ನಾಗರಿಕರ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ, ಜೂ.7(ಕರ್ನಾಟಕ ವಾರ್ತೆ): ಸ್ಮಾರ್ಟ್ ಸಿಟಿ ಯೋಜನೆಯ ಸಮರ್ಪಕ ಅನುಷ್ಠಾನ; ಕುಡಿಯುವ ನೀರು ಸರಬರಾಜು; ಆರೋಗ್ಯ ಸೌಲಭ್ಯ, ಕಸ ವಿಲೇವಾರಿ; ಸ್ಮಶಾನ ಅಭಿವೃದ್ಧಿ, ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬುಧವಾರ (ಜೂ.7) ನಡೆದ ಸ್ಮಾರ್ಟ್ ಸಿಟಿ, ಕುಡಿಯುವ ನೀರು ಸರಬರಾಜು, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರ ಸಮಸ್ಯೆಗಳನ್ನು ಅರಿತುಕೊಂಡು ಅವುಗಳನ್ನು ಪರಿಹರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸ್ಮಾರ್ಟ್ ಸಿಟಿ, ಹೆಸ್ಕಾಂ ಸೇರಿದಂತೆ ಪ್ರಮುಖ ಇಲಾಖೆಯ ಪ್ರತ್ಯೇಕವಾದ ಸಭೆ ನಡೆಸಲಾಗುವುದು.
ಅಧಿಕಾರಿಗಳಿಗೆ ಸ್ವಲ್ಪಮಟ್ಟಿಗೆ ಸಮಯ ನೀಡಲಾಗುವುದು. ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಬೇಕು. ಮಹಾನಗರ ಪಾಲಿಕೆಯ ಸದಸ್ಯರು ತಿಳಿಸಿದ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಬೇಕು ಎಂದರು.
ಶಾಹು ಮಹಾರಾಜರ ಪುತ್ಥಳಿ ಸ್ಥಾಪನೆಗೆ ಸೂಚನೆ:
ಬೆಳಗಾವಿ ನಗರದಲ್ಲಿ ಶಾಹು ಮಹಾರಾಜರ ಪುತ್ಥಳಿ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ನೀಡಲಾಗಿದೆ. ಪುತ್ಥಳಿ ನಿರ್ಮಾಣ ಕೆಲಸ ತಕ್ಷಣವೇ ಆಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಕ್ರೀಡಾಸಂಕೀರ್ಣ, ಈಜುಕೊಳ ಮತ್ತಿತರ ಕಾಮಗಾರಿಗಳು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಜನರ ಬಳಕೆಗೆ ಮುಕ್ತಗೊಳಿಸಬೇಕು.
ಸಭೆಯಲ್ಲಿ ಜನರು ಸಲ್ಲಿಸಿದ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಪರಿಹರಿಸಬೇಕು. ಉತ್ತಮ ಸಲಹೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಬೆಳಗಾವಿ ನಗರ ಪ್ರವೇಶಿಸುವ ಮಾರ್ಗದಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ಇದನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು.
ವ್ಯಾಪಾರಸ್ಥರು, ಅಂಗಡಿಕಾರರು ರಾತ್ರಿ ವೇಳೆ ನಿಗದಿತ ಸ್ಥಳ ಹೊರತುಪಡಿಸಿ ಇತರೆಡೆ ಕಸ ಎಸೆದರೆ ಅಂತಹವರ ಮೇಲೆ ನಿಗಾವಹಿಸಿ ದಂಡ ವಿಧಿಸಬೇಕು ಎಂದು ಸೂಚನೆ ನೀಡಿದರು.
ಹಿಂದೆ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ ವಂತಿಕೆಯನ್ನು ತುಂಬಿದ ಫಲಾನುಭವಿಗಳು ಈಗ ಕಾರಣಾಂತರದಿಂದ ವಸತಿ ಸೌಲಭ್ಯ ಬೇಡ ಎಂದು ವಂತಿಕೆ ಹಣ ಹಿಂದಿರುಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದರೆ ಅಂತವರಿಗೆ ವಂತಿಗೆ ಹಣ ಹಿಂದಿರುಗಿಸಲು ಒಂದು ತಿಂಗಳಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಜಾರಕಿಹೊಳಿ ಹೇಳಿದರು.
ಕಾಕತಿ ಕೆಲವು ಭಾಗವು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುತ್ತಿದ್ದು, ತೆರಿಗೆ ಕಟ್ಟಿದರೂ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಈ ಸಮಸ್ಯೆ ಪರಿಹಾರ ಕಂಡುಹಿಡಿಯುವಂತೆ ತಿಳಿಸಿದರು.
ಅಕ್ರಮ-ಸಕ್ರಮ ಯೋಜನೆಯಡಿ ಅವಕಾಶಗಳಿದ್ದರೆ ಪರಿಶೀಲಿಸುವಂತೆ ಹೇಳಿದರು.
ವಾರ್ಡ್ ಸಮಿತಿಗಳನ್ನು ರಚಿಸಲು ಸೂಚನೆ:
ವಾರ್ಡ್ ಸಮಿತಿಗಳು ಇನ್ನೂ ರಚನೆಯಾಗದಿರುವ ಕುರಿತು ಮಾಹಿತಿಯನ್ನು ಪಡೆದುಕೊಂಡ ಅವರು, ಮುಂದಿನ ಒಂದು ತಿಂಗಳಿನಲ್ಲಿ ವಾರ್ಡ್ ಸಮಿತಿ ರಚಿಸುವಂತೆ ತಿಳಿಸಿದರು.
ಬೆಳಗಾವಿ ನಗರದಲ್ಲಿ ನಿರಂತರ ನೀರು(24×7) ಸರಬರಾಜು ಮಾಡುವ ಯೋಜನೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಭೆ ನಡೆಸಿ ಕಾಮಗಾರಿಗಳನ್ನು ಚುರುಕುಗೊಳಿಸಲು ಹಾಗೂ ಸಮರ್ಪಕವಾಗಿ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಪೌರಕಾರ್ಮಿಕರ ಆಯ್ಕೆಯ ಪಟ್ಟಿ ಸಿದ್ಧವಾಗಿದ್ದರೆ ಕೂಡಲೇ ನೇಮಕಾತಿ ಆದೇಶ ನೀಡಬೇಕು ಎಂದು ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.
155 ಪೌರಕಾರ್ಮಿಕರ ನೇಮಕಾತಿ ಆದೇಶವನ್ನು ಒಂದೇ ಹಂತದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಕೆಲವು ಕಡೆಗಳಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡುವಾಗ ಕೇವಲ ಹತ್ತು ಅಡಿ ರಸ್ತೆ ಮಾಡಲಾಗುತ್ತಿದ್ದು, ಇದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅನುಕೂಲವಾಗುವಂತೆ ನಗರದಲ್ಲಿ ಇರುವ ಎಲ್ಲ ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸಬೇಕು; ಅಗತ್ಯವಿದ್ದರೆ ದುರಸ್ತಿಗೊಳಿಸಬೇಕು. ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸಬೇಕು ಎಂದು ತಿಳಿಸಿದರು.
ಬೀದಿನಾಯಿಗಳ ನಿಯಂತ್ರಣಕ್ಕೆ ನಿಯಮಾವಳಿ ಪ್ರಕಾರ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು.
ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ. ನಾಲ್ಕೂ ದಿಕ್ಕುಗಳಲ್ಲಿ ಒಂದೊಂದು ಘಟಕಗಳನ್ನು ಸ್ಥಾಪಿಸುವ ಬಗ್ಗೆ ಗಂಭೀರವಾಗಿ ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.
ನಗರದಲ್ಲಿ ಎಲ್ಲ ಕಡೆಯೂ ಎಲ್.ಇ.ಡಿ. ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಕೆಲವು ಕಡೆಗಳಲ್ಲಿ ಕಡಿಮೆ ಸಾಮರ್ಥ್ಯದ ದೀಪ ಅಳವಡಿಸಿರುವುದರಿಂದ ಸಮರ್ಪಕವಾಗಿ ಬೆಳಕು ದೊರಕುತ್ತಿಲ್ಲ. ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪ್ರವೇಶ ಮಾರ್ಗದಲ್ಲಿ ಇರುವ ಕಸದ ರಾಶಿಯನ್ನು ತೆರವುಗೊಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ನಾಲ್ಕು ಕಡೆಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಕೂಡಲೇ ಪ್ರಸ್ತಾವ ಸಿದ್ಧಪಡಿಸಬೇಕು. ಸರಕಾರದಿಂದ ಅಗತ್ಯವಿರುವ ಅನುಮೋದನೆ ಕೊಡಿಸಲಾಗುವುದು ಎಂದರು.
ನಗರದಲ್ಲಿ ಆರಂಭಿಸಲಾಗಿರುವ ಆರು ಇಂದಿರಾ ಕ್ಯಾಂಟೀನ್ ಗಳು ಯಾವ ರೀತಿ ನಡೆಸಲಾಗುತ್ತದೆ ಎಂದು ಪ್ರಶ್ನಿಸಿದ ಅವರು, ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಜನರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು.ಕುಟುಂಬ ಸಮೇತ ಅನೀರಿಕ್ಷಿತ ಭೇಟಿ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಆಸ್ತಿ ತೆರಿಗೆ, ಕಟ್ಟಡ ನಿರ್ಮಾಣ ಪರವಾನಿಗೆ ಹಾಗೂ ಸಿಸಿ ನೀಡುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಇವುಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆಯ ಆಯುಕ್ತರಿಗೆ ಶಾಸಕ ಆಸೀಫ್(ರಾಜು) ಸೇಠ್ ನಿರ್ದೇಶನ ನೀಡಿದರು.
ನಿರಂತರ ನೀರು(24×7) ಯೋಜನೆ ಕಾಮಗಾರಿ ವಿಳಂಬ ಹಾಗೂ ನೀರು ಸರಬರಾಜು ವ್ಯವಸ್ಥೆಯಲ್ಲಿ ಆಗುತ್ತಿರುವ ತೊಂದರೆಗಳನ್ನು ವಿವರಿಸಿದ ಶಾಸಕ ಸೇಠ್ ಅವರು, ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಲ್.ಅಂಡ್ ಟಿ ಕಂಪನಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಮೂಲ ಪ್ಲ್ಯಾನ್ ಒದಗಿಸಲು ಸೂಚನೆ:
ಸ್ಮಾರ್ಟ್ ಸಿಟಿ ಯೋಜನೆಯ ಬಹುತೇಕ ಕಾಮಗಾರಿಗಳು ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಮಾತ್ರ ಹೆಚ್ಚಿನ ಕೆಲಸ ಕೈಗೆತ್ತಿಕೊಳ್ಳಲಾಗಿದೆ ಎಂಬ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಮಾತನಾಡಿದ ಶಾಸಕ ಸೇಠ್ ಅವರಯ, ಸ್ಮಾರ್ಟ್ ಸಿಟಿ ಯೋಜನೆಯ ಮೂಲ ರೂಪುರೇಷೆ ಏನಿತ್ತು ಮತ್ತು ನಂತರ ಮಾಡಲಾದ ಬದಲಾವಣೆಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ನಾಗರಿಕ ರಾಜೀವ್ ಟೋಪಣ್ಣವರ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಹಾಗೂ ಥರ್ಡ್ ಪಾರ್ಟಿ ಇನ್ಸಪೆಕ್ಷನ್ ಜವಾಬ್ದಾರಿಯನ್ನು ಐಐಟಿ ಅಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸಿದಗೌಡ ಮೋದಗಿ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಕೂಡ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಮಗಾರಿ ಗುಣಮಟ್ಟ ಪರಿಶೀಲಿಸಲು ಒತ್ತಾಯ:
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮುಂಚೆಯಿಂದಲೂ ದೂರುಗಳು ಬಂದಾಗ ಪರಿಶೀಲಿಸಲಾಗಿದೆ. ಈಗಲೂ ಯಾವುದೇ ಕಾಮಗಾರಿಗಳ ಬಗ್ಗೆ ದೂರುಗಳಿದ್ದರೆ ಅವುಗಳ ಬಗ್ಗೆ ಯಾವುದೇ ಸಂಸ್ಥೆಯಿಂದಲಾದರೂ ಸೂಕ್ತ ತನಿಖೆ ನಡೆಸಬಹುದು ಎಂದು ಶಾಸಕ ಅಭಯ್ ಪಾಟೀಲ ತಿಳಿಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಒಟ್ಟಾರೆ 470 ಕೋಟಿ ರೂಪಾಯಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಹಾಗೂ ಕಾನೂನುಬಾಹಿರ ಕೆಲಸಗಳ ಬಗ್ಗೆ ಸಾರ್ವಜನಿಕರಲ್ಲಿನ ತಪ್ಪು ಕಲ್ಪನೆ ದೂರ ಮಾಡಲು ಸಮಗ್ರವಾದ ತನಿಖೆ ಸರಕಾರ ನಡೆಸಬೇಕು ಎಂದು ಅಭಯ್ ಪಾಟೀಲ ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ವಸತಿ ಯೋಜನೆ ಸೇರಿದಂತೆ ಯಾವುದೇ ಯೋಜನೆಯ ಸೌಲಭ್ಯಗಳನ್ನು ಕಲ್ಪಿಸುವಾಗ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯ ವಾರ್ಡುಗಳನ್ನು ಏಕೆ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು.
ನಿರಂತರ ನೀರು ಯೋಜನೆ ಮಹತ್ವದ ಯೋಜನೆಯಾಗಿದ್ದು, ಸಾರ್ವಜನಿಕರು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ತಾಂತ್ರಿಕ ಕಾರಣಗಳಿಂದ ಎಲ್ ಅಂಡ್ ಟಿ ಕಂಪೆನಿಗೆ ದಂಡ ವಿಧಿಸುವುದು ಸಮಂಜಸವಲ್ಲ ಎಂದರು. ಇದಕ್ಕಾಗಿ ಪ್ರತ್ಯೇಕ ಸಭೆ ಕರೆದು ಕಾಮಗಾರಿಗಳ ಸಮರ್ಪಕವಾಗಿ ಅನುಷ್ಠಾನಕ್ಕೆ ಪ್ರಯತ್ನಿಸೋಣ ಎಂದು ಹಟ್ಟಿಹೊಳಿ ಹೇಳಿದರು.
ವಸತಿ ಯೋಜನೆಯಡಿ ಆಯ್ಕೆ ಮಾಡಿರುವ ಫಲಾನುಭವಿಗಳು ನಿಗದಿತ ಕಂತು ತುಂಬದಿರುವ ಅಥವಾ ಅನರ್ಹ ಫಲಾನುಭವಿಗಳನ್ನು ಕೈಬಿಟ್ಟು ಹೊಸ ಪಟ್ಟಿ ಸಿದ್ಧಪಡಿಸಲು ಸಾಧ್ಯವಾದರೆ ಗ್ರಾಮೀಣ ಮತಕ್ಷೇತ್ರದ ವಾರ್ಡುಗಳ ಜನರನ್ನು ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ…
ನಗರದಲ್ಲಿ ಖಾಲಿ ಇರುವ ವಿದ್ಯುತ್ ಕಂಬಗಳಿಗೆ ಹೆಚ್ಚುವರಿ 9 ಸಾವಿರ ಎಲ್.ಇ.ಡಿ. ದೀಪಗಳನ್ನು ಅಳವಡಿಸಲು ಪ್ರಸ್ತಾವ ಸರಕಾರಕ್ಕೆ ಕಳಿಸಲಾಗಿದೆ. ಅನುಮೋದನೆ ದೊರೆತ ತಕ್ಷಣವೇ ದೀಪ ಅಳವಡಿಸಲಾಗುವುದು ಎಂದರು.
ಮಹಾಪೌರರಾದ ಶೋಭಾ ಸೋಮನಾಚೆ, ಉಪ ಮಹಾಪೌರರಾದ ರೇಷ್ಮಾ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಕೆಯುಐಡಿಎಫ್ ಸಿ ಜಂಟಿ ನಿರ್ದೇಶಕರಾದ ಪದ್ಮಾ ಮತ್ತಿತರರು ಉಪಸ್ಥಿತರಿದ್ದರು.
ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ಕೆಯುಐಡಿಎಫ್ ಸಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು. ಅಹವಾಲುಗಳನ್ನು ಕೂಡ ಸಲ್ಲಿಸಿದರು.
ಸಭೆಯ ಬಳಿಕ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಮಹಾನಗರ ಪಾಲಿಕೆಯ ವತಿಯಿಂದ ಮಹಾಪೌರರು ಮತ್ತು ಉಪ ಮಹಾಪೌರರು ಸನ್ಮಾನಿಸಿದರು.
***