ಬೆಳಗಾವಿ, : ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ನಗರ ಬಸ್ ನಿಲ್ದಾಣ (ಸಿಬಿಟಿ) ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸೋಮವಾರ (ಜು.11) ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಸಿಬಿಟಿ ಪಕ್ಕದ ಜಾಗೆಗೆ ಸಂಬಂಧಿಸಿದಂತೆ ಜಾಗೆಯ ವಿವಾದದಿಂದ ಎಂಟು ತಿಂಗಳು ಕಾಲ ಕಾಮಗಾರಿ ವಿಳಂಬಗೊಂಡಿರುತ್ತದೆ. ಆದರೆ ಇದೀಗ ಜಾಗೆಯ ವಿವಾದವು ಬಗೆಹರಿದಿರುವುರಿಂದ ಕಾಮಗಾರಿ ಆರಂಭಗೊಂಡಿರುತ್ತದೆ.
ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಬರುವ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ನಗರ ಬಸ್ ನಿಲ್ದಾಣದ ಕಾಮಗಾರಿ ಇದೀಗ ಭರದಿಂದ ಸಾಗಿದ್ದು, 2 ಅಂತಸ್ತು ಕಟ್ಟಡ ನಿರ್ಮಾಣ ಪೂರ್ಣಗೊಂಡಿರುತ್ತದೆ. ಜಾಗೆ ವಿವಾದದ ಕಾರಣಕ್ಕೆ ವಿಳಂಬವಾಗಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರವೀಣ ಬಾಗೇವಾಡಿ ಮಾಹಿತಿಯನ್ನು ನೀಡಿದರು.
ಕಲಾಮಂದಿರ ಕಾಮಗಾರಿ ಪರಿಶೀಲನೆ:
ಇದೇ ಸಂದರ್ಭದಲ್ಲಿ ಟಿಳಕವಾಡಿಯಲ್ಲಿ 46 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಲಾಮಂದಿರ ಕಾಮಗಾರಿಯನ್ನು ಕೂಡ ಜಿಲ್ಲಾಧಿಕಾರಿ ಪರಿಶೀಲಿಸಿದರು.
ಕಲಾಮಂದಿರದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವುದರಿಂದ ಉಳಿದ ಕೆಲಸಗಳನ್ನು ಕೂಡ ಡಿಸೆಂಬರ್ ಅಂತ್ಯದೊಳಗೆ ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕಲಾಮಂದಿರದ ಒಂದು ಬದಿಯ ಜಾಗೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಇರುತ್ತದೆ. ಆದ್ದರಿಂದ ಆದಷ್ಟು ಬೇಗನೇ ತಡೆಯಾಜ್ಞೆಯನ್ನು ತೆರವುಗೊಳಿಸುವ ಮೂಲಕ ಅಲ್ಲಿಯೂ ಕೂಡ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದಲ್ಲದೇ ನಗರದ ಹರ್ಷ ಷೋರೂಮ್ ಎದುರಿನಿಂದ ಜಿ.ಎಸ್.ಟಿ. ಕಚೇರಿಯವರೆಗಿನ ರಸ್ತೆ ವೈಟ್ ಟಾಪಿಂಗ್ ಹಾಗೂ ಪೇವರ್ಸ್(ನೆಲಹಾಸು) ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಳೆಗಾಲ ಇರುವುದರಿಂದ ಅಕ್ಟೋಬರ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಪೇವರ್ಸ್ ಅಳವಡಿಕೆ ಹಾಗೂ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಸ್ವತಃ ಪರಿಶೀಲಿಸಿದ ಅವರು, ಗುಣಮಟ್ಟದ ಕೆಲಸ ಮಾಡುವಂತೆ ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ಅವರು, ಎಲ್ಲ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದ್ದು, ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ಚಂದ್ರಶೇಖರ್ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****