Breaking News

ಹುಕ್ಕೇರಿ ತಾಲೂಕಿನಲ್ಲಿ ಅಭಿವೃದ್ಧಿ ಪರ್ವ

ಬೆಳಗಾವಿ-ಜನತೆ ನಾಯಕರಿದ್ದರೆ ಅವರು ಪ್ರತಿನಿಧಿಸುವ ಕ್ಷೇತ್ರ ಯಾವ ರೀತಿ ಅಭಿವೃದ್ಧಿಯಾಗಬಹುದು ಎಂಬುದಕ್ಕೆ ಹುಕ್ಕೇರಿ ಕ್ಷೇತ್ರ ಮಾದರಿಯಾಗಿದೆ.ಸಂಗಮ ಬ್ಯಾರೇಜಿಗೆ ಹೊಸ ಏತ ನೀರಾವರಿ ಯೋಜನೆ ನೀಡಲು ಸರ್ಕಾರ ಬದ್ಧವಾಗಿದೆ.ಈ ಭಾಗದ ಪ್ರಗತಿಪರ ರೈತರು ಕಬ್ಬು, ಮೆಕ್ಕೆಜೋಳ ಬೆಳೆಯುತ್ತಾರೆ.ರೈತರ ಮಕ್ಕಳಿಗೆ ವೈಜ್ಞಾನಿಕ ಶಿಕ್ಷಣ ನೀಡಲು ಇಲ್ಲಿ ಕೃಷಿ ಡಿಪ್ಲೋಮಾ ಕಾಲೇಜು ಇಲ್ಲಿ ಪ್ರಾರಂಭಿಸಲಾಗುತ್ತಿದೆ. ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ.ರಾಜ್ಯದ ಜನರ ವಿಶ್ವಾಸಕ್ಕೆ ಅನುಗುಣವಾಗಿ ಜನಪರ ಆಡಳಿತವನ್ನು ನೀಡುತ್ತೇವೆ

ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಕ್ಕೇರಿಯ ನೂತನ ನೂತನ ಬಸ್ ಘಟಕದ ಆವರಣದಲ್ಲಿ ಇಂದು ಸಂಜೆ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ,ಅಡಿಗಲ್ಲು ಹಾಗೂ ವಸತಿ ಇಲ್ಲದ ರೈತರಿಗೆ ಮನೆಗಳನ್ನು ನಿರ್ಮಿಸಲು ಸರ್ಕಾರದಿಂದ ಮಂಜೂರಾದ 20 ಎಕರೆ ಗೋಮಾಳ ಜಮೀನನ್ನು ಹುಕ್ಕೇರಿ ಪುರಸಭೆಗೆ ಹಸ್ತಾಂತರಿಸುವ ಕಾರ್ಯ ಸೇರಿ 40 ಕೋಟಿ ರೂ.ಮೊತ್ತದ ವಿವಿಧ 10 ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

.ಇಂದು ಅಡಿಗಲ್ಲು ಕಾರ್ಯಕ್ರಮಗಳಿಗಿಂತ ಉದ್ಘಾಟನೆ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ.ಉಮೇಶ ಕತ್ತಿಯವರು ತಡವಾಗಿ ಮಂತ್ರಿಯಾದರೂ ಸಹ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ಇಂದು ಗೋಚರಿಸುತ್ತಿದೆ.ಪ್ರಧಾನಿ ನರೇಂದ್ರ ಮೋದಿಯವರು ನಡೆಸುವ ಪ್ರಗತಿ ವರದಿಯಲ್ಲಿ ಉಮೇಶ ಕತ್ತಿ ಉತ್ತಮ ಸ್ಥಾನ ಪಡೆಯಲಿದ್ದಾರೆ. ಹುಕ್ಕೇರಿ ಭಾಗದಲ್ಲಿ ಅನೇಕ ಹಿರಿಯರು ಸಹಕಾರ ರಂಗದಲ್ಲಿ ಸಾಧನೆಗೈದ ಅನೇಕ ಹಿರಿಯರಿದ್ದಾರೆ, ಹುಕ್ಕೇರಿ ಇಲೆಕ್ಟ್ರಿಕಲ್ ಸಹಕಾರ ಸೊಸೈಟಿ ಸುಮಾರು 100 ಕೋಟಿ ರೂ.ಲಾಭದಲ್ಲಿರುವುದು ನಾಯಕರ ಶಿಸ್ತಿಗೆ ಸಾಕ್ಷಿಯಾಗಿದೆ. ಸಂಕೇಶ್ವರ ಸಹಕಾರ ರಂಗದ ಅಪ್ಪನಗೌಡ ಪಾಟೀಲರೊಂದಿಗಿನ ತಮ್ಮ ಕುಟುಂಬದ ಒಡನಾಟ ಸ್ಮರಿಸಿದ ಮುಖ್ಯಮಂತ್ರಿಯವರು ತಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರಿಗೆ ಇಲ್ಲಿನ ಜನ ನೀಡಿದ ಸಹಕಾರ ನೆನಪಿಸಿಕೊಂಡರು.

ಕೃಷಿ ಅಭಿವೃದ್ಧಿಯ ಜೊತೆಗೆ ಕೃಷಿಕನ ಕಲ್ಯಾಣಕ್ಕಾಗಿ ಹೆಚ್ಚು ಹಣಕಾಸನ್ನು ಕೃಷಿರಂಗದಲ್ಲಿ ತೊಡಗಿಸಲು ಉದ್ದೇಶಿಸಲಾಗಿದೆ. 20 ಲಕ್ಷ ರೈತರ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ವಿಶೇಷ ವಿದ್ಯಾರ್ಥಿ ಯೋಜನೆ ರೂಪಿಸಿ 10 ಸಾವಿರ ಕೋಟಿ ರೂ.ಮೀಸಲಿಡುವ ಮೂಲಕ ಇಡೀ ಭಾರತದಲ್ಲಿಯೇ ಕರ್ನಾಟಕ ಮಾದರಿಯಾಗಿದೆ. ಎಲ್ಲಾ ಜಾತಿ,ಜನಾಂಗಗಳ ಏಳ್ಗೆಯಾದರೆ ರಾಜ್ಯದ ಉತ್ಪಾದಕತೆ,ತಲಾ ಆದಾಯ ಹೆಚ್ಚಾಗುತ್ತದೆ . ಪ್ರಧಾನ ಮಂತ್ರಿ ನರೇಂದ್ರ ಮೋದಿ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ, ರಾಜ್ಯದ ಜನತೆಯ ವಿಶ್ವಾಸಕ್ಕೆ ಅನುಗುಣವಾಗಿ ನಾಡಿನ ಜನರ ಮನೆಗೆ ಹೂವು ತರುವ ಕೆಲಸ ಮಾಡುತ್ತೇನೆ ,ಹುಲ್ಲನಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಸಾರಿಗೆ ಹಾಗೂ ಎಸ್.ಟಿ.ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತರ ಕರ್ನಾಟಕವೂ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿರುವ ನಾಯಕರಾಗಿದ್ದಾರೆ.ಬಡವರು,ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಬಗ್ಗೆ ಕಾಳಜಿ ಹೊಂದಿದ್ದಾರೆ.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಕೂಡಲೇ ಎಸ್.ಟಿ‌.ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಅಸ್ತಿತ್ವಕ್ಕೆ ತಂದಿದ್ದಾರೆ.ಕೋವಿಡ್‌ನ ಸಂಕಷ್ಟದ ಕಾಲದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ,ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನದಿಂದಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ನಾಡಿನ ಬಹುತೇಕ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ.ಅತಿವೃಷ್ಟಿ,ಅನಾವೃಷ್ಟಿ,ಕೋವಿಡ್ ಸವಾಲುಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಸಾರಿಗೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲು ಸಂಕಲ್ಪ ಮಾಡಲಾಗಿದೆ. ನಾಲ್ಕೂ ನಿಗಮಗಳಲ್ಲಿ ಸುಧಾರಣೆ ಮಾಡಲಾಗುತ್ತಿದೆ.ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗವಹಿಸಿ ಅಮಾನತ್ತು,ವಜಾಗೊಂಡಿದ್ದ ಎಲ್ಲಾ ನೌಕರರನ್ನು ಮರಳಿ ಸೇವೆಗೆ ಸೇರಿಸಿಕೊಳ್ಳಲಾಗುತ್ತಿದೆ.ಬೊಮ್ಮಾಯಿ ಅವರು ಅಧಿಕಾರವಹಿಸಿಕೊಂಡ ನಂತರ ನಡೆದ ಮೂರು ಮಹಾನಗರಪಾಲಿಕೆ ಚುನಾವಣೆಗಳಲ್ಲಿ ಜನತೆ ಆಶೀರ್ವಾದ ಮಾಡಿದ್ದಾರೆ. ರೈತರ ಮಕ್ಕಳ ಶಿಕ್ಷಣಕ್ಕೆ ವಿಶೇಷ ವಿದ್ಯಾರ್ಥಿ ವೇತನ ನೀಡುವ ಮಹತ್ವದ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಅಭಿವೃದ್ಧಿಯನ್ನು
ಬೆಂಗಳೂರು ಕೇಂದ್ರಿತವಾಗಿಸದೇ ಸಮಗ್ರ ರಾಜ್ಯದ ಅಭಿವೃದ್ಧಿ ಮಾಡಲಾಗುವುದು ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅರಣ್ಯ,ಆಹಾರ,ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಮಾತನಾಡಿ, ಮುಂದಿನ ಚುನಾವಣೆಯ ಬಳಿಕ ಮಲ್ಲಿಕಾರ್ಜುನ ಏತ ನೀರಾವರಿ ಅನುಷ್ಠಾನದ ಮೂಲಕ ಕ್ಷೇತ್ರವನ್ನು ಸಮೃದ್ಧಿ ಮಾಡುವ ಸಂಕಲ್ಪಕ್ಕೆ ಮುಖ್ಯಮಂತ್ರಿಯವರ ಸಹಕಾರ ಬೇಕು ಎಂದರು.ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ,

ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ,ವಾಕರಸಾ ಅಧ್ಯಕ್ಷ ವಿ.ಎಸ್.ಪಾಟೀಲ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ,ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಹುಕ್ಕೇರಿ ಪುರಸಭೆ ಅಧ್ಯಕ್ಷ ಅಪ್ಪಣ್ಣ ಕೆ.ಪಾಟೀಲ, ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಮತ್ತಿತರರು ವೇದಿಕೆಯಲ್ಲಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹುಕ್ಕೇರಿ ಪುರಸಭೆ ಪೌರಸನ್ಮಾನ ನೀಡಿ ಗೌರವಿಸಿತು.

ಅರ್ಜುನವಾಡದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ವಾಗತಿಸಿದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬೆಳಗಾವಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ವಂದಿಸಿದರು.

*ಹುಕ್ಕೇರಿ ಪಟ್ಟಣದ ಕಾಮಗಾರಿಗಳು*

*4 ಕೋಟಿ ರೂ.ವೆಚ್ಚದಲ್ಲಿ ಹುಕ್ಕೇರಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ವಾಕರಸಾಸಂ ಬಸ್ ನಿಲ್ದಾಣ ಉದ್ಘಾಟನೆ

*5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ವಾಕರಸಾಸಂ ನೂತನ ಬಸ್ ಘಟಕ ಉದ್ಘಾಟನೆ

*ಎಸ್.ಟಿ.ಕಲ್ಯಾಣ ಇಲಾಖೆಯು 7.9 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಉದ್ಘಾಟನೆ

*1 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ

*5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಿರುವ ಕೃಷಿ ಡಿಪ್ಲೋಮಾ ಕಾಲೇಜು, ಬಾಲಕರ ಹಾಗೂ ಬಾಲಕಿ ವಸತಿ ನಿಲಯಗಳಿಗೆ ಅಡಿಗಲ್ಲು.

*1.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಡಾ.ಬಾಬುಜಗಜೀವನರಾಮ್ ಭವನ ಉದ್ಘಾಟನೆ.

*1 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ದೇವರಾಜ ಅರಸು ಭವನ ಉದ್ಘಾಟನೆ

*11 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಹಾಗೂ ವಿದ್ಯದ್ದೀಪಗಳ ಲೋಕಾರ್ಪಣೆ

*4 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಕ್ಯಾರಗುಡ್ಡದ ಸರ್ಕಾರಿ ಪ.ಪೂ.ಕಾಲೇಜು ಕಟ್ಟಡ ಉದ್ಘಾಟನೆ

*ವಸತಿ ಇಲ್ಲದ ರೈತರಿಗೆ ಮನೆಗಳನ್ನು ನಿರ್ಮಿಸಲು ಸರ್ಕಾರದಿಂದ ಮಂಜೂರಾದ 20 ಎಕರೆ ಗೋಮಾಳ ಜಮೀನು ಹುಕ್ಕೇರಿ ಪುರಸಭೆಗೆ ಹಸ್ತಾಂತರ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *