Breaking News

ಮದುವೆ, ಸಮಾರಂಭಗಳ ಮೇಲೆ ಕ್ಯಾಮೆರಾ ನಿಗಾ:

ಕೋವಿಡ್-೧೯ ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ

ಮದುವೆ, ಸಮಾರಂಭಗಳಿಗೆ ಆಯಾ ತಹಶೀಲ್ದಾರರಿಂದ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್

ಬೆಳಗಾವಿ, -: ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಮದುವೆ ಮತ್ತಿತರ ನಿಗದಿತ  ಸಮಾರಂಭಗಳಿಗೆ ಮಾತ್ರ ಆಯಾ ತಾಲ್ಲೂಕುಗಳ ತಹಶೀಲ್ದಾರರು ಅನುಮತಿಯನ್ನು ನೀಡಲಿದ್ದಾರೆ. ಅನುಮತಿ ಪಡೆಯದೇ ಅಥವಾ ಅನುಮತಿ ಪಡೆದುಕೊಂಡು ನಿಯಮಾವಳಿ ಉಲ್ಲಂಘಿಸಿ ಸಮಾರಂಭ ನಡೆಸುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-೧೯ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

ಸದರಿ ಮಾರ್ಗಸೂಚಿಯಲ್ಲಿ ಕೆಲವು ಷರತ್ತುಗಳ ಮೇರೆಗೆ ಅನುಮತಿಸಲಾಗಿರುವ ಮದುವೆ ಮತ್ತಿತರ ಸಮಾರಂಭಗಳಿಗೆ ಮುಂಚಿತವಾಗಿಯೇ ಆಯಾ ತಾಲ್ಲೂಕುಗಳ ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ನಿಯಮ ಉಲ್ಲಂಘನೆ-ಸಂಘಟಕರೇ ಹೊಣೆ:

ಅನುಮತಿ ನೀಡುವಾಗ ವಿಧಿಸಲಾಗಿರುವ ಷರತ್ತುಗಳನ್ನು ಸಂಘಟಕರು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಷರತ್ತುಗಳನ್ನು ಉಲ್ಲಂಘಿಸಿ ಸಮಾರಂಭಗಳಲ್ಲಿ ಹೆಚ್ಚು ಜನರನ್ನು ಸೇರಿಸಿದರೆ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಸೇರಿದಂತೆ ಇತರೆ ನಿಯಮಗಳ ಪ್ರಕಾರ ಕಠಿಣವಾದ ಕ್ರಮಗಳನ್ನು ಕೈಗೊಳ್ಳಲಾಗುವುದು.

ನಿಯಮಗಳನ್ನು ಉಲ್ಲಂಘಿಸಿದರೆ ಮದುವೆ ಮತ್ತಿತರ ಸಮಾರಂಭಗಳ ಸಂಘಟಕರು ಮಾತ್ರವಲ್ಲದೇ ಅಂತಹ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುವ ಕಲ್ಯಾಣ ಮಂಟಪಗಳು, ಛತ್ರಗಳು, ಸಮುದಾಯ‌ಭವನಗಳ ಮಾಲೀಕರು, ವ್ಯವಸ್ಥಾಪಕರನ್ನೂ ಹೊಣೆ ಮಾಡಿ ಅವರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಆದ್ದರಿಂದ ಯಾವುದೇ ರೀತಿಯ ಮದುವೆ ಅಥವಾ ಸಮಾರಂಭಗಳಿಗೆ ಸ್ಥಳಾವಕಾಶ ಕಲ್ಪಿಸುವಾಗ ಸಂಬಂಧಿಸಿದ ಕಲ್ಯಾಣಮಂಟಪ/ಛತ್ರಗಳು ಹಾಗೂ ಸಮುದಾಯ ಭವನಗಳ ವ್ಯವಸ್ಥಾಪಕರು ಕಡ್ಡಾಯವಾಗಿ ಸಂಘಟಕರಿಂದ ಅನುಮತಿ ಪತ್ರವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮದುವೆ, ಸಮಾರಂಭಗಳ ಮೇಲೆ ಕ್ಯಾಮೆರಾ ನಿಗಾ:

ಕೋವಿಡ್-೧೯ ಮಾರ್ಗಸೂಚಿ ಪ್ರಕಾರ ತಹಶೀಲ್ದಾರರಿಂದ ಅನುಮತಿಯನ್ನು ಪಡೆದುಕೊಂಡು ನಡೆಸಲಾಗುವ ಮದುವೆ ಮತ್ತಿತರ ಸಮಾರಂಭಗಳ ಮೇಲೆ ನಿಗಾ ವಹಿಸಲು ಆಯಾ ತಾಲ್ಲೂಕುಗಳಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಹೀಗೆ ಅನುಮತಿ ಪಡೆದುಕೊಂಡು ನಡೆಸಲಾಗುವ ಸಮಾರಂಭಗಳ ಮೇಲೆ ನೋಡಲ್ ಅಧಿಕಾರಿಗಳು ಒಬ್ಬ ವಿಡಿಯೋಗ್ರಾಫರ್ ಸಮೇತ ನಿಗಾ ವಹಿಸುತ್ತಾರೆ. ಈ ಸಂದರ್ಭದಲ್ಲಿ ಷರತ್ತುಗಳನ್ನು ಹಾಗೂ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ತಕ್ಷಣವೇ ಸಮಾರಂಭಗಳನ್ನು ತಡೆಹಿಡಿಯಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಸರಕಾರ ಕಾಲಕಾಲಕ್ಕೆ ಪ್ರಕಟಿಸುವ ಮಾರ್ಗಸೂಚಿಯ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಾರಂಭಗಳಿಗೆ ಅನುಮತಿಯನ್ನು ನೀಡಲಾಗುವುದು.  ಸಂಘಟಕರು ಕೋವಿಡ್-೧೯ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

*****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *