ಕಸ ವಿಲೇವಾರಿಗೆ ಸಹಕರಿಸಲು ಸಾರ್ವಜನಿಕರಿಗೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಮನವಿ
ಬೆಳಗಾವಿ, -ಸಾರ್ವಜನಿಕರು ತಮ್ಮಲ್ಲಿ ಉತ್ಪತ್ತಿಯಾಗುವ ದೈನಂದಿನ ತ್ಯಾಜ್ಯವನ್ನು ಹಸಿ ಕಸ, ಒಣ ಕಸ & ಅಪಾಯಕಾರಿ ತ್ಯಾಜ್ಯವೆಂದು ಬೇರ್ಪಡಿಸಿ ಕಸ ಸಂಗ್ರಹಣಕಾರರಿಗೆ ನೀಡುವುದರೊಂದಿಗೆ ಬೆಳಗಾವಿ ನಗರವನ್ನು ಸ್ವಚ್ಛ ನಗರವನ್ನಾಗಿಸುವಲ್ಲಿ ಹಾಗೂ ಘನತ್ಯಾಜ್ಯ ವಸ್ತು ವಿಲೇವಾರಿ ನಿಯಮ 2016 ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ವತಿಯಿಂದ ಮನೆ-ಮನೆ ಕಸ ಸಂಗ್ರಹಣೆ ಕುರಿತು ವಾರ್ಡವಾರು ಅವಶ್ಯಕತೆಯನುಸಾರ ಬೆಳಿಗ್ಗೆ ರಹವಾಸಿ ಪ್ರದೇಶಗಳಲ್ಲಿ ಹಾಗೂ ಸಂಜೆ ಸಮಯದಲ್ಲಿ ವಾಣಿಜ್ಯ ಪ್ರದೇಶಗಳಲ್ಲಿ ಕಸವನ್ನು ಸಂಗ್ರಹಿಸಲು ವಾಹನಗಳನ್ನು ನಿಯೋಜಿಸಿದ್ದು, ಸಾರ್ವಜನಿಕರು ತಮ್ಮ ಮನೆಯಲ್ಲಿಯ ದೈನಂದಿನ ತ್ಯಾಜ್ಯವನ್ನು ಪಾಲಿಕೆ ವತಿಯಿಂದ ನಿಯೋಜಿಸಿದ ವಾಹನಗಳಿಗೆ ನೀಡುತ್ತಾರೆ.
ಆದರೆ ನಿರೀಕ್ಷಿತ ಮಟ್ಟದಲ್ಲಿ ನಿಯೋಜಿಸಿದ ವಾಹನಗಳಿಗೆ ತ್ಯಾಜ್ಯವನ್ನು ನೀಡಲಾಗುತ್ತಿಲ್ಲ. ಅದರಂತೆ ಕೆಲವೊಂದು ಸಾರ್ವಜನಿಕರು ಹಾಗೂ ವಾಣಿಜ್ಯ ಅಂಗಡಿ ಮಾಲಿಕರು ತಮ್ಮ ಮನೆಯಲ್ಲಿ ಅಥವಾ ಅಂಗಡಿಗಳಲ್ಲಿ ಉತ್ಪತ್ತಿಯಾಗಿರುವ ಕಸವನ್ನು ರಸ್ತೆ ಬದಿಯಲ್ಲಿ ಹಾಗೂ ಖುಲ್ಲಾ ಜಾಗೆಗಳಲ್ಲಿ ಹಾಕುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಇದರಿಂದ ನಗದ ಸೌಂದರ್ಯದ ಮೇಲೆ ಹಾಗೂ ನಗರವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.
ಘನತ್ಯಾಜ್ಯ ವಸ್ತು ವಿಲೇವಾರಿ ನಿಯಮ 2016 ರನ್ವಯ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ನಿರ್ದೇಶನಗಳನ್ವಯ ಎಲ್ಲಾ ಸಾರ್ವಜನಿಕರು ತಮ್ಮಲ್ಲಿ ಉತ್ಪತ್ತಿಯಾಗುವ ದೈನಂದಿನ ತ್ಯಾಜ್ಯವನ್ನು ಹಸಿ ಕಸ, ಒಣ ಕಸ & ಅಪಾಯಕಾರಿ ತ್ಯಾಜ್ಯವೆಂದು ಬೇರ್ಪಡಿಸಿ ಕಸ ಸಂಗ್ರಹಣಕಾರರಿಗೆ ನೀಡುವುದು ಕಡ್ಡಾಯವಾಗಿರುತ್ತದೆ.
ಸದರಿ ನಿಯಮಗಳನ್ನು ಉಲ್ಲಂಘಿಸಿರುವವರ ವಿರುದ್ಧ ಘನತ್ಯಾಜ್ಯ ವಸ್ತು ವಿಲೇವಾರಿ ಉಪನಿಯಮಗಳನ್ವಯ ದಂಡವಿಧಿಸಲಾಗುವುದು ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿರುವ ಖಾಸಗಿ ಖುಲ್ಲಾ ಜಾಗೆಯ ಸ್ವಚ್ಛತೆ ಸ್ವತಃ ಮಾಲೀಕರೇ ಕೈಗೊಳ್ಳಬೇಕು.
ತಪ್ಪಿದಲ್ಲಿ ಪಾಲಿಕೆ ವತಿಯಿಂದ ಖಾಸಗಿ ಖುಲ್ಲಾ ಜಾಗೆಯನ್ನು ಸ್ವಚ್ಛಗೊಳಿಸಿ ಸದರಿ ಜಾಗೆಯ ಮಾಲೀಕರ ಕರವಸೂಲಿಯಲ್ಲಿ ಸ್ವಚ್ಛತೆಗೆ ತಗುಲಿದ ವೆಚ್ಚವನ್ನು ಸೇರಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***