ಬೆಳಗಾವಿ- ಬೆಳಗಾವಿ ಗಡಿವಿವಾದದ ಕುರಿತು ನವೆಂಬರ್ 23 ರಂದು ಸುಪ್ರೀಂ ಕೋರ್ಟಿನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಡ್ರ ಸರ್ಕಾರ ಮುಂಬಯಿ ನಲ್ಲಿ ಸರ್ವಪಕ್ಷಗಳ ಸಭೆ ನಡೆಸಿದ ಬೆನ್ನಲ್ಲಿಯೇ ಕರ್ನಾಟಕ ಸರ್ಕಾರವೂ ಎಚ್ಚೆತ್ತುಕೊಂಡಿದ್ದು ಇದೇ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಂಗಳೂರಿನಲ್ಲಿ ತುರ್ತು ಸಭೆ ನಡೆಸಿದ್ದಾರೆ.
ಕರ್ನಾಟಕದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಅವರನ್ನು ತುರ್ತಾಗಿ ಕರೆಯಿಸಿ ರೇಸ್ ಕೋರ್ಸಿನ ನಿವಾಸದಲ್ಲಿ ಸಭೆ ನಡೆಸಿದ ಸಿಎಂ ಬಸವರಾಜ್ ಬೊಮ್ಮಾಯಿ ಬೆಳಗಾವಿ ಗಡಿ ವಿವಾದದ ಕುರಿತು ಸುಧೀರ್ಘ ಚರ್ಚೆ ಮಾಡಿದ್ದಾರೆ.
ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಸಿಎಂ ಗಡಿವಿವಾದ ಮಹಾರಾಷ್ಟ್ರದಲ್ಲಿ ರಾಜಕೀಯ ವಸ್ತುವಾಗಿದೆ.ಈ ವಿಚಾರದಲ್ಲಿ ಮಹಾರಾಷ್ಡ್ರ ಸರ್ಕಾರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ,ನಾಡು ನುಡಿ ನೆಲ ಜಲದ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ನವೆಂಬರ್ 23 ರಂದು ಸುಪ್ರೀಂ ಕೋರ್ಟಿನಲ್ಲಿ ಪ್ರಬಲ ವಾದ ಮಂಡಿಸಲು ಮುಘುಲ್ ರೋಹಟಗಿ ನೇತ್ರತ್ವದಲ್ಲಿ ಸಮೀತಿ ರಚಿಸಿದ್ದೇವೆ ಎಂದು ಸಿಎಂ ಹೇಳಿದ್ರು.ನಾಳೆ ಕಾನೂನು ತಜ್ಞರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಮಾಡುತ್ತೇವೆ.ಗಡಿ ರಕ್ಷಣೆಯ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕಾನೂನು ತಜ್ಞರ ಜೊತೆ ಬೆಳಗಾವಿ ಗಡಿವಿವಾದದ ಕುರಿತು ಈಗಾಗಲೇ ಚರ್ಚೆ ಮಾಡಿದ್ದೇವೆ.ಕಾನೂನು ತಜ್ಞರು ರಾಜ್ಯದ ಪರವಾಗಿ ಪ್ರಬಲ ವಾದ ಮಂಡಿಸಲು ಸಿದ್ಧರಿದ್ದಾರೆ.ಅದಕ್ಕಾಗಿಯೇ ಒಂದು ಟೀಂ ರೆಡಿಯಾಗಿದೆ.ಮಹಾರಾಷ್ಟ್ರ ಸರ್ಕಾರ ಈ ರೀತಿ ಆಗಾಗ್ಗೆ ಕ್ಯಾತೆ ತೆಗೆಯುತ್ತಲೇ ಇದೆ,ಈ ಹಿಂದೆಯೂ ಏನೂ ಆಗಿಲ್ಲ,ಮುಂದೆಯೂ ಏನೂ ಆಗೋದಿಲ್ಲ ಗಡಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಪಕ್ಷದ ನಾಯಕರಿಗೂ ಮಾಹಿತಿ ತಿಳಿಸುತ್ತೇವೆ ಎಂದು ಸಿಎಂ ಹೇಳಿದ್ರು.