ಬೆಳಗಾವಿ ಬಸ್ ನಿಲ್ದಾಣಕ್ಕೆ ಕೊನೆಗೂ ಅಭಿವೃದ್ಧಿ ಭಾಗ್ಯ ಒದಗಿ ಬಂದಿದೆ. ಇಷ್ಟು ದಿನ ಸೊರಗಿದ ರೋಗಿಯಂತೆ ಕಾಣುತ್ತಿದ್ದ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಸದ್ಯದರಲ್ಲಿಯೇ ಹೈಟೆಕ್ ಸ್ಟರ್ಶ ದೊರೆಯಲಿದೆ. ಶುಕ್ರವಾರ ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಬಸ್ ನಿಲ್ದಾಣದ ಅಭಿವೃದ್ದಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಇನ್ ನ್ಯೂಸ್ ವಾಹಿನಿಯಲ್ಲಿ ಸರಣಿ ವರದಿಗಳು ಪ್ರಸಾರವಾಗಿದ್ದವು. ಆದರೂ ಸಾರಿಗೆ ಇಲಾಖೆ ಜಾಣ ಮೌನ ವಹಿಸಿತ್ತು. ಬಸ್ ನಿಲ್ದಾಣದ ಅಭಿವೃದ್ಧಿಗಾಗಿ ಅನೇಕ ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಅಧಿಕಾರಗಳ ನಿರ್ಲಕ್ಷ ಹಾಗೂ ಸೋಂಬೇರಿತನಕ್ಕೆ ಹಾಕಿದ ಯೋಜನೆಗಳೆಲ್ಲ ವಿಫಲವಾಗಿದ್ದವು. ದಿನನಿತ್ಯ ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬರುವ ಸಾವಿರಾರು ಪ್ರಯಾಣಿಕರು ಇದರ ದುರಾವಸ್ಥೆ ನೋಡಿ ಬೇಸತ್ತು ಹೋಗಿದ್ದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಂದು ಪರಿಸ್ಥಿತಿ ಅವಲೋಕಿಸಿ ಅಭಿವೃದ್ಧಿ ಮಾಡುವ ಭರವಸೆ ನೀಡಿ ಹೋದರೇ ವಿನಃ ಕೆಸ ಮಾತ್ರ ಆಗಿರಲಿಲ್ಲ. ಆದರೆ ಸಾರ್ವಜನಿಕರ ತೀವ್ರ ವಿರೋಧದ ನಡುವೆ ಸರ್ಕಾರ ಕೊನೆಗೂ ಕಣ್ತೆರೆದುಕೊಂಡಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣವನ್ನು ಹೈಟೆಕ್ ಮಾಡುವ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಬೆಳಿಗ್ಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಗ್ರಾಮೀಣ ಸಂಚಾರ, ಹೊರಸಂಚಾರ, ಹಾಗೂ ನಗರ ಸಂಚಾರಗಳಿಗೆ ಹೈಟೆಕ್ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಜಾಗ ನೀಡುವ ಸಾಧ್ಯತೆಗಳಿವೆ. ನಗರದ ಹೃದಯ ಭಾಗದಲ್ಲಿರುವ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಶೀಘ್ರದಲ್ಲೇ ಹೈಟೆಕ್ ರೂಪ ಪಡೆದು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಲಿದೆ.