ಬೆಂಗಳೂರು: ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕನ್ನಡದ ಧ್ವಜವನ್ನು ರಾಜ್ಯೋತ್ಸವದ ದಿನದಂದು ಎಲ್ಲ ಕನ್ನಡಿಗರು ತಮ್ಮ ಮನೆಯ ಮೇಲೆ ಹಾರಿಸುವ ಮೂಲಕ, ಕನ್ನಡದ ಕಣ್ವ ಎಂದೇ ಖ್ಯಾತರಾದ ಬಿ.ಎಮ್,ಶ್ರೀಕಂಠಯ್ಯನವರು ರಚಿಸಿದ “*ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ*” ಎನ್ನುವಂತೆ ಅರ್ಥಪೂರ್ಣವಾಗಿ ಕನ್ನಡ ಪ್ರೇಮವನ್ನು ಮೆರೆಯೋಣ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಕರೆ* ನೀಡಿದ್ದಾರೆ.
ನವೆಂಬರ್ ೧ ರಂದು ರಾಜ್ಯೋತ್ಸವವನ್ನು ಪ್ರತಿಯೊಬ್ಬ ಕನ್ನಡಿಗರು ಸಂಭ್ರಮದಿಂದ ಆಚರಿಸುತ್ತಾರೆ. ಅದರೊಂದಿಗೆ ಈ ಬಾರಿ ಪ್ರತಿಯೊಬ್ಬ ಕನ್ನಡಿಗನೂ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ಧ್ಯೋತಕವಾದ ಕನ್ನಡದ ಧ್ವಜವನ್ನು ಸ್ವ-ಇಚ್ಛೆಯಿಂದ ಹೆಮ್ಮೆಯಿಂದ ಪ್ರತಿಯೋಬ್ಬರ ಮನೆಯ ಮೇಲೆ ಹಾರಿಸುವ ಮೂಲಕ ಕನ್ನಡದ ಹಬ್ಬವನ್ನು ಆಚರಿಸೋಣ. ನಾಡಿನಾದ್ಯಂತ ಎಲ್ಲೆಡೆಯೂ ಹಳದಿ ಕೆಂಪು ಬಣ್ಣವು ರಾರಾಜಿಸಲಿ, ಸ್ಫೂರ್ತಿಯ ಸೆಲೆ ಎಲ್ಲೆಡೆಯೂ ಪಸರಿಸಲಿ, ಎಲ್ಲರ ಮನ-ಮನೆಯಲ್ಲೂ ಕನ್ನಡತನ ಮೆರೆಯಲಿ ಎಂದು *ನಾಡೋಜ ಡಾ. ಮಹೇಶ ಜೋಶಿ* ಆಶಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡಿಗ-ಕರ್ನಾಟಕ ಎನ್ನುವ ಧ್ಯೇಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರೆಲ್ಲರೂ ಉತ್ಸಾಹದಿಂದ ಕನ್ನಡಹಬ್ಬದಲ್ಲಿ ಪಾಲ್ಗೊಂಡು ನಾಡು ನುಡಿಯ ಸಮೃದ್ಧಿ ಶ್ರೀಮಂತಿಕೆ, ಉನ್ನತಿಯನ್ನು ಮೆರೆಯೋಣ. ಈ ಸಂದರ್ಭದಲ್ಲಿ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯೋತ್ಸವವನ್ನು ವೈಭವ ಪೂರ್ಣವಾಗಿ ಆಚರಿಸಬೇಕಾಗಿದೆ ಎಂದು ಹೇಳಿದರು.