Breaking News

ರಮೇಶ ಕತ್ತಿ ಕಾಂಗ್ರೆಸ್ ಸೇರ್ತಾರೆ,ಲೋಕಸಭೆಗೆ ಚಿಕ್ಕೋಡಿಯಿಂದ ನಿಲ್ತಾರೆ…!!

ಬೆಳಗಾವಿ: ಜಿಲ್ಲೆಯ ರಾಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆ ಇದ್ದು, ಬಿಜೆಪಿ ಮುಖಂಡ, ಮಾಜಿ ಸಂಸದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

ವಿಧಾನಸಭೆ ಕದನದ ಬಳಿಕ ಈಗ ಮುಂಬರುವ ಲೋಕಸಭೆ ಕದನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಕಣ ಸಿದ್ದಗೊಳಿಸುತ್ತಿದ್ದು, ಜಿಲ್ಲೆಯಲ್ಲಿ ೧೧ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಈ ಬಾರಿ ಜಿಲ್ಲೆಯ ಎರಡೂ ಲೋಕಸಭಾ ಸ್ಥಾನಗಳನ್ನು ಬಿಜೆಪಿಯಿಂದ ಕಸಿದುಕೊಳ್ಳಲು ರಣತಂತ್ರ ರೂಪಿಸುತ್ತಿದೆ.

ಇದರ ಭಾಗವಾಗಿ ಚಿಕ್ಕೋಡಿ ಭಾಗದ ಪ್ರಭಾವಿ ಮುಖಂಡರೊಬ್ಬರಿಗೆ ಕಾಂಗ್ರೆಸ್ ಗಾಳ ಹಾಕಿದ್ದು, ಪಕ್ಷಕ್ಕೆ ಸೆಳೆದು ಅವರನ್ನು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕೈ ಅಭ್ಯರ್ಥಿಯಾಗಿಸುವ ಚಿಂತನೆ ನಡೆದಿದೆ.
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ೮ ಕ್ಷೇತ್ರಗಳ ಪೈಕಿ ೬ ಕ್ಷೇತ್ರಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್‌ನ ಬಲ ಹೆಚ್ಚಿದೆ. ಎರಡು ಬಾರಿ ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಪ್ರಕಾಶ ಹುಕ್ಕೇರಿ ಸದ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಕಾರಣ ಲೋಕಸಭೆ ಸ್ಪರ್ಧೆಗೆ ಒಲವು ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅವರನ್ನು ಬಿಟ್ಟರೆ ಸದ್ಯಕ್ಕೆ ಇಡೀ ಕ್ಷೇತ್ರದಲ್ಲಿ ಪರಿಚಿತವಾಗಿರುವ ಮುಖಂಡರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಹೀಗಾಗಿ ಈಗಾಗಲೇ ಒಂದು ಬಾರಿ ಜಯಗಳಿಸಿರುವ ಹಾಗೂ ಸಹಕಾರ ಕ್ಷೇತ್ರದ ಮೂಲಕ ಈ ಭಾಗದಲ್ಲಿ ಪ್ರಭಾವ ಹೊಂದಿರುವ ರಮೇಶ ಕತ್ತಿ ಅವರನ್ನು ಸೆಳೆದು ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆಗೆ ಠಕ್ಕರ್ ಕೊಡುವ ಲೆಕ್ಕಾಚಾರ ನಡೆದಿದೆ.

ಸದ್ಯ ರಾಜಕೀಯವಾಗಿ ನಿರಾಶ್ರಿತರಾಗಿರುವ ರಮೇಶ ಕತ್ತಿ ಸಹ ಕಾಂಗ್ರೆಸ್‌ನ ಈ ಆಫರ್‌ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದುಬಂದಿದ್ದು, ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದ ಬಿಜೆಪಿ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.

ಹುಕ್ಕೇರಿ-ಕತ್ತಿ ಕುಟುಂಬ ಮಧ್ಯೆ ಒಳ ಒಪ್ಪಂದ ?:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಸಕ್ತಿ ಇಲ್ಲದಿದ್ದರೂ ಪಕ್ಷದ ಬಲವಂತಕ್ಕೆ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಕತ್ತಿ ಕಣಕ್ಕಿಳಿದಿದರೂ ಗೆಲುವಿಗಾಗಿ ಹೆಚ್ಚಿನ ಶ್ರಮ ಹಾಕಲೇ ಇಲ್ಲ.ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕಿಂತ ಅವರು ಹುಕ್ಕೇರಿ ಕ್ಷೇತ್ರದಲ್ಲೇ ಹೆಚ್ಚಾಗಿ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು. ಇದರ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಭರ್ಜರಿ ಗೆಲವು ಕಂಡಿದ್ದರು. ಚುನಾವಣೆ ವೇಳೆಯೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹುಕ್ಕೇರಿ ಕುಟುಂಬ ರಮೇಶ ಕತ್ತಿಗೆ ಬೆಂಬಲಿಸುವ ಬಗ್ಗೆ ಎರಡೂ ಕುಟುಂಬಗಳ ಮಧ್ಯೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಒಳಒಪ್ಪಂದ ನಡೆದಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈಗ ರಮೇಶ ಕತ್ತಿ ಕಾಂಗ್ರೆಸ್ ಸೇರ್ಪಡೆಗೆ ಪ್ರಕಾಶ ಹುಕ್ಕೇರಿ ಸಹ ಬೆಂಬಲ ನೀಡಲಿದ್ದು, ಅತ್ತ ಅಥಣಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಸಹ ರಮೇಶ ಕತ್ತಿ ಬೆನ್ನಿಗೆ ನಿಲ್ಲಲಿದ್ದಾರೆ ಎಂದು ಹೇಳಲಾಗುತ್ತಿದೆ.

Check Also

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ …

Leave a Reply

Your email address will not be published. Required fields are marked *