Breaking News

ಕಾವೇರಿ ದುರಂತದಲ್ಲಿ ಮಾನವೀಯತೆ ಸಾಬೀತು..

ಬೆಳಗಾವಿ-

ಮನುಷ್ಯ ಪ್ರಕೃತಿಯಲ್ಲಿ ಇನ್ನೂಳಿದ ಪ್ರಾಣಿಗಳಂತೆ ತಾನೊಂದಾಗಿದ್ದರೂ ಬುದ್ದಿವಂತಿಕೆ ಹಾಗೂ ಸಂವಹನದ ಪ್ರಜ್ಞೆಯಿಂದ ‘ಮನುಷ್ಯತ್ವ’ವನ್ನು ಸಾಬೀತುಪಡೆಸುವುದರ ಮೂಲಕ ಇನ್ನೂಳಿದ ಪ್ರಾಣಿಗಳಿಗಿಂತ ಭಿನ್ನತೆಯನ್ನು ತೋರಿಸಿಕೊಳ್ಳುತ್ತಾನೆ. ಹಾಗಂತ, ಕರುಣೆ, ಕಾಳಜಿ, ಮಮತೆ, ವಾತ್ಸಲ್ಯದ ಸ್ವಭಾವಗಳನ್ನು ಪ್ರಕೃತಿ ಮನುಷ್ಯನಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ.  ಪ್ರಕೃತಿಯೊಳಗಿನ ಚರಚರಾಗಳಲ್ಲಿಯೂ ಈ ಸ್ವಭಾವ ಕಾಣುತ್ತೇವೆ. ಬಳ್ಳಿ ಗಿಡವನ್ನೇ ಅಪ್ಪಿಕೊಂಡಿರುತ್ತದೆ ಅಥವಾ ಬಳ್ಳಿಗೆ ಗಿಡ ಆಶ್ರಯವಾಗಿರುತ್ತದೆ, ಇರುವೆಗೆ ಆಹಾರ ದಕ್ಕಿದರೆ ಇಡೀ ಬಳಗವನ್ನೇ ಸೇರಿಸಿಸುತ್ತದೆ. ಬಳಗದಲ್ಲಿಯೇ ಒಂದು ಇರುವೆ ಸತ್ತರೆ ಬೇರೆಡೆ ಹೊತ್ತೊಯ್ಯುದು ಬೆರಗು ಮೂಡಿಸುತ್ತವೆ. ಮಂಗ ತನ್ನ ಮಗುವನ್ನು ಉದರಕ್ಕೆ ಕಟ್ಟಿಕೊಂಡು ಸಂರಕ್ಷಣೆಗೆ ಚಕಿತಗೊಳ್ಳುತ್ತವಂತೆ ಹಾರುತ್ತವೆ. ಕಾಗೆ ಒಂದಗುಳ ಸಿಕ್ಕರೆ ಇಡೀ ಬಳಗವನ್ನು ಕೂಗಿ ಕರೆಯುತ್ತದೆ, ತನ್ನ ಬಳಗದಲ್ಲಿ ಒಂದು ಕಾಗೆ ಸತ್ತರೆ ಎಲ್ಲವೂ ಸೇರಿ ವೇದನೆಪಡುತ್ತವೆ. ಕೊಳವೆಬಾವಿಯಲ್ಲಿ ಕೊನೆ ಉಸಿರೆಳೆದ ಕಾವೇರಿಯ ಗೋರಿಯ ಮೇಲೆ ಆಕೆ ಸಾಕಿದ ಶ್ವಾನ ಕಾವೇರಿಗಾಗಿ ಸಂಕಟಪಟ್ಟಿದೆ. ಹೃದಯವಂತಿಕೆಯ ಇಂಥ ಲೆಕ್ಕಿವಿಲ್ಲದಷ್ಟು ಉದಾಹರಣೆಗಳನ್ನು ಕೊಡಬಹುದು. ಇಡೀ ಪ್ರಾಣಿ ಸಂಕುಲಕ್ಕೆ ಸೌಹಾರ್ದ ಬದುಕಿಗೆ ಪ್ರಕೃತಿ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಬುದ್ದಿವಂತನಾದ ಮನುಷ್ಯ ಮಾತ್ರ ಪ್ರಕೃತಿ ನಿಯಮಕ್ಕೆ ಹೊರತಾದ ಸುಳ್ಳುಗಳನ್ನು ಸೃಷ್ಟಿಸಿಕೊಂಡು ಅದರ ವ್ಯೂಹದಲ್ಲಿ ಭ್ರಮಾತ್ಮಕವಾಗಿ ಬದುಕಲು ಹಪಹಪಿಸುತ್ತಿದ್ದಾನೆ. ಅದೇ ಸಾಧನೆ ಎಂದು ಹೇಳಿಕೊಳ್ಳುವ ಬಿಗುಮಾನ ಜಾಸ್ತಿಯಾಗುತ್ತ ಸಾಗಿದೆ. ಆದರೆ, ಮನುಷ್ಯನ ಈ ಸುಳ್ಳುಗಳ ಮುಂದೆ ಪ್ರಕೃತಿ ಹೆಡೆಎತ್ತಿನಿಂತಾಗ, ಸಾವು ಎದುರಿಗೆ ನಿಂತು ಸ್ಮಾಯಲ್ ಕೊಟ್ಟಾಗ ಬದುಕಿನ ವಸ್ತುಸ್ಥಿತಿ ತಕ್ಷಣ ಅರ್ಥವಾಗಿ ಎಲ್ಲಾಕಡೆ ಬೆವರು ಇಳಿಯಲು ಸುರುವಾಗುತ್ತದೆ. ಈ ಮಾತುಗಳನ್ನು ಅಧ್ಯಾತ್ಮಕ್ಕೆ ಗಂಟುಹಾಕಿ ಕೈತೊಳೆದುಕೊಳ್ಳಬೇಕಾಗಿಲ್ಲ. ಇದು ನಿಸರ್ಗ ಸತ್ಯ.

ಈ ಸತ್ಯವನ್ನು ಮರೆತು ಸಾಗುವ ಮನುಷ್ಯ ಸಾವನ್ನು ಎದುರುಗೊಂಡಾಗÀ ‘ಪ್ರಕೃತಿ ಸತ್ಯ’ದ ದರ್ಶನ ಪಡೆದುಕೊಳ್ಳುತ್ತಾನೆ. ಸುಳ್ಳುಗಳ ಜಾಲವನ್ನು ನಿತ್ಯ ಬಿಗಿಗೊಳಿಸುತ್ತ ಸಾಗುತ್ತಿರುವ ಮನುಷ್ಯ ತನ್ನ ಬೇಜವಾಬ್ದಾರಿ ವರ್ತನೆಯಿಂದಾಗಿ ತಾನು ಹೆಣೆದ ಜಾಲದಲ್ಲಿಯೇ ಬಿದ್ದು ಅಕಾಲಿಕವಾಗಿ ಸಾಯುತ್ತಿದ್ದಾನೆ ಇಲ್ಲ ಪ್ರತಿಕ್ಷಣ ಆತಂಕಕ್ಕೆ ಒಳಗಾಗಿದ್ದಾನೆ. ಇದಾವುದರ ಪರಿವೆಯಿಲ್ಲದ ಕಾವೇರಿಯಂತಹ ಮುಗ್ಧ ಮಕ್ಕಳನ್ನು ಅಮಾನವೀಯವಾಗಿ ದೂಡುತ್ತಿದ್ದಾನೆ. ವಿಚಿತ್ರವೆಂದರೆ ಮತ್ತೇ ಅದರಿಂದ ಪಾರುಮಾಡಲು ಎಲ್ಲಬಗೆಯ ಸಾಹಸದ ಮೂಲಕ ಪಡೆಬಾರದು ಕಟ್ಟಪಡುತ್ತಿದ್ದಾನೆ. ಜಾತಿ, ಧರ್ಮ, ವರ್ಗ, ಯುದ್ಧ, ಲಿಂಗ, ಜನಾಂಗೀಯ, ಬಣ್ಣ, ಪ್ರತಿಷ್ಠೆಯಂಥ ವರ್ತನೆ ಆಚರಣೆ ಮೂಲಕ ಇಂದು ಮನುಷ್ಯ ತನ್ನ ಆತಂಕದ ಬದುಕಿಗೆ, ಅಕಾಲಿಕ ಸಾವಿಗೆ ಸುಳ್ಳುಗಳ ತೆಗ್ಗಗಳನ್ನು ವಿಸ್ತಾರಗೊಳಿಸುತ್ತ ಸಾಗಿದ್ದಾನೆ.  ಪ್ರಸ್ತುತ ಸನ್ನಿವೇಶದ ದುರಂತವೆಂದರೆ, ಪ್ರಜ್ಞಾವಂತರೆನಿಸಿಕೊಂಡವರು, ಧಾರ್ಮಿಕ ಪುರುಷರು, ನೀತಿ ನಿಯಮಗಳ ಬಗ್ಗೆ ಬೋಧನೆ ಮಾಡುವವರು ಇವುಗಳ ನಿವಾರಣೆ ಹೆಸರಿನಲ್ಲಿ ಅವುಗಳ ಕಂದಕವನ್ನು ಇನ್ನಷ್ಟು ಆಳ ಮತ್ತು ಅಗಲಗೊಳಿಸುತ್ತಿದ್ದಾರೆ. ಇಂಥ ಅಮಾನವೀಯ ವರ್ತನೆ ಹಿಡಿಯ ಮಂದಿಯ ಕಿತಾಪತಿಯಾದರೂ ಅದರ ತೀವ್ರ ಪ್ರಭಾವ ಇಡೀ ವ್ಯವಸ್ಥೆಯ ಮೇಲೆ ತೀವ್ರ ಪ್ರಭಾವ ಬೀರಿ ತಲಾಂತರಗಳು ಅನುಭವಿಸಬೇಕಾಗುತ್ತದೆ. ಆದರೆ, ಹಿಡಿ ಮಂದಿಯ ಈ ಕಿತಾಪತಿಗೂ ಮೀರಿದ  ಮಾನವೀಯ ಸೆಲೆ ಇಲ್ಲಿ ಜಾಸ್ತಿ ಇರುವುದರಿಂದ ಮನುಷ್ಯ ಬದುಕು ಮುಂದುವರಿಕೆಗೆ  ಸಾಧ್ಯತೆಯಾಗಿದೆ.

ಸ್ವಭಾವತಃ ಮಾನವೀಯತೆಗೆ ಮಿಡಿಯುವ ಮನುಷ್ಯ, ತನ್ನ ನೆಮ್ಮದಿ ಬದುಕಿಗೆ  ಶೋಧಿಸಿಕೊಂಡವುಗಳನ್ನು ನಿರ್ವಹಣೆಯಲ್ಲಿನ ಬೇಜವಾಬ್ದಾರಿ ಹಾಗೂ ನಿಷ್ಕಾಳಜಿ ವರ್ತನೆಯಿಂದಾಗಿ ಅನಾಹುತಗಳನ್ನು ಎದುರುಹಾಕಿಕೊಳ್ಳುಂತಾಗಿದೆ. ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸಂಭವಿಸಿದ ಕೊಳವೆಬಾವಿಯಲ್ಲಿಯ ಮುಗ್ಧ ಮಗುವಿನ ಸಾವಿನ ದುರಂತ ಪತ್ಯಕ್ಷ ಹಾಗೂ ಪರೋಕ್ಷವಾದ ಇಂಥ ವರ್ತನೆಗಳತ್ತ ನೇರವಾಗಿ ಬೆರಳು ಮಾಡಿ ತೋರಿಸುತ್ತದೆ. ಆದರೂ ಮಗುವನ್ನು ಸಂರಕ್ಷಿಸಬೇಕು, ಜೀವ ಸಹಿತ ಹೊರತರಬೇಕು ಎಂಬ ಮಾನವೀಯ ಪ್ರಯತ್ನ ಸತತ ಎರಡು ದಿನಗಳ ಕಾಲ ಸುಮಾರು 54 ಗಂಟೆಗಳವರೆಗೆ ಅಹೋರಾತ್ರಿ ನಡೆಯಿತು. ಆದರೂ, ಭೂಗರ್ಭದಿಂದ ಕಾವೇರಿಯನ್ನು ಜೀವಂತವಾಗಿ ಪಡೆದುಕೊಳ್ಳಲು ಸಾಧ್ಯವಾಗದೇ ಇರುವುದು ದುರಂತ ಸನ್ನಿವೇಶಕ್ಕೆ ಕಾರಣವಾಯಿತು.  ಜಾಣೆಯಾಗಿದ್ದ ಮುಗ್ಧಜೀವವನ್ನು ಕಳೆದುಕೊಂಡ ಜನ್ಮದಾತರಿಗೆ ಸಮಾಧಾನ ಹೇಳುವುದನ್ನು ಬಿಟ್ಟರೆ ಬೇರೆ ಏನೂ ಉಳಿದಿಲ್ಲ.

ಆದರೆ, ಕಾವೇರಿ ಕೇವಲ ಸವಿತಾ ಮತ್ತು ಅಜೀತ ದಂಪತಿಗಳ ಮಗಳು ಮಾತ್ರವಲ್ಲ ‘ನಮ್ಮೆಲ್ಲರ ಮಗಳು’ ಎಂದು ಆ ಸನ್ನಿವೇಶದಲ್ಲಿ ಮಿಡಿದ ಮನಸ್ಥಿತಿ-ಸಂದರ್ಭ ಮಾತ್ರ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿಶ್ವಸಂಸ್ಥೆಯ ಒಡಂಬಡಿಕೆಗೆ ಭಾರತವೂ ಸಹಿ ಹಾಕಿದೆ. ಆ ಒಡಂಬಡಿಕೆಯ 6ನೇ ಪರಿಚ್ಛೇದಿನಲ್ಲಿ “ಪ್ರತಿ ಮಗುವಿಗೆ ಸಾಯದೆ ಬದುಕುಳಿಯಲು ಹಕ್ಕು ಇದೆ. ಮಕ್ಕಳು ಉಳಿದು ಅಭಿವೃದ್ಧಿ ಹೊಂದುವುದನ್ನು ಖಾತರಿಪಡೆಸುವುದು ಸರ್ಕಾರದ ಕರ್ತವ್ಯ’’ ಎಂದು ಸೂಚಿಸಲಾಗಿದೆ. ಕಾವೇರಿ ಪ್ರಕರಣದಲ್ಲಿ ಸರಕಾರ ಇದನ್ನು ಪಾಲಿಸಿ ಎಂದು ಕೆಲವರು ಅಂದುಕೊಳ್ಳಬಹುದು. ಹೌದು ಜಿಲ್ಲಾಡಳಿತದ ಮೂಲಕ ಸರ್ಕಾರ ಜವಾಬ್ದಾರಿಯಿಂದ ಆ ಸನ್ನಿವೇಶವನ್ನು ನಿರ್ವಹಿಸಿದೆ. ವಿಶ್ವಸಂಸ್ಥೆಯ ನೀತಿಯನ್ನು ಪಾಲಿಸಲು ಆಡಳಿತದ ಎದುರು ಸುಲಭವಾದ ಅನ್ಯಮಾರ್ಗಗಳಿದ್ದರೂ ಅದಕ್ಕೆ ಅವಕಾಶ ನೀಡದೆ, ಬೆಳಗಾವಿ ಜಿಲ್ಲಾ ಆಡಳಿತ ಕಾರ್ಯಚರಣೆಗೆ ಒಳ್ಳೆಯ ಸಾಥ್ ನೀಡುವುದರ ಮೂಲಕ ನೀತಿಗೂ ಮೀರಿದ ಮಾನವೀಯತೆಯನ್ನು ಸಾಬೀತುಪಡಿಸಿದೆ. ಹವಾನಿಯಂತ್ರಿತ ಕೋಣೆಗಳಲ್ಲಿ ಆಡಳಿತ ನಡೆಸಬೇಕಾದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರು  ಸುಡುಬಿಸಿಲನ್ನು ಪರಿಗಣಿಸದೆ, ರಾತ್ರಿ ನಿದ್ದೆಗೆಟ್ಟದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಘಟನಾಸ್ಥಳದಲ್ಲಿಯೇ ಉಳಿದುಕೊಂಡು ಉಸ್ತುವಾರಿಯನ್ನು ನೋಡಿಕೊಂಡಿರುವುದು ಸಾರ್ವಜನಿಕರು ಮಾಧ್ಯಮಗಳು ಸಾಕ್ಷಿ ನುಡಿದಿವೆ. ಸ್ಥಳೀಯ ಶಾಸಕರು, ಇನ್ನುಳಿದ ಜನ ಪ್ರತಿನಿಧಿಗಳು ಇದಕ್ಕೆ ಹೊರತಾಗಿಲ್ಲ. ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲಾ ಎಂದು ಅಗ್ನಿಶಾಮಕದಳದ ಪೊಲೀಸರು ಮಗುವಿಗಾಗಿ ಕಣ್ಣೀರಟ್ಟರು, ಮಗುವಿನ ಚಲನವಲನ ಗಮನಿಸಿದ್ದ ರಾಷ್ಟ್ರೀಯ ವಿಪ್ಪತ್ತು ನಿರ್ವಹಣೆಯ ತಂಡ ಹಾಗೂ ಹಟ್ಟಿ ಚಿನ್ನದ ಗಣಿಯ ತಂಡದವರು ಮಗು ಜೀವಂತವಿರು ಸಾಧ್ಯತೆಯ ಬಗ್ಗೆ ಒಳಗೊಳಗೆ ಅನುಮಾನಿಸಿದರೂ ಜೀವಂತವಾಗಿಯೋ ಹೆಣವಾಗಿಯೋ ಹೊರತರಲು ದೈಹಿಕ ಮತ್ತು ಮಾನಸಿಕ ಹೈರಾಣದ ಬಗ್ಗೆ ಒಂದಿಷ್ಟು ಪರಿಗಣಿಸದೆ  ಕಲ್ಲುಗಳನ್ನು ಪುಡಿಮಾಡಿ ಮಗುವನ್ನು ಹೊರತಂದರು.  ಮಗು ಜೀವಂತ ಬರಬಹುದು ಎಂದು ಅನುಮಾನದ ಮಧ್ಯಯೇ ಸಾರ್ವಜನಿಕರು ಪ್ರತಿಕ್ಷಣ ಆಶಿಸಿದರು, ದೇವರಿಗೆ ಹರಕೆಹೊತ್ತರು, ಪೂಜೆ ಸಲ್ಲಿಸಿದರು, ದೇವರನ್ನು ಆರಾಧಿಸಿದರು. ಇದು ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ವಿಶ್ವಸಂಸ್ಥೆ ತನ್ನ ಒಡಂಬಡಿಕೆಯಲ್ಲಿ ಸೂಚಿಸಿದ ನೀತಿಯ ಒಳಗಡೆ ಮಾತ್ರವಲ್ಲ ಅದನ್ನು ಮೀರಿದ ಮಾನವೀಯತೆಗೆ ನಿದರ್ಶನವಾಗಿದೆ. ಸರಕಾರದ ನೀತಿಗಳಿಗೆ ಮೀರಿದ ಮನುಷ್ಯತ್ವ ಇಲ್ಲಿ ಜೀವಂತವಿದೆ ಎಂಬುದಕ್ಕೆ ಇಂಥ ಅನೇಕ ಪ್ರಕರಣಗಳು ನಿತ್ಯ ನಡೆಯುತ್ತಲೇ ಇರುತ್ತವೆ; ಮನಸ್ಸುಗಳು ಮಿಡಿಯುತ್ತಲೇ ಇವೆ.

ಜಗತ್ತಿನಲ್ಲಿ ಹಿಡಿಹಿಡಿಯಾಗಿರುವ ಇಂಥ ಮಾನವೀಯ ಸಂಸ್ಕøತಿ ಅಧಿಕಾರ ಹಾಗೂ ಕೋಮುವಾದ ಮಧದಿಂದ ಮೆರೆಯುವ ರಾಷ್ಟ್ರಗಳಿಗೆ ಹಾಗೂ ಬಂಡವಾಳಶಾಹಿ ವ್ಯವಸ್ಥೆಗೆ ಮಾದರಿಯಾಗಬೇಕಾಗಿದೆ. ಸಂಪತ್ತಿನ ಸಂಗ್ರಹ, ತಾಂತ್ರಿಕ ಸಾಧನೆ, ಅಭಿವೃದ್ಧಿಯ ದಿಮಾಕು, ಕೋಮುವಾದದ ಹುಸಿಸಂಸ್ಕøತಿಯ ನಶೆಯಲ್ಲಿ ತೇಲಾಡುತ್ತಿರುವ, ಯುದ್ಧ ಸಡ್ಡು ಹೊಡೆಯುತ್ತಿರುವ ಕೆಲ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಭುತ್ವ ವ್ಯವಸ್ಥೆ ಎದುರಿಗೆ ಇಂಥ ಮಾನವೀಯತೆಯನ್ನು ತೆರೆದಿಡುವ ಕೆಲಸ ನಡೆಯಬೇಕಾಗಿದೆ. ಆ ಮೂಲಕ ಹಿಡಿಹಿಡಿಯಾಗಿರುವ ಮಾನವೀಯ ಸೆಲೆಯ ವ್ಯಾಪಕ ಸಂಸ್ಕøತಿಯನ್ನು ಇಡೀಯಾಗಿ ಮನುಷ್ಯಧರ್ಮ ನೆಲೆಯಲ್ಲಿ ಗಟ್ಟಿಯಾಗಿ ಕಟ್ಟಿ ಹೂವುಗುಚ್ಛ ನೀಡುವುದನ್ನು ಪ್ರಭುತ್ವಕ್ಕೆ, ಬಂಡವಾಳಶಾಹಿ ವ್ಯವಸ್ಥೆಗೆ ಕಲಿಸಿಕೊಡಬೆಕಾದ ಅನಿವಾರ್ಯತೆ ಇಂದು ಮತ್ತೇ ಒದಗಿ ಬಂದಿದೆ.  ಇಂಥ ದೀವಿಗೆಯನ್ನು ಎತ್ತಿಹಿಡಿಯುವ ನಿಜವಾದ ಬದ್ಧತೆಯ ಬುದ್ಧನಂಥವರಿಗೆ ಕಾಲ ಕೇಳುತ್ತಿದೆ.
•   ಡಾ. ಕೆ. ಎನ್. ದೊಡ್ಡಮನಿ,
ಬೆಳಗಾವಿ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *