ಬೆಳಗಾವಿ-ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೆಯ ದಿನಕ್ಕೆ ಕಾಲಿಟ್ಟಿದೆ.
ಎರಡು ದಿನಗಳ ಕಾಲ ಅಹೋರಾತ್ರಿ ನಡೆದಿರುವ ಹೋರಾಟ ,ಇವತ್ತು ಮೂರನೇಯ ದಿನವೂ ಯಶಸ್ವಿಯಾಗಿ ಮುಂದುವರೆದಿದೆ,ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಇವತ್ತೂ ಬಸ್ ಗಳ ಭರಾಟೆ ಇಲ್ಲ,ಪ್ರಯಾಣಿಕರ ಗಲಾಟೆಯ ಸದ್ದು ಇಲ್ಲ. ಇಲ್ಲಿ ಏನಿದ್ದರೂ ಹೋರಾಟದ ಕಿಚ್ಚು ಕೇಳಿಸುತ್ತಿದೆ.
ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸಾರಿಗೆ ನೌಕರರ ಕುಟುಂಬಸ್ಥರೂ ಭಾಗಿಯಾಗಿದ್ದು ಇಂದು ಭಾನುವಾರ ಹೋರಾಟ ಮತ್ತಷ್ಟು ರಂಗೇರಿದೆ.
ಒಂದು ಕಡೆ ಹೋರಾಟ ಮುಂದುವರೆದರೆ ಇನ್ನೊಂದು ಕಡೆ ಪ್ರಯಾಣಿಕರ ಪರದಾಟವೂ ಮುಂದುವರೆದಿದೆ.ಇವತ್ತೂ ಬಸ್ ಓಡಾಟ ಇಲ್ಲದ ಕಾರಣ ಪ್ರಯಾಣಿಕರು ಖಾಸಗಿ ಬಸ್ ಗಳತ್ತ ಕೈ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಮತ್ತು ಹುಬ್ಬಳ್ಳಿ ಧಾರವಾಡಗೆ ಹೋಗುವ ಪ್ರಯಾಣಿಕರು ನ್ಯಾಷನಲ್ ಹೈವೇಯಲ್ಲಿ ಲಾರಿಗಳಿಗೆ,ಲಕ್ಷರಿ ಬಸ್ ಗಳಿಗೆ ಕೈ ಮಾಡುವ ದೃಶ್ಯ ಸಾಮಾನ್ಯವಾಗಿದೆ.
ಗೋವಾಗೆ ಹೋಗಲಿರುವ ಪ್ರಯಾಣಿಕರು ಖಾನಾಪೂರ ರಸ್ತೆ,ಜಾಂಬೋಟಿ ರಸ್ತೆಗಳಲ್ಲಿ ವಾಹನಗಳಿಗೆ ಕೈ ಮಾಡುತ್ತಿದ್ದಾರೆ.
ಕೆಲವು ಮ್ಯಾಕ್ಸಿಕ್ಯಾಬ್ ಗಳು ಅಶೋಕ ವೃತ್ತದಲ್ಲಿ ನಿಂತು,ಬೆಳಗಾವಿ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗುವ ಪ್ರಯಾಣಿಕರನ್ನು ಸಾಗಿಸುತ್ತಿವೆ.ಸಿಟಿ ಬಸ್ ಸಂಚಾರ ಇಲ್ಲದಿರುವದರಿಂದ,ಬೆಳಗಾವಿ ನಗರದಲ್ಲಿ ಟಂ ಟಂ ಗಳ ಓಡಾಟ ಜೋರಾಗಿದೆ.ಅವರ ಸಂಪಾದನೆಯೂ ಹೆಚ್ಚಾಗಿದೆ.
ಇಂದು ಸಂಡೇ ಬೆಳಗಾವಿ ಬಸ್ ನಿಲ್ಧಾಣ ಪ್ರಯಾಣಿಕರು ಇಲ್ಲದೇ ಬಿಕೋ ಎನ್ನುತ್ತಿದ್ದರೆ,ಬಸ್ ಗಳ ಓಡಾಟವಿಲ್ಲದೇ ಪ್ರಯಾಣಿಕರು ಹೊಯ್ಕೋ ಎನ್ನುವಂತಾಗಿದೆ.