ಕಿತ್ತೂರು ಸಂಸ್ಥಾನದ ಕೋಟೆ ಹಾಗೂ ಸದ್ಯಕ್ಕಿರುವ ಅರಮನೆಯ ಯಥಾಸ್ಥಿತಿ ರಕ್ಷಣೆಯ ಜತೆಗೆ ಪ್ರವಾಸಿಗರಿಗೆ ಸಮರ್ಪಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಯೋಜನೆಯನ್ನು ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಚನ್ನಮ್ಮನ ಕಿತ್ತೂರಿನಲ್ಲಿರುವ ಕೋಟೆ ಹಾಗೂ ಅರಮನೆಯನ್ನು ಶುಕ್ರವಾರ (ಸೆ.30) ವೀಕ್ಷಿಸಿದ ಬಳಿಕ ಅಧಿಕಾರಿಗಳ ಜತೆ ಅವರು ಚರ್ಚೆ ನಡೆಸಿದರು.
ಕೋಟೆಯ ಒಳಗಿರುವ ಕಿತ್ತೂರು ಸಂಸ್ಥಾನದ ಅರಮನೆಯ ಕುರಿತು ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಇದರಿಂದ ಪ್ರವಾಸಿಗರಿಗೆ ಕೋಟೆ ಮತ್ತು ಅರಮನೆ ಕುರಿತು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.
ಮಾಹಿತಿ ಫಲಕಗಳನ್ನು ಅಳವಡಿಕೆಗೆ ಸೂಕ್ತ ಪ್ರಸ್ತಾವ ಸಲ್ಲಿಸುವಂತೆ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು
ಮಳೆಯಿಂದ ಅರಮನೆ ರಕ್ಷಣೆಗೆ ಅನುಕೂಲವಾಗುವಂತೆ ಮೇಲ್ಛಾವಣಿ ಅಥವಾ ಗ್ಲಾಸ್ ಹೌಸ್ ಮಾದರಿಯ ರಕ್ಷಣಾ ಕವಚ ನಿರ್ಮಿಸುವ ಸಾಧ್ಯತೆ ಕುರಿತು ಚರ್ಚೆ ನಡೆಸಿದರು.
ಸಿಬ್ಬಂದಿ ಕೊರತೆ ನಡುವೆಯೂ ಕೋಟೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಒಳಗಡೆಯ ಬಾವಿಯ ಮೇಲೆ ಬೆಳೆದಿರುವ ಕಸವನ್ನು ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು.
ಧ್ವನಿಬೆಳಕು ಕಾರ್ಯಕ್ರಮ ಏರ್ಪಡಿಸುವ ಕುರಿತು ಪುರಾತತ್ವ ಇಲಾಖೆಯ ಅಧಿಕಾರಿ ಜತೆ ಚರ್ಚೆ ನಡೆಸಿದರು.
ಈ ಬಾರಿ ಕೂಡ ಉತ್ಸವದ ಮೂರು ದಿನಗಳಲ್ಲಿ ಪ್ರತಿದಿನ ಸಂಜೆ ಧ್ವನಿಬೆಳಕು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕೋಟೆ ಆವರಣದಲ್ಲಿರುವ ವಸ್ತುಸಂಗ್ರಾಹಲಯದ ಕ್ಯುರೇಟರ್ ರಾಘವೇಂದ್ರ ಅವರು, ಕೋಟೆ ಹಾಗೂ ವಸ್ತುಸಂಗ್ರಾಹಲಯದ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಿದರು.
ಕೋಟೆಯ ಆವರಣ ಹಾಗೂ ಚೆನ್ನಮ್ಮನ ಅರಮನೆಯನ್ನು ವೀಕ್ಚಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಅಲ್ಲಿರುವ ಮಂತ್ರಾಲೋಚನೆ ಕೊಠಡಿ, ಪಡಸಾಲೆ, ದರಬಾರ್ ಹಾಲ್, ಹಾಲು ಮೊಸರಿನ ಮನೆ, ಅಡುಗೆ ಮನೆ ಮತ್ತು.ದ್ರುವ ನಕ್ಷತ್ರ ವೀಕ್ಷಣಾಲಯ ಕುರಿತು ಮಾಹಿತಿ ಪಡೆದುಕೊಂಡರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಚೆನ್ನಮ್ಮನ ಕಿತ್ತೂರು ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ ಮತ್ತಿತರರು ಉಪಸ್ಥಿತರಿದ್ದರು.
****