ಬೆಳಗಾವಿ-ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟೀಷರ ರುಂಡ ಚೆಂಡಾಡಿದ ಕ್ರಾಂತಿಯ ನೆಲ ವೀರರಾಣಿ ಕಿತ್ತೂರ ಚನ್ನಮ್ಮ ನಾಡಿನಲ್ಲೂ ರೈಲು ಗಾಡಿ ಓಡಾಡುವ ಕಾಲ ಕೂಡಿ ಬಂದಿದೆ,ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಇಚ್ಛಾಶಕ್ತಿಯಿಂದಾಗಿ ಐತಿಹಾಸಿಕ ನಗರಿ ಕಿತ್ತೂರಿಗೂ ರೈಲು ಬರಲಿದೆ.
ಬಹುದಿನಗಳ ಕನಸನ್ನು ಸಚಿವ ಸುರೇಶ ಅಂಗಡಿ ನನಸು ಮಾಡಿದ್ದು, ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ರೈಲು ಕಾಮಗಾರಿಯ ನೀಲನಕ್ಷೆ ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು, 927.40 ಕೋಟಿ ರೂ. ವೆಚ್ಚದ ಈ ಕಾಮಗಾರಿ ಶೀಘ್ರ‍್ರದಲ್ಲಿ ಆರಂಭವಾಗಲಿದೆ. ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಜನತೆಗೆ ಇದು ಬಹಳ ಅನುಕೂಲಕರವಾಗಲಿದೆ ಎಂದು ಹೇಳಿದರು.
ಈ ನೂತನ ರೈಲು ಮಾರ್ಗದಲ್ಲಿ 11 ನಿಲ್ದಾಣಗಳು ಬರಲಿವೆ. ಬೆಳಗಾವಿ, ದೇಸೂರು, ಕರವಿನಕೊಪ್ಪ, ಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ, ಹೂಲಿಕಟ್ಟಿ, ಕಿತ್ತೂರು, ತೇಗೂರು, ಮುಮ್ಮಿಗಟ್ಟಿ, ಕ್ಯಾರಕೊಪ್ಪ ಹಾಗೂ ಧಾರವಾಡ. ಕಡಿಮೆ ಅವಧಿಯಲ್ಲಿ ಧಾರವಾಡಕ್ಕೆ ತಲುಪಲು ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಬೆಳಗಾವಿ, ಧಾರವಾಡ ಜನತೆಯ ಪರವಾಗಿ ವಿಶೇಷ ಧನ್ಯವಾದ ತಿಳಿಸುವುದಾಗಿ ಹೇಳಿದರು.
73 ಕಿ.ಮೀ. ಅಂತರದ ಈ ನೂತನ ರೈಲು ಮಾರ್ಗ ನಿರ್ಮಾಣ ಕುರಿತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2019-20ರ ಬಜೆಟ್‌ನಲ್ಲಿ ಹೇಳಿತ್ತು. 2019ರಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಸರ್ಕಾರ ಈಗ ಅನುಮೋದನೆ ನೀಡಿ ಬೆಳಗಾವಿ-ಧಾರವಾಡ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿದೆ. ಇದಕ್ಕೆ ಕೇಂದ್ರ ಹಾಗೂ ಸರ್ಕಾರ ತಲಾ ಶೇ. 50%ರಷ್ಟು ಪಾಲು ನೀಡಲಿದೆ.