ಕನಕದಾಸರ ತತ್ವಗಳು ಇಡೀ ಜಗತ್ತಿಗೆ ತಲುಪಲಿ: ಜಿಲ್ಲಾಧಿಕಾರಿ ಹಿರೇಮಠ
ಬೆಳಗಾವಿ, ಡಿ.3(ಕರ್ನಾಟಕ ವಾರ್ತೆ): ಕನಕದಾಸರು ಜಾತಿಮತ ಮೀರಿ ಬೆಳೆದವರು. ಸಮಾಜ ಸುಧಾರಣೆಯಲ್ಲಿ ಕನಕ ದಾಸರ ಕೀರ್ತನೆಗಳು ಹಾಗೂ ತತ್ವಗಳು ಇಂದಿಗೂ ಪ್ರಭಾವಶಾಲಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ(ಡಿ. 3) ಬೆಳಗಾವಿಯ ಬಸವರಾಜ್ ಕಟ್ಟಿಮನಿ ಸಭಾಂಗಣದಲ್ಲಿ ಆಯೋಜಸಲಾಗಿದ್ದ ಶ್ರೀ ಭಕ್ತ ಕನಕದಾಸ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರನ್ನು ರಾಜ್ಯಕ್ಕೆ ಸೀಮಿತಗೊಳಿಸದೇ ಇಡೀ ಜಗತ್ತಿಗೆ ಅವರ ತತ್ವಗಳು ತಲುಪುವ ಕೆಲಸವನ್ನು ನಾವು ಎಲ್ಲರೂ ಸೇರಿ ಮಾಡಬೇಕಾಗಿದೆ. ಜಗತ್ತಿನ ಯಾವುದೇ ಒಂದು ದೇಶದಲ್ಲಿ ಹಿಂಸೆ ತಲೆ ಎತ್ತಿದಾಗ ಅದನ್ನು ದಮನ ಮಾಡುವ ಕಾರ್ಯ ನಮ್ಮ ದೇಶ ಮಾಡುತ್ತದೆ. ಅಂತಹ ಒಂದು ಹೋರಾಟದ ಗುಣಗಳು ನಮಗೆ ಕನಕದಾಸರ ತರದ ಹಲವಾರು ಮಹಾನ್ ವ್ಯಕ್ತಿಗಳ ವೈಚಾರಿಕತೆಯಿಂದ ನಮಗೆ ಬಂದಿವೆ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಹೇಳಿದರು.
ಇದೆ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಆರ್.ಪಿ.ಡಿ. ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ರಾದ ಡಾ.ಎಚ್. ಪಿ.ಕೊಲಕಾರ ಅವರು, ಕನಕದಾಸರ ಜೀವನ ಹಾಗೂ ಅವರು ಕೀರ್ತನೆಗಳ ಕಡೆ ಸಾಗಿದ ಬಗೆಯನ್ನು ತಿಳಿಸಿದರು.
ಯಾವುದೇ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಧರ್ಮ ಹಾಗೂ ಜಾತಿಗೆ ಅಥವಾ ಒಂದು ಸಮಾಜಕ್ಕೆ ಸೀಮಿತ ಮಾಡದೆ ಆತನ ಒಂದು ವಿಚಾರಧಾರೆಗಳು ಇಡೀ ಮಾನವಕುಲಕ್ಕೆ ಅವಶ್ಯಕವಾಗಿರುತ್ತವೆ.
ಕನಕದಾಸರ ಶ್ರೇಷ್ಠ ವಿಚಾರಗಳು ಜನರ ಮನಸ್ಸಿನಲ್ಲಿರುವ ಮೇಲು- ಕೀಳು, ಜಾತಿ, ತಾರತಮ್ಯ, ಭೇದ-ಭಾವವನ್ನು ದೂರ ಮಾಡಿ ಇಡೀ ಜೀವನದ ಮೌಲ್ಯವನ್ನು ಸಾರುವ ಕೆಲಸವನ್ನು ಕನಕದಾಸರು 10 ನೇ ಶತಮಾನದಲ್ಲಿ ಮಾಡಿದರು.
ರಾಮಧ್ಯಾನ ಚರಿತೆ, ಹರಿಭಕ್ತಸಾರದಂತಹ ಹಲವಾರು ಚರಿತೆಯ ವಿಚಾರಗಳನ್ನು ವಿವರಿಸಿದರು. ಕನಕದಾಸರ ಜೀವನಚರಿತ್ರೆಯನ್ನು ಕೇವಲ ಜಯಂತಿಗೆ ಮಾತ್ರ ಸೀಮಿತವಾಗಿರಿಸದೆ ಹಲವಾರು ವಿಚಾರ ಸಂಕಿರಣ ಉಪನ್ಯಾಸ ಕಾರ್ಯಕ್ರಮಗಳನ್ನು ಅವರ ವಿಚಾರಗಳನ್ನು ಯೋಜನೆಗೆ ಪಸರಿಸುವ ಕೆಲಸವನ್ನು ನಾವು ಇಂದಿನ ದಿನಗಳಲ್ಲಿ ಮಾಡಬೇಕಾಗಿದೆ ಎಂದರು.
ವಚನ ಸಾಹಿತ್ಯ ಎಲ್ಲ ಧರ್ಮಗಳು ನಡುವೆ ಒಂದು ಸಾಮರಸ್ಯವನ್ನು ಮೂಡಿಸುವ ಕೆಲಸ ಮಾಡಿದರೆ ಕನಕದಾಸರ ಕೀರ್ತನೆಗಳು ಭಾಷೆಯನ್ನು ಸರಳಗೊಳಿಸುವುದು ರೊಂದಿಗೆ ಸರ್ವಧರ್ಮ ಮಾನವ ಧರ್ಮ ಹಾಗೂ ಸಮಾಜದಲ್ಲಿನ ಭೇದಭಾವವನ್ನು ಅಳಿಸುವ ಕೆಲಸವನ್ನು ಮಾಡಿದವು ಎಂದು ಕೋಲಕಾರ ಹೇಳಿದರು.
ಕುಮಾರ್ ಬಡಿಗೇರ ಮತ್ತು ತಂಡದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಚಿಕ್ಕೋಡಿ ತಾಲೂಕಿನ ಕೆರೂರ್ ಗ್ರಾಮದ ರಾಜು ಮಾಸ್ಟರ್ ತಂಡದವರು ಡೊಳ್ಳಿನ ಹಾಡಿನ ಮೂಲಕ ರಂಜಿಸಿದರು.
ಡಿಸಿಪಿ ಚಂದ್ರಶೇಖರ್ ನೀಲಗಾರ್, ಮಹಾನಗರ ಪಾಲಿಕೆ ಆಯುಕ್ತರು ಜಗದೀಶ್ ಕೆಎಚ್, ಉಪ ವಿಭಾಗ ಅಧಿಕಾರಿಗಳು ಅಶೋಕ್ ತೇಲಿ, ಜಿಲ್ಲಾ ಪಂಚಾಯತ್ ಸದಸ್ಯರು ಕೃಷ್ಣ ಅನಗೊಳ್ಕರ್, ಎಲ್ಲಪ್ಪ ಕುರುಬರ, ನಿವೃತ್ತ ಎಸ್ಪಿ ಅಶೋಕ ಸದಲಗಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಎಚ್ ಭಜಂತ್ರಿಯವರು ಸ್ವಾಗತಿಸಿದರು, ನೆಹರೂ ಯುವ ಕೇಂದ್ರದ ನಿವೃತ್ತ ಜಿಲ್ಲಾ ಸಮನ್ವಯಾಧಿಕಾರಿ ಎಸ್.ಯು.ಜಮಾದಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
****