ಬೆಳಗಾವಿ:
ಬೆಳಗಾವಿ ಪೊಲೀಸ್ ಕಮಿಷನರೇಟ್ ನ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂದು ಅಧಿಕಾರ ವಹಿಸಿಕೊಳ್ಳಲಿರುವ ಸೀಮಾ ಅನಿಲ್ ಲಾಟ್ಕರ್ ನಿಪ್ಪಾಣಿ ನಗರದ ಸೊಸೆ.
ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಉಮೇಶ ಲಾಟ್ಕರ್ ಅವರ ಪುತ್ರ ಅನಿಲ್ ನನ್ನು ವಿವಾಹವಾಗಿದ್ದಾರೆ. ಬಿಇ ಎಂಬಿಎ ಶಿಕ್ಷಣ ಪಡೆದಿರುವ ಅನಿಲ್ ಲಾಟ್ಕರ್ ಸದ್ಯ ಬೆಂಗಳೂರಿನಲ್ಲಿ ಐಬಿಎಂ ಕಂಪನಿಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿಯ ಮನೆ ಮತ್ತು ತವರು ಮನೆ ಧಾರವಾಡಕ್ಕೆ ಹತ್ತಿರ ಸೇವೆ ಸಲ್ಲಿಸುವುದಕ್ಕೆ ಸೀಮಾ ಲಾಟ್ಕರ್ ಅವರಿಗೆ ದೊರೆತಿರುವ ಅವಕಾಶದಿಂದಾಗಿ ಮನೆಯಲ್ಲಿ ಹರುಷದ ವಾತಾವರಣ ತುಂಬಿ ತುಳುಕುತ್ತಿದೆ.
ಸ್ಟೇಟ್ ಬ್ಯಾಂಕ್ ಇಂಡಿಯಾ ಧಾರವಾಡ ಶಾಖೆಯ ವ್ಯವಸ್ಥಾಪಕರಾಗಿರುವ ಭಗವಂತ್ ಮಿಶ್ರಿಕೋಟಿ ಅವರ ಪುತ್ರಿ ಸೀಮಾ ಎಂಎಸ್ ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ವರ್ಣ ಪದಕ ಪಡೆದಿರುವುದು ಅವರ ಶೈಕ್ಷಣಿಕ ಸಾಧನೆ. ಐಪಿಎಸ್ ಅಧಿಕಾರಿಯಾಗುವ ಮುನ್ನ ಸೀಮಾ ಅವರು ಬೆಂಗಳೂರಿನ ಎಸ್. ನಿಜಲಿಂಗಪ್ಪ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪೆಡೆಗೊಂಡ ಸೀಮಾ ಲಾಟ್ಕರ್, ಬನಶಂಕರಿ ಸಬ್ ಡಿವಿಜನ್ ಸಿಐಡಿ ಎಸ್ ಪಿ ಎಂದು ಉತ್ಕೃಷ್ಟ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.
ಲಾಟ್ಕರ್ ಕುಟುಂಬ
ಉಮೇಶ ಲಾಟ್ಕರ್ ಸೊಸೆಯಂದಿರು ಮತ್ತು ಮಗಳು ಅಧಿಕಾರ ಮತ್ತು ಪದವಿಯಲ್ಲಿದ್ದಾರೆ. ಉಮೇಶ ಲಾಟ್ಕರ್ ಪುತ್ರಿ ಸುನಿತಾ ಲಾಟ್ಕರ್ ನಿಪ್ಪಾಣಿ ನಗರಸಭೆಯ ಅಧ್ಯಕ್ಷರಾಗಿದ್ದವರು, ಅದೇ ರೀತಿ ಅವರ ಹಿರಿಯ ಸೊಸೆ ನೀತಾ ಸುನಿಲ್ ಲಾಟ್ಕರ್ ನಿಪ್ಪಾಣಿ ನಗರಸಭೆಯಲ್ಲಿ ವಾರ್ಡ್ ನಂ.31ನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಕಿರಿಯ ಸೊಸೆ ಸೀಮಾ ಬೆಳಗಾವಿ ನಗರ ಡಿಸಿಪಿ ಎಂದು ಅಧಿಕಾರ ವಹಿಸಿಕೊಳ್ಳುತ್ತಿರುವುದ ಕುಟುಂಬದಲ್ಲಿ ಸಂತೋಷ ಉಕ್ಕುವಂತೆ ಮಾಡಿದೆ.