ಸೆ.26 ರಂದು ನವದೆಹಲಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲರಿಗೆ ಗೌರವ ಪ್ರದಾನ
ಬೆಳಗಾವಿ, -ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಬೆಳಗಾವಿ ಜಿಲ್ಲೆಯು ದೇಶದಲ್ಲಿಯೇ ಹತ್ತನೇ ರ್ಯಾಂಕ್ ಗಳಿಸಿದೆ.
ಕೇಂದ್ರ ಸರಕಾರದ ವತಿಯಿಂದ ಏಪ್ರಿಲ್ 12, 2022 ರಿಂದ ಹಮ್ಮಿಕೊಳ್ಳಲಾಗಿದ್ದ ಆಝಾದಿಸೇ ಅಂತ್ಯೋದಯ ತಕ್ (ಎ.ಎಸ್.ಎ.ಟಿ) ಅಭಿಯಾನವು 15ನೇ ಆಗಸ್ಟ್ 2022 ರಂದು ಮುಕ್ತಾಯಗೊಂಡಿತ್ತು. ಈ ಅಭಿಯಾನದಲ್ಲಿ ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 75 ಜಿಲ್ಲೆಗಳು ಭಾಗವಹಿಸಿದ್ದವು.
ಈ ಅಭಿಯಾನದಲ್ಲಿ ಕೇಂದ್ರ ಸರಕಾರದ ಆಯ್ದ 9 ಇಲಾಖೆಗಳ 17 ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ನಾಗರಿಕರಿಗೆ ಹಾಗೂ ಫಲಾನುಭವಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಿ ಶೇ.84-85 ರಷ್ಟು ಸಾಧನೆಯನ್ನು ಬೆಳಗಾವಿ ಜಿಲ್ಲೆಯು ದಾಖಲಿಸಿತ್ತು.
ಬೆಳಗಾವಿ ಜಿಲ್ಲೆಯ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿದ ಕೇಂದ್ರ ಸರಕಾರವು ಗೌರವ ಸನ್ಮಾನ ಹಾಗೂ ಪ್ರಶಸ್ತಿ ಸ್ವೀಕರಿಸಲು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಹಾಗೂ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಅವರನ್ನು ಅವರನ್ನು ನವದೆಹಲಿಗೆ ಆಹ್ವಾನಿಸಿದೆ.
ನವದೆಹಲಿಯ ಹ್ಯಾಬಿಟ್ಯಾಟ್ ಸೆಂಟರ್ ನಲ್ಲಿ ಸೆಪ್ಟೆಂಬರ್ 26 ರಂದು ಸನ್ಮಾನ ಸಮಾರಂಭ ನಡೆಯಲಿದೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಇಲಾಖೆ ಸೇರಿದಂತೆ ಒಟ್ಟಾರೆ 9 ಇಲಾಖೆಗಳ 17 ಯೋಜನೆಗಳ ಪ್ರಗತಿಯನ್ನು ಪರಿಗಣಿಸಿ ಈ ರ್ಯಾಂಕ್ ನೀಡಲಾಗಿರುತ್ತದೆ.
****
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
