ಜಿಲ್ಲಾ ಪ್ರಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್
————————————————————
ಶಾಲೆಗಳಲ್ಲಿ ನೀರು, ಶೌಚಾಲಯ; ಅಂಗನವಾಡಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕಟ್ಟುನಿಟ್ಟಿನ ಸೂಚನೆ
ಬೆಳಗಾವಿ, – ಜಿಲ್ಲೆಯ ಪ್ರತಿಶಾಲೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಅದೇ ರೀತಿ ಪ್ರತಿಯೊಂದು ಅಂಗನವಾಡಿ ಕೇಂದ್ರಕ್ಕೂ ವಿದ್ಯುತ್ ಸಂಪರ್ಕ ಒದಗಿಸಬೇಕು. ವಿದ್ಯುತ್ ಸಂಪರ್ಕ ಒದಗಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ನ.19) ನಡೆದ ಜಿಲ್ಲಾ ಪ್ರಗತಿ ಪರಿಶೀನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರು, ಶೌಚಾಲಯ ಮತ್ತು ವಿದ್ಯುತ್ ಸಂಪರ್ಕ ಇವುಗಳನ್ನು ಒದಗಿಸಲು ಗ್ರಾಮ ಪಂಚಾಯತಿ ವತಿಯಿಂದ ಅಗತ್ಯ ನೆರವು ನೀಡಲು ಪಿಡಿಓ ಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ದೂರದರ್ಶನ ಮೂಲಕ ಶಾಲಾ ಮಕ್ಕಳಿಗೆ ಪಾಠ ಬೋಧನೆ ನಡೆಯುತ್ತಿರುವುದರಿಂದ ಯಾವ ಮನೆಯಲ್ಲಿ ಟಿವಿ ಇರುವುದಿಲ್ಲವೋ ಅಂತಹ ಮಕ್ಕಳಿಗೆ ಪಾಠ ಕೇಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಟಿವಿ ಸೌಲಭ್ಯ ಕಲ್ಪಿಸುವ ಬಗ್ಗೆ ಕ್ರಮಬಕೈಗೊಳ್ಳಬೇಕು ಎಂದು ಅತೀಕ್ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿಗಳು ಕೂಡ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಅನುದಾನ ಲಭ್ಯವಿರುವ ಕಡೆಗಳಲ್ಲಿ ಸಾಧ್ಯವಿದ್ದಷ್ಟು ದೊಡ್ಡ ಪರದೆಯ ಟಿವಿ ಗಳನ್ನು ಖರೀದಿಸಬಹುದು. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜಲಜೀವನ ಮಿಷನ್ ಕಾಮಗಾರಿ ಆರಂಭಕ್ಕೆ ಸೂಚನೆ:
ಜಲಜೀವನ ಮಿಷನ್ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಬೇಕು. ಶುದ್ಧ ಕುಡಿಯುವ ನೀರು ಘಟಕಗಳು ಚಾಲ್ತಿಯಲ್ಲಿರುವಂತೆ ಕ್ರಮಕೈಗೊಳ್ಳಬೇಕು.
ನಿರ್ವಹಣೆ ಆಥವಾ ದುರಸ್ತಿ ಆಗಬೇಕಾದ ಘಟಕಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಎಲ್.ಕೆ.ಅತೀಕ್ ಸೂಚನೆ ನೀಡಿದರು.
ವೈಯಕ್ತಿಕ ಶೌಚಾಲಯ ನಿರ್ಮಾಣದ ಗಡುವು ಈಗಾಗಲೇ ಮುಗಿದಿರುವುದರಿಂದ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು; ಸಾಧ್ಯವಾದಷ್ಟು ದೇವಸ್ಥಾನ, ಬಸ್ ನಿಲ್ದಾಣ ಹಾಗೂ ಜನಸಂದಣಿ ಹೆಚ್ಚಾಗಿರುವ ಸ್ಥಳಗಳನ್ನು ಗುರುತಿಸಿ ಸಮುದಾಯ ಶೌಚಾಲಯ ನಿರ್ಮಿಸುವಂತೆ ಸೂಚನೆ ನೀಡಿದರು.
ಪವಿತ್ರ ವನದ ಉದ್ಧೇಶ ಅಂತರ್ಜಲ ಮಟ್ಟ ಹೆಚ್ಚಿಸುವುದು ಕೂಡ ಆಗಿದೆ. ಆದ್ದರಿಂದ ಭೂವಿಜ್ಞಾನಿಗಳ ಸಲಹೆ ಮೇರೆಗೆ ಮಳೆ ನೀರು ಇಂಗಿಸಲು ಅಥವಾ ಜಲ ಮರುಪೂರಣಕ್ಕೆ ಅನುಕೂಲವಾಗುವ ಜಾಗೆಗಳನ್ನು ಗುರುತಿಸಿ ಪವಿತ್ರವನ ನಿರ್ಮಿಸುವಂತೆ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಹೇಳಿದರು.
ಇದು ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೂ ವಿಸ್ತರಿಸಬಹುದು ಎಂದರು.
ಎಲ್ಲ ಕುಡಿಯುವ ನೀರಿನಮೂಲ(ಕೊಳವೆಬಾವಿ)ಗಳ ಸುತ್ತಮುತ್ತ ಇಂಗುಗುಂಡಿಗಳನ್ನು ನಿರ್ಮಿಸಬೇಕು. ಇದು ಮಾಡಿದಾಗ ಮಾತ್ರ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಿಸುವುದು ಸಾಧ್ಯವಾಗಲಿದೆ.
ನರೇಗಾ ಜಿಲ್ಲೆಯ ಪ್ರಗತಿ ತೃಪ್ತಿದಾಯಕವಾಗಿದೆ. ನಿಪ್ಪಾಣಿ, ಬೆಳಗಾವಿ, ಕಾಗವಾಡ ತಾಲ್ಲೂಕಿನಲ್ಲಿ ವೈಯಕ್ತಿಕ ಸೌಲಭ್ಯ ಒದಗಿಸುವ ಮೂಲಕ ಇನ್ನಷ್ಟು ಪ್ರಗತಿ ಸಾಧಿಸುವಂತೆ ತಿಳಿಸಿದರು.
ಅದೇ ರೀತಿ ನರೇಗಾ ಯೋಜನೆಯಡಿ ಕೂಲಿ ಪಾವತಿ ನೂರಕ್ಕೆ ನೂರರಷ್ಟು ಸಾಧನೆ ಮಾಡುವಂತೆ ಸೂಚನೆ ನೀಡಿದರು.
20 ಕೋಟಿ ಬೆಳೆ ಪರಿಹಾರ ಜಮೆ:
ಜಿಲ್ಲೆಯಲ್ಲಿ 31 ಸಾವಿರ ರೈತರಿಗೆ ಸುಮಾರು 20 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ ಆಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಅತಿವೃಷ್ಟಿಯಿಂದ ಆಗಿರುವ ಮೂಲಸೌಕರ್ಯಗಳ ಹಾನಿಯ ಸುಧಾರಣೆಗೆ ಇದುವರೆಗೆ ಅನುದಾನ ಬಂದಿರುವುದಿಲ್ಲ; ಅನುದಾನ ಬಂದ ತಕ್ಷಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.
ಜಿಲ್ಲೆಯಲ್ಲಿ 428 ಮಾತ್ರ ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ 340 ಜನರು ಮರಣ ಹೊಂದಿರುತ್ತಾರೆ. ನಿಗದಿತ ಕೋವಿಡ್-೧೯ ಆಸ್ಪತ್ರೆಯಾಗಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಇದೀಗ ಹೊರ ರೋಗಿಗಳ ವಿಭಾಗ ಸೇರಿದಂತೆ ಇತರೆ ಚಿಕಿತ್ಸಾ ಸೌಲಭ್ಯ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಸಹಕಾರ ಇಲಾಖೆಯ ವತಿಯಿಂದ ಜಾರಿಗೊಳಿಸಲಾಗುತ್ತಿರುವ ವಿವಿಧ ಸಾಲ ಮನ್ನಾ, ಸಾಲ-ಸೌಲಭ್ಯ ಯೋಜನೆಗಳು ನಿರೀಕ್ಷಿತ ಪ್ರಗತಿ ಸಾಧಿಸುತ್ತಿಲ್ಲ; ಈ ಕುರಿತು ಹೆಚ್ಚಿನ ಗಮನಹರಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 20 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆಯಾಗಿದ್ದು, ಅದರಲ್ಲಿ 15 ಸಾವಿರ ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, ಇನ್ನೂ ಐದು ಸಾವಿರ ಕ್ವಿಂಟಲ್ ಬೀಜ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.
27 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಯಾವುದೇ ರೀತಿಯ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ವಿವಿಧ ಯೋಜನೆಗಳಡಿಯ ಫಲಾನುಭವಿಗಳನ್ನು ಸಾಕಷ್ಟು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಳ್ಳಬೇಕು. ಅಂದಾಗ ಮಾತ್ರ ಆಯಾ ವಾರ್ಷಿಕ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸುವುದು ಸಾಧ್ಯವಾಗಲಿದೆ ಎಂದು ಹೇಳಿದರು.
ಶಾಲೆಗಳ ಆರಂಭಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಶಿಕ್ಷಕರು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆನ್ಲೈನ್ ಶಿಕ್ಷಣ ಹಾಗೂ ಚಂದನ ದೂರದರ್ಶನ ಮೂಲಕ ಪಾಠ ಬೋಧಿಸಲಾಗುತ್ತಿದೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದರು.
ಎಲ್ಲರಿಗೂ ಪಠ್ಯಪುಸ್ತಕಗಳನ್ನು ತಲುಪಿಸಲಾಗಿದೆ. ಶಿಕ್ಷಕರು ಕೂಡ ಆಕಸ್ಮಿಕ ಮನೆ ಭೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಸಾಲ-ಸೌಲಭ್ಯ ಒದಗಿಸುವ ಉದ್ಯೋಗಿನಿ, ದೇವದಾಸಿ ಪುನರ್ವಸತಿ ಯೋಜನೆ ಮತ್ತಿತರ ಯೋಜನೆಗಳ ಫಲಾನುಭವಿಗಳ ಆಯ್ಕೆ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.
ಅಂಗನವಾಡಿ ಕಟ್ಟಡಗಳ ನಿರ್ಮಾಣ; ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ, ಸೇತುವೆಯ ದುರಸ್ತಿ; ನೀರಾವರಿ, ಲಸಿಕೆ ಕಾರ್ಯಕ್ರಮ; ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಕ್ರಿಯಾ ಯೋಜನೆ ಅನುಮೋದನೆ; ಸ್ವಚ್ಛಭಾರತ ಮಿಷನ್; ಗ್ರಾಮೀಣ ವಸತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಪ್ರಗತಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಪರಿಶೀಲಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ ತೇಲಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
***