ಕಾಟನ್ ದಾರಕ್ಕೆ ಗಾಜಿನಪುಡಿಯನ್ನು ಲೇಪಿಸಿ ಸಿದ್ಧಪಡಿಸುವ ಮಾಂಜಾ ಎಂಬ ದಾರದಿಂದ ಗಾಳಿಪಟ ಹಾರಿಸಲಾಗುತ್ತದೆ.ಈ ದಾರ ಹರಿದು ಎಲ್ಲೋ ಯಾರದೋ ಕುತ್ತಿಗೆಗೆ ಸುತ್ತಿ ಅನೇಕ ಜನ ಬಲಿಯಾಯಾಗಿದ್ದು,ಹಲವಾರು ಜನ ಗಾಯಗೊಂಡಿದ್ದಾರೆ. ಇಂದು ಬೆಳಗಾವಿ ನಗರದಲ್ಲಿ ಇದೇ ಮಾಂಜಾ ದಾರಕ್ಕೆ ಐದು ವರ್ಷದ ಬಾಲಕ ಬಲಿಯಾಗಿದ್ದಾನೆ.
ಬೆಳಗಾವಿ: ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸಿ ಊರಿಗೆ ದ್ವಿಚಕ್ರ ವಾಹನದ ಮೇಲೆ ಹೊರಟಿದ್ದಾಗ ಮಾಂಜಾ ದಾರ ಕುತ್ತಿಗೆಗೆ ಬಿಗಿದು ಐದು ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಲ್ಲಿಯ ಗಾಂಧಿ ನಗರದ ರಾಷ್ಟ್ರೀಯಯ ಹೆದ್ದಾರಿ 4ಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಯಮಕನಮರಡಿ ಸಮೀಪದ ಅನಂತಪುರ ಗ್ರಾಮದ ವರ್ಧನ ಈರಣ್ಣ ಬೇಲಿ(5) ಎಂಬ ಬಾಲಕ ಮೃತಪಟ್ಟಿದೆ. ಗಾಂಧಿ ನಗರದ ಹಣ್ಣಿನ ಮಾರುಕಟ್ಟೆ ಎದುರಿನ ರಾಷ್ಟ್ರೀಯಯ ಹೆದ್ದಾರಿ 4ರಲ್ಲಿ ಬಾಲಕನ ಕುತ್ತಿಗೆಗೆ ಮಾಂಜಾ ದಾರ ಬಿಗಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮಗುವನ್ನು ಬದುಕಿಸಲು ತಂದೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ದ್ವಿಚಕ್ರ ವಾಹನದ ಮೇಲೆ ತಂದೆ ಈರಣ್ಣ ಅವರೊಂದಿಗೆ ವರ್ಧನ ಬೆಳಗಾವಿಗೆ ಬಟ್ಟೆ ಖರೀದಿಗೆ ಬಂದಿದ್ದನು. ನಗರದಲ್ಲಿ ಬಟ್ಟೆ ಖರೀದಿಸಿ ಬೆಳಗಾವಿಯಿಂದ ತಮ್ಮೂರಿಗೆ ಹೊರಟಿದ್ದರು. ದ್ವಿಚಕ್ರ ವಾಹನದಲ್ಲಿ ಮುಂಭಾಗದಲ್ಲಿ ವರ್ಧನ ಕುಳಿತುಕೊಂಡಿದ್ದನು. ಕಣ್ಣಿಗೆ ಕಾಣಿಸದ ಮಾಂಜಾ ದಾರ ನೇರವಾಗಿ ವರ್ಧನ ಕುತ್ತಿಗೆಗೆ ಬಿಗಿದಿದೆ. ಬಾಲಕ ಸ್ಥಳದಲ್ಲಿಯೇ ಅಸುನೀಗಿದೆ.
ಮಾಂಜಾ ದಾರವನ್ನು ನಿಷೇಧ ಮಾಡಿದ್ದರೂ ಇದನ್ನು ಕಾಳಸಂತೆಯಲ್ಲಿ ಮಾರಾಟ ನಡೆದಿದ್ದು, ಈಗ ಬಾಲಕನನ್ನು ಬಲಿ ಪಡೆದಿದೆ. ಮಾಂಜಾ ಸಂಪೂರ್ಣ ನಿಷೇಧಿಸಲು ಜಿಲ್ಲಾಡಳಿತ ಹಾಗೂ ಪೊಲೀಸರು ಅಗತ್ಯ ಕ್ರಮ ಜರುಗಿಸಬೇಕು ಎಂದು ಬಾಲಕನ ಸಮಬಂಧಿಕರು ಆಗ್ರಹಿಸಿದ್ದಾರೆ.