ಬೆಳಗಾವಿ – ಕೇಂದ್ರದಲ್ಲಿರುವ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಕಾಯ್ದೆಗೆ ಕ್ಯಾಬಿನೆಟ್ ಮೀಟೀಂಗ್ ನಲ್ಲಿ ಅನುಮತಿ ನೀಡುತ್ತಿದ್ದಂತೆಯೇ ಭಾರತದ ರಾಜಕೀಯ ರಂಗದಲ್ಲಿ ನಾರಿ ಶಕ್ತಿ ಜಿಂದಾಬಾದ್ ಎನ್ನುವಂತಾಗಿದೆ.
ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮಹಿಳಾ ಮೀಸಲಾತಿ ಸಿಗಲಿದೆ ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಶ್ರಮಿಸುತ್ತಿರುವ ಮಹಿಳಾ ಕಾರ್ಯಕರ್ತರಿಗೆ ಮಹಿಳೆಯರಿಗೆ ರಾತ್ರೋ ರಾತ್ರಿ ಲಾಟರಿ ಡ್ರಾ ಆಗಿ ಸ್ಥಳದಲ್ಲೇ ಬಹುಮಾನ ಸಿಕ್ಕಿದಂತಾಗಿದೆ.
ಬೆಳಗಾವಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಶ್ರಮಿಸಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಟಿಕೆಟ್ ನಿಂದ ವಂಚಿತರಾಗುತ್ತಿದ್ದ ಹಲವಾರು ಜನ ಮಹಿಳಾ ನಾಯಕಿಯರು ಜಾಕ್ ಪಾಟ್ ಹೊಡೆದಿದ್ದಾರೆ.
ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಹಲವಾರು ವರ್ಷಗಳಿಂದ ಪಕ್ಷಸೇವೆ ಮಾಡುತ್ತಿರುವ ಡಾ.ಸೋನಾಲಿ ಸರ್ನೋಬತ್, ಉಜ್ವಲಾ ಬಡವನ್ನಾಚೆ,ಲೀಣಾ ಟೋಪಣ್ಣವರ, ಜ್ಯೋತಿ ಕೋಲ್ಹಾರ್,ಭಾರತಿ ಮಗದುಮ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಿರುವ ಮಾಜಿ ಜಿ.ಪಂ ಅಧ್ಯಕ್ಷೆ ಅಶ್ವಿನಿ ಪಾಟೀಲ ಸೇರೊದಂತೆ ಹಲವಾರು ಜನ ಮಹಿಳಾ ನಾಯಕಿಯರಿಗೆ ಮಹಿಳಾ ಮೀಸಲಾತಿಯಿಂದ ರಾಜಕೀಯವಾಗಿ ಬೆಳೆಯಲು ಬೂಸ್ಟ್ ಸಿಕ್ಕಿದಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಹಿಳಾ ಮೀಸಲಾತಿಯಿಂದ ಮಹಿಳಾ ಪವರ್ ಹೆಚ್ಚಾಗಿದ್ದು ಜಿಲ್ಲೆಯ ರಾಜಕೀಯ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದ್ದು ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ,ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರ ಮಹಿಳೆಯರಿಗೆ ಮೀಸಲು ಆಗಬಹುದು ಎನ್ನುವ ಕುತೂಹಲ ಹೆಚ್ಚಾಗಿದ್ದು ಈಗಿರುವ ಹಾಲಿ ಶಾಸಕರು ಮತ್ತು ಸಂಸದರಿಗೆ ಢವಢವ ಶುರುವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿಯೂ ಹಲವಾರು ಜನ ಮಹಿಳಾ ನಾಯಕಿಯರು ಪಕ್ಷ ಸೇವೆ ಮಾಡುತ್ತಿದ್ದಾರೆ.ಜಯಶ್ರೀ ಮಾಳಗಿ, ಪ್ರಿಯಾಂಕಾ ಜಾರಕಿಹೊಳಿ ಸಾತಪೂತೆ,ಮೀನಾಕ್ಷಿ ನೆಲಂಗಳೆ,ಕಲ್ಪನಾ ಜೋಶಿ,ಸೇರಿದಂತೆ ಹಲವಾರು ಜನ ಮಹಿಳಾ ನಾಯಕಿಯರಿಗೆ ಮೀಸಲಾತಿಯಿಂದ ಸ್ಪೂರ್ತಿ ಬಂದಂತಾಗಿದೆ.ಈ ಸುದ್ದಿಯಲ್ಲಿ ಕೆಲವೇ ಕಲವು ಮಹಿಳಾ ನಾಯಕಿಯರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ.ಈ ಹೆಸರುಗಳನ್ನು ಹೊರತುಪಡಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಅಗಣಿತ ಮಹಿಳಾ ನಾಯಕಿಯರು ಪಕ್ಷ ಸೇವೆ ಮಾಡುತ್ತಿದ್ದಾರೆ. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ದೆ ಮಾಡಲು ಆರ್ಥಿಕ ಮತ್ತು ರಾಜಕೀಯ ಸಾಮರ್ಥ್ಯ ಹೊಂದಿದ ಮಹಿಳಾ ನಾಯಕಿಯರು ಈಗ ಸಹಜವಾಗಿ ಫ್ರಂಟ್ ಲೈನ್ ಗೆ ಬಂದಿದ್ದಾರೆ.