ಬೆಳಗಾವಿ-
ಡೇಂಘೀ ಮಾರಣಾಂತಿಕವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ (ಜು.03) ಹಮ್ಮಿಕೊಂಡಿದ್ದ ಡೇಂಘೀ ಮತ್ತು ಚಿಕೂನಗುನ್ಯ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡೇಂಘೀ ಜ್ವರ ಕಂಡುಬಂದರೆ ಶೀಘ್ರವಾಗಿ ಚಿಕಿತ್ಸೆ ನೀಡಲು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಲೇಟ್‍ಲೆಟ್ಸ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಬೇಕೆಂದು ಸೂಚಿಸಿದರು.
ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿಯರು ತಮ್ಮ ಪ್ರದೇಶಗಳಲ್ಲಿನ ಮನೆಗಳಿಗೆ ಭೇಟಿ ನೀಡಿ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. ಯಾವುದಾದರು ಮನೆಯಲ್ಲಿ ಮಕ್ಕಳಿಗೆ ಜ್ವರ ಕಂಡುಬಂದರೆ ತಕ್ಷಣ ಪ್ರಾದೇಶಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಮಾಹಿತಿ ನೀಡಿ, ಲಾರ್ವಾ ಸಮೀಕ್ಷೆ ಕೈಗೊಳ್ಳಬೇಕೆಂದು ಹೇಳಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ಕೀಟಜನ್ಯ ನಿಯಂತ್ರಣ ಕಾರ್ಯಕ್ರಮದಡಿ ಮನೆಮನೆಗೆ ಭೇಟಿ ನೀಡಿ ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ ಹಾಗೂ ಆರೋಗ್ಯ ಶಿಕ್ಷಣ ನೀಡಬೇಕು ಎಂದು ಸೂಚಿಸಿದರು.
ಜಾಗೃತಿ ಕಾರ್ಯಕ್ರಮ ಆಯೋಜಿಸಿ:
ಡೇಂಘಿ ಹಾಗೂ ಚಿಕೂನಗುನ್ಯಾ ರೋಗಗಳ ಬಗ್ಗೆ ಎಲ್ಲ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಡೇಂಘೀ ಸೊಳ್ಳೆ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಕಚ್ಚುವುದರಿಂದ ಸ್ವಯಂ ರಕ್ಷಣಾ ವಿಧಾನಗಳನ್ನು ಬಳಸಲು ಸೂಚಿಸಬೇಕು ಎಂದು ತಿಳಿಸಿದರು.
ಲಾರ್ವಾಹಾರಿ ಮೀನುಗಳಾದ ಗಪ್ಟಿ ಮತ್ತು ಗ್ಯಾಂಬೂಸಿಯಾಗಳನ್ನು ಮೀನುಗಾರಿಕೆ ಇಲಾಖೆಯವರು ಜಿಲ್ಲಾದ್ಯಂತ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಹಾಗೂ ಆರೋಗ್ಯ ಇಲಾಖೆಯಲ್ಲಿ ಅಗತ್ಯ ಬಿದ್ದಾಗ ಮೀನುಗಳನ್ನು ಸೂಕ್ತ ಸಮಯದಲ್ಲಿ ಉಚಿತವಾಗಿ ಒದಗಿಸಬೇಕೆಂದು ಹೇಳಿದರು.
ಕಾರ್ಮಿಕರು ವಾಸಿಸುವ ಕಾಲೋನಿಗಳಲ್ಲಿ ಸರಿಯಾದ ಒಳಚರಂಡಿ ಹಾಗೂ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸಬೇಕು. ಸೊಳ್ಳೆಗಳಿಂದ ರಕ್ಷಣೆಗಾಗಿ ಸೊಳ್ಳೆ ಪರದೆ, ಕಿಟಕಿಗಳಿಗೆ ಜಾಲರಿ ಹಾಕುವಂತೆ ಸೂಚಿಸಬೇಕು. ಎಲ್ಲ ಪ್ರದೇಶಗಳಲ್ಲಿ ಫಾಗಿಂಗ್ ಮಾಡಬೇಕೆಂದು ಸೂಚಿಸಿದರು.
ವ್ಯಾಪಕ ಪ್ರಚಾರ ಕೈಗೊಳ್ಳಿ:
ಡೇಂಘೀ ಹಾಗೂ ಚಿಕೂನಗುನ್ಯ ರೋಗಗಳ ಕುರಿತು ಭಿತ್ತಿಪತ್ರ ಹಾಗೂ ಕರಪತ್ರಗಳನ್ನು ಹಂಚಬೇಕು. ಸಾರಿಗೆ ಬಸ್‍ಗಳಿಗೆ ಭಿತ್ತಿಪತ್ರ ಅಂಟಿಸಬೇಕು. ದಿನಪತ್ರಿಕೆಗಳ ಮೂಲಕ ಜಾಗೃತಿ ಮೂಡಿಸಬೇಕು. ವೇಣುಧ್ವನಿ ಬಾನುಲಿಯಲ್ಲಿ ಜಾಗೃತಿ ಕಾರ್ಯಕ್ರಮ ಭಿತ್ತರಿಸಬೇಕು ಹಾಗೂ ಸ್ಥಳೀಯ ಟಿ.ವಿ ವಾಹಿನಿಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವುದರ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.