*ಬೆಳಗಾವಿ ಜಿಲ್ಲಾಧಿಕಾರಿ ವರ್ಗಾವಣೆ : ತರಾತುರಿಯಲ್ಲಿ ಹೊಸಬರ ಆಗಮನ, ಹಳಬರ ನಿರ್ಗಮನ*
ಬೆಳಗಾವಿ,05: ಬೆಳಗಾವಿ ಇತಿಹಾಸದಲ್ಲಿಯೇ ಜಿಲ್ಲಾಧಿಕಾರಿಗಳ ವರ್ಗಾವಣೆ ಇಷ್ಟೊಂದು ತೀವ್ರವಾಗಿ ನಡೆಯಲಾರದ್ದು ಇಂದು ನಡೆದಿದೆ. ಮಧ್ಯಾಹ್ನದ ನಂತರ ಇಡೀ ರಾಜ್ಯ ಮಟ್ಟದಲ್ಲಿ ನಡೆದ ಬೆಳವಣಿಗೆ ಸಂಜೆ 5.30 ರ ಸುಮಾರಿಗೆ ಹೊಸ ಜಿಲ್ಲಾಧಿಕಾರಿ ಪದಗ್ರಹಣ ಮಾಡುವುದರ ಮೂಲಕ ಆಶ್ಚರ್ಯ ಮೂಡಿಸಿ, ಎಲ್ಲರೂ ಹುಬ್ಬೆರಿಸುವಂತಾಗಿದೆ.
ಹೌದು, ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ನಿತೇಶ ಪಾಟೀಲ ಅವರು ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದು, ಈ ಮೊದಲು ಜಿಲ್ಲಾಧಿಕಾರಿಗಳಾಗಿದ್ದ ಎಮ್.ಜಿ. ಹಿರೇಮಠ ಅವರನ್ನು ಬೆಂಗಳೂರಿನ ಭೂಸೇನಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗ ಮಾಡಲಾಗಿದೆ. ಇಂದು ಸಂಜೆ ಕಚೇರಿ ವೇಳೆ ಪೂರ್ಣಗೊಳ್ಳುವ ಮುನ್ನ ಈ ಪ್ರಕ್ರಿಯೆ ನಡೆದಿದೆ.
ಸರಕಾರದ ಹೊರಡಿಸಿದ ವರ್ಗಾವಣೆ ಆದೇಶ ಪತ್ರ ಬೆಳಗಾವಿ ಜಿಲ್ಲಾಧಿಕಾರಿಯವರಿಗೆ ಸಂಜೆ 3.50 ಕ್ಕೆ ಇ- ಮೇಲ್ ಮೂಲಕ ತಲುಪಿದೆ. ಈ ವಿಷಯ ನೂತನ ಜಿಲ್ಲಾಧಿಕಾರಿಗೆ ಮಾಹಿತಿ ತಿಳಿದು, ಬೆಳಗಾವಿಗೆ ಬಂದು ಅಧಿಕಾರ ಸ್ವೀಕರಿಸುವ ಬಗ್ಗೆ ಸೂಚಿಸಿ ಸಂಜೆ 4.10 ಕ್ಕೆ ಧಾರವಾಡದಿಂದ ನಿರ್ಗಮಿಸಿದ್ದಾರೆ. ಈ ವಿಷಯ ಹರಡುತ್ತಿದ್ದಂತೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ತಕ್ಷಣ ಹಾರತುರಾಯಿ ಜೊಡಣಾ ಮಾಡಿ ಆತ್ಮೀಯ ಬೀಳ್ಕೊಡುಗೆ ಸಮಾರಂಭ ನಡೆಸಿದ್ದಾರೆ. ಅಷ್ಟೋತ್ತಿಗೆ ಧಾರವಾಡದಿಂದ ಆಗಮಿಸಿದ ನೂತನ ಅಧಿಕಾರಿ ನಿತೇಶ್ ಪಾಟೀಲ ಅವರು 5.30 ರ ಸುಮಾರಿಗೆ ಅಧಿಕಾರ ಸ್ವೀಕರಿಸಿದರು. ಕೇವಲ ಒಂದೂವರೆ ತಾಸಿನಲ್ಲಿ ಈ ಎಲ್ಲ ಪ್ರಕ್ರಿಯೆ ನಡೆದಿದ್ದು ವಿಶೇಷ ಹಾಗೂ ಆಶ್ಚರ್ಯಕರ ಬೆಳವಣಿಗೆ.
ಇಷ್ಟೊಂದು ವೇಗವಾಗಿ ತರಾತುರಿಯಲ್ಲಿ ಅಧಿಕಾರಿಗಳ ವರ್ಗಾವಣೆ ಯಾಕೆ ? ಎಂಬ ಪ್ರಶ್ನೆ ಸಾರ್ವಜನಿಕರ ತಲೆಹೊಕ್ಕು , ಇದರ ಹಿಂದೆ, ರಾಜಕೀಯ ಕೈವಾಡ ಇರಬಹದು ಎಂದು ತಮ್ಮೊಳಗೇ ಮಾತನಾಡಿಕೊಳ್ಳುತ್ತಿದ್ದಾರೆ.
ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮೂಲತಃ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನವರು. 2012ರ ಬ್ಯಾಜ್ ದಲ್ಲಿ ಐಎಎಸ್ ಪೂರ್ಣಗೊಳಿಸಿದ್ದಾರೆ.
***