ಆಗಿ ಒಂದೂವರೆ ವರ್ಷದ ಬಳಿಕ ಈ ದಂಪತಿಗೆ ಒಂದು ಮುದ್ದಾದ ಹೆಣ್ಣುಮಗುವೂ ಜನಿಸಿದೆ. ಬಾನಂತಿತನಕ್ಕೆ ತವರು ಮನೆಗೆ ಹೋಗಿದ್ದ ಅಕ್ಷತಾ ಬಳಿಕ ಪತಿ ಬಸವರಾಜ್ ಊರಾದ ಶಹಾಂಬದರಕ್ಕೆ ಮರಳಿದ್ದಳು.ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂಬ ಕಾರಣಕ್ಕೆ ಬಸವರಾಜ್ ದುಡಿತದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದ. ಪತ್ನಿ ಮನೆಯಲ್ಲಿದ್ದರೆ ಬಸವರಾಜ್ ಬೆಳಗಾವಿಯಲ್ಲೇ ರೂಂ ಮಾಡಿಕೊಂಡಿದ್ದ. ಎರಡ್ಮೂರು ದಿನಕ್ಕೊಮ್ಮೆ ಊರಿಗೆ ಹೋಗಿ, ಪುತ್ರಿ, ತಾಯಿ, ಪತ್ನಿಯನ್ನು ನೋಡಿಕೊಂಡು ಬರುತ್ತಿದ್ದ. ಮನೆಗೆ ಬೇಕಾದ ದಿನಸಿಗಳನ್ನು ಕೊಡಸಿಕೊಟ್ಟು, ಎಲ್ಲರನ್ನೂ ಚನ್ನಾಗಿ ಸಲುಹುತ್ತಿದ್ದ.ಪತಿ ಯಾವಾಗ ಬೆಳಗಾವಿಯಲ್ಲಿ ರೂಂ ಮಾಡಿಕೊಂಡು ಇರಲು ಆರಂಭಿಸುತ್ತಾನೋ, ಆಗಲೇ ನೋಡಿ! ಅಕ್ಷತಾಗೆ ಪರಿಚಯ ಆಗೋದು ಮಹಾಂತೇಶ ಎಂಬ ಯುವಕ. ಇತನೂ ಶಹಾಬಂದರ ಗ್ರಾಮದವನು. ಬಸವರಾಜ್ ಹಾಗೂ ಮಹಾಂತೇಶ ಮನೆ ನಡುವೆ ಇರುವ ಅಂತರ ನೂರು ಮೀಟರ್ ಅಷ್ಟೇ. ಪದವೀಧರನಾಗಿರುವ ಮಹಾಂತೇಶ ಬೆಳಗಾವಿಯ ಖಾಸಗಿ ಶಿಕ್ಷಣ ಸಂಸ್ಥೆಯ ಗ್ರಂಥಾಲಯ ಸಹಾಯಕನಾಗಿದ್ದ.ಈ ಇಬ್ಬರ ಪರಿಚಯ ಸ್ನೇಹವಾಗಿ ಬಳಿಕ ಅನೈತಿಕ ಸಂಬಂಧಕ್ಕೂ ತಿರುಗುತ್ತದೆ. ಈ ಸುದ್ದಿ ಇಡೀ ಊರಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಆಗ ಸ್ನೇಹಿತರ ಮೂಲಕ ಈ ಇಬ್ಬರ ಅನೈತಿಕ ಸಂಬಂಧ ಬಸವರಾಜ್ ಕಿವಿಗೂ ಬೀಳುತ್ತದೆ. ಆಗ ತಕ್ಷಣವೇ ಬಸವರಾಜ್ ಯಮಕನಮರಡಿ ಠಾಣೆಗೆ ಹೋಗಿ ಮಹಾಂತೇಶ ವಿರುದ್ಧ ದೂರು ದಾಖಲಿಸಲು ಮುಂದಾಗುತ್ತಾನೆ. ಆಗ ಗ್ರಾಮದ ಮುಖಂಡರು ಮಧ್ಯಸ್ಥಿಕೆ ವಹಿಸುತ್ತಾರೆ.ರಾಜೀ ಪಂಚಾಯಿತಿ ಕೂಡಿಸಿ ಗ್ರಾಮದ ಮುಖಂಡರು ಮಹಾಂತೇಶಗೆ ಬುದ್ಧಿವಾದ ಹೇಳುತ್ತಾರೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಕ್ಷತಾ ಜೊತೆಗೆ ಮಾತನಾಡಬಾರದು. ಆಕೆಯ ಸಂಪರ್ಕಕ್ಕೂ ಸಿಗಬಾರದು. ನೀನಾಯಿತು, ನಿನ್ನ ಕೆಲಸ ಆಗಿಯಿತು ಎಂದು ಸುಮ್ಮನಿರಬೇಕು ಎಂದು ಖಡಕ್ ಎಚ್ಚರಿಕೆ ಕೊಡುತ್ತಾರೆ. ಮತ್ತೊಂದೆಡೆ ಬಸವರಾಜ್‍ಗೂ ನೀನು ದೂರು ಕೊಟ್ಟರೆ ಮಹಾಂತೇಶ ಜೀವನ ಹಾಳಾಗುತ್ತದೆ. ಓದಿರುವ ಆತನಿಗೆ ಸರ್ಕಾರಿ ನೌಕರಿ ಸಿಗುವ ಅವಕಾಶ ಇದೆ. ಆ ಕಾರಣಕ್ಕೆ ನೀನು ದೂರು ನೀಡುವುದನ್ನು ಹಿಂದಕ್ಕೆ ಪಡೆಯುವಂತೆ ಗ್ರಾಮದ ಮುಖಂಡರು ಮನವಿ ಮಾಡುತ್ತಾರೆ.
ಗ್ರಾಮದ ಮುಖಂಡರ ಮಾತು ಕೇಳಿ ಮಹಾಂತೇಶ ಕೂಡ ದೂರನ್ನು ಹಿಂಪಡೆಯುತ್ತಾನೆ, ಆದರೆ ಇಷ್ಟು ಚನ್ನಾಗಿ ನೋಡಿಕೊಂಡರೂ ಪತ್ನಿ ಮಾತ್ರ ಬೇರೆ ಯುವಕನ ಜೊತೆಗೆ ಸಂಬಂಧ ಹೊಂದಿದ್ದನ್ನು ಬಸವರಾಜ್‍ಗೆ ಅರಗಿಸಿಕೊಳ್ಳಲು ಆಗಲ್ಲ. ಈ ವಿಚಾರಕ್ಕೆ ನಿತ್ಯವೂ ಮನೆಯಲ್ಲಿ ಗಲಾಟೆಗಳು ಆಗುತ್ತಿದ್ದವು. ಹೀಗಾಗಿ ಎಂಟು ತಿಂಗಳ ಹಿಂದೆಯೇ ಎಂಟು ತಿಂಗಳ ಮಗಳನ್ನು ಪತಿ ಕೈಗೆ ಇಟ್ಟು ಅಕ್ಷತಾ ತವರು ಮನೆ ಸೇರಿದ್ದಳು. ಪತ್ನಿ ಬಿಟ್ಟು ಹೋದರೂ ತಲೆ ಕೆಡಿಸಿಕೊಳ್ಳದ ಬಸವರಾಜ್ ತನ್ನ ತಾಯಿಯ ಸಹಾಯದಿಂದ ಮಗಳನ್ನು ಕಷ್ಟಪಟ್ಟು ಸಲುಹುತ್ತಾನೆ.ಅಕ್ಷತಾ ಪತಿ ಬಸವರಾಜ್ ಬಿಟ್ಟು ತವರು ಮನೆ ಸೇರಿದ ಬಳಿಕವೂ ಮಹಾಂತೇಶ ಜೊತೆಗೆ ಸಂಪರ್ಕದಲ್ಲಿರುತ್ತಾಳೆ. ಆಗಾಗ ಇಬ್ಬರು ಭೇಟಿ ಆಗುತ್ತಾರೆ ಎಂಬ ಗುಸು ಗುಸು ಗ್ರಾಮದ ಜನರು ಮಾತನಾಡುತ್ತಿದ್ದರು. ಇದರಿಂದ ರೋಸಿ ಹೋಗುವ ಬಸವರಾಜ್, ಸುಂದರ ದಾಂಪತ್ಯಕ್ಕೆ ಹುಳಿ ಹಿಂಡಿದ್ದ ಮಹಾಂತೇಶನ್ನು ಮುಗಿಸಿ ಬಿಡಬೇಕು ಎಂಬ ತೀರ್ಮಾಣಕ್ಕೆ ಬರುತ್ತಾನೆ. ಇದಕ್ಕೆ ತನ್ನ ಸ್ನೇಹಿತ ವಿಠ್ಠಲ ಸಹಾಯ ಪಡೆಯುತ್ತಾನೆ. ಮಹಾಂತೇಶ ಮೇಲೆ ನಿಗಾ ಇಡುವಂತೆ ತಿಳಿಸುತ್ತಾನೆ.
ತನ್ನ ಕೆಲಸ ಮುಗಿಸಿಕೊಂಡು ಮಹಾಂತೇಶ ಬೆಳಗಾವಿಯಿಂದ ಬಸ್‍ನಲ್ಲಿ ತನ್ನ ಗ್ರಾಮಕ್ಕೆ ಮೊನ್ನೆ ರಾತ್ರಿ ವೇಳೆ ಮರಳಿದ್ದ. ಮಹಾಂತೇಶ ಚಲನವಲನ ಮೇಲೆ ವಿಠ್ಠಲ ಎಂಬಾತ ನಿಗಾ ಇಟ್ಟಿದ್ದನು. ಮಹಾಂತೇಶ ಬಸ್‍ನಿಂದು ಇಳಿದು ತನ್ನ ಮನೆಗೆ ನಡೆದುಕೊಂಡು ಹೊರಟಿದ್ದನು. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ. ಆಗ ಗಿಡಗಂಟೆಯಲ್ಲಿ ಲಾಂಗ್ ಸಮೇತ ಬಸವರಾಜ್ ಅಡಗಿ ಕುಳಿತಿದ್ದ. ತಾನು ಅಡಗಿ ಕುಳಿತಿದ್ದ ಜಾಗಕ್ಕೆ ಮಹಾಂತೇಶ ಬರುತ್ತಿದ್ದಂತೆ ಲಾಂಗ್‍ನಿಂದ ಕಾಲಿಗೆ ಹೊಡೆಯುತ್ತಾನೆ. ಬಳಿಕ ದೇಹದ ವಿವಿಧ ಭಾಗಕ್ಕೆ ಹೊಡೆಯುತ್ತಾನೆ.ತೀವ್ರ ರಕ್ತ ಸ್ರಾವದಿಂದ ಮಹಾಂತೇಶ ಸ್ಥಳದಲ್ಲೇ ಮೃತನಾಗುತ್ತಾನೆ. ಬಸವರಾಜ್ ಅಲ್ಲಿಂದ ಪರಾರಿ ಆಗಿದ್ದ
ಕೊಲೆಗೈದ ಬಸವರಾಜ್ ಎಲ್ಲಿದ್ದಾನೆ ಎಂದು ವಿಠ್ಠಲನನ್ನು ಪೊಲೀಸರು ಕೇಳುತ್ತಾರೆ. ತೀವ್ರ ವಿಚಾರಣೆಗೆ ಒಳಪಡಿಸಿದಾಗ ವಿಠ್ಠಲ ಕೂಡ ಬಸವರಾಜ್ ಎಲ್ಲಿಗೆ ಹೋಗಿದ್ದಾನೆ ಎಂಬ ಮಾಹಿತಿ ನೀಡುತ್ತಾನೆ. ಮಹಾಂತೇಶ ಕೊಲೆಗೈದ ನಂತರ ತನ್ನ ಬಿಟ್ಟು ಹೋಗಿರುವ ಪತ್ನಿ ಅಕ್ಷತಾಳನ್ನೂ ಮುಗಿಸಿಬಿಡಬೇಕು ಎಂದು ಮೊದಲೇ ಬಸವರಾಜ್ ಪ್ಲ್ಯಾನ್ ಮಾಡಿಕೊಂಡಿರುತ್ತಾನೆ. ಮಹಾಂತೇಶ ಕೊಂದು ಬಳಿಕ ಬಸವರಾಜ್ ಚಿಕ್ಕೋಡಿಗೆ ಹೋಗಿರುತ್ತಾನೆ. ಲಾಂಗ್ ಸಮೇತ ಪತ್ನಿ ಮನೆ ಮುಂದೆ ನಿಂತಿರುತ್ತಾನೆ.
ವಿಠ್ಠಲ ನೀಡಿದ ಮಾಹಿತಿ ಆಧರಿಸಿ ಅಲರ್ಟ್ ಆಗುವ ಯಮಕನಮರಡಿ ಠಾಣೆ ಸಿಪಿಐ ಜಾವೇದ್ ಮುಶಾಪುರಿ, ತಕ್ಷಣವೇ ಚಿಕ್ಕೋಡಿ ಪೊಲೀಸರನ್ನು ಅಲರ್ಟ್ ಮಾಡುತ್ತಾರೆ. ಆಗ ಚಿಕ್ಕೋಡಿ ಠಾಣೆ ಪೊಲೀಸರು ಅಕ್ಷತಾ ಮನೆಗೆ ಹೋಗುತ್ತಾರೆ. ಇನ್ನೇನು ಮನೆಗೆ ಅಕ್ಷತಾಳನ್ನು ಕೊಲೆಗೈಯಬೇಕು ಎಂದುಕೊಂಡಿದ್ದ ಬಸವರಾಜ್‍ನನ್ನು ಚಿಕ್ಕೋಡಿ ಪೊಲೀಸರು ಲಾಕ್ ಮಾಡುತ್ತಾರೆ. ಬಳಿಕ ಅಕ್ಷತಾಳನ್ನು ರಕ್ಷಿಸಿ, ಮನೆಗೆ ಭದ್ರತೆ ನೀಡುತ್ತಾರೆ.
ಬಸವರಾಜ್ ಬುಕನಟ್ಟಿ ವಶಕ್ಕೆ ಪಡೆದಿದ್ದ ಚಿಕ್ಕೋಡಿ ಪೊಲೀಸರು ನಂತರ ಯಮಕನಮರಡಿ ಠಾಣೆ ಪೊಲೀಸರಿಗೆ ಹಸ್ತಾಂತರ ಮಾಡುತ್ತಾರೆ. ಆಗ ಬಸವರಾಜ್ ಮಹಾಂತೇಶನನ್ನು ಕೊಲೆ ಮಾಡಿದ್ದು ನಾನೇ, ಪತ್ನಿ ಕೊಲೆಗೂ ಪ್ಲ್ಯಾನ್ ಮಾಡಿಕೊಂಡಿರುವುದಾಗಿ ತಪ್ಪೊಪ್ಪಿಕೊಳ್ಳುತ್ತಾನೆ. ಯಮಕನಮರಡಿ ಠಾಣೆ ಪೊಲೀಸರ ಸಮಯ ಪ್ರಜ್ಞೆಯಿಂದ ಒಂದು ವಿವಾಹಿತೆಯ ಜೀವ ಉಳಿದಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.