ಬೆಳಗಾವಿ- ಕೇಂದ್ರ ಗೃಹ ಸಚಿವ, ಬಿಜೆಪಿಯ ಚಾಣಕ್ಯ,ಅಮೀತ್ ಶಾ ನಾಳೆ ಬೆಳಗಾವಿಗೆ ಆಗಮಿಸಲಿದ್ದು,ಕಿತ್ತೂರು ಕ್ಷೇತ್ರದ ಮುಗುಟಖಾನ್ ಹುಬ್ಬಳ್ಳಿಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕ್ರಾಂತಿಯ ನೆಲದಿಂದ ರಾಜ್ಯದ ಬಿಜೆಪಿ ನಾಯಕರು, 2023 ರ ವಿಧಾನಸಭೆ ಚುನಾವಣೆಯ ವಿಜಯಶಾಲಿಯಾಗುವ ಸಂಕಲ್ಪ ಮಾಡಲಿದ್ದು,ಈ ವಿಜಯ ಸಂಕಲ್ಪ ಯಾತ್ರೆಗೆ ಅಮೀತ್ ಶಾ ಚಾಲನೆ ನೀಡಲಿದ್ದಾರೆ.
ನಾಳೆ ಶನಿವಾರ,ಬೆಳಗ್ಗೆ ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಯ 4-00 ಗಂಟೆಗೆ ಎಂ.ಕೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಅಭಿಯಾನದ ಸಮಾವೇಶದಲ್ಲಿ ಪಾಲ್ಗೊಂಡು,ಈ ಸಮಾವೇಶ ಮುಗಿದ ಬಳಿಕ. ಬೆಳಗಾವಿ ನಗರಕ್ಕೆ ಆಗಮಿಸಿ ಹೊಟೆಲ್ UK27 ನಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರು,ಸಂಸದರು,ಮಾಜಿ ಶಾಸಕರು,ಬಿಜೆಪಿಯ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿರುವ ಅಮೀತ್ ಶಾ ಬೆಳಗಾವಿ ಜಿಲ್ಲೆಯ ಬಿಜೆಪಿ ಸಂಘಟನೆ,ಹಾಗೂ ಮುಂದಿನ ವಿಧಾನಸಭೆ ಚುನಾವಣೆಯ ಕುರಿತು ಚರ್ಚೆ ಮಾಡಲಿದ್ದಾರೆ. ಈ ಸಭೆ ಮುಗಿದ ಬಳಿಕ ಅಮೀತ್ ಶಾ ಅವರು ಶನಿವಾರ ರಾತ್ರಿಯೇ ದೆಹಲಿಗೆ ತೆರಳಲಿದ್ದಾರೆ.
ನಾಳೆ ಎಂ.ಕೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಅಮೀತ್ ಶಾ ಅವರ ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಮಾಜಿ ಸಿಎಂ ಯಡಿಯೂರಪ್ಪ, ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.
ಅಮೀತ್ ಶಾ ಅವರು ನಾಳೆ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸಿದೆ. ಕಿತ್ತೂರು,ಖಾನಾಪೂರ, ಬೈಲಹೊಂಗಲ, ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಗಳಿಗೆ ಹತ್ತಿರವಾಗುವ,ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಎಂ.ಕೆ ಹುಬ್ಬಳ್ಳಿಯಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಯುತ್ತಿರುವುದು ವಿಶೇಷ.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ಇವರು ಎಂ.ಕೆ ಹುಬ್ಬಳ್ಳಿಯ ವಿಜಯ ಸಂಕಲ್ಪ ಯಾತ್ರೆಯ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ನಡೆಸಿದ್ದಾರೆ.