ಬಿಜೆಪಿ ನಾಯಕರ ಟೀಕಾಸ್ತ್ರಕ್ಕೆ ಕೈ ಅಭ್ಯರ್ಥಿಗಳೇ ಟಾರ್ಗೇಟ್
ಬೆಳಗಾವಿ: ವಿಧಾನ ಪರಿಷತ್ತಿನ ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ಅಬ್ಬರದಿಂದ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಟೀಕಾಸ್ತ್ರ ಮುಂದುವರೆದಿದೆ.ಕಾಂಗ್ರೆಸ್, ಬಿಜೆಪಿ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಬಿಜೆಪಿ ನಾಯಕರು ನೇರವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಗುರಿಯಾಗಿಸಿಕೊಂಡು ನೇರವಾಗಿ ಲಘುವಾಗಿ ಆರೋಪ ಮಾಡುತ್ತಿದ್ದಾರೆ.
ಬುಧವಾರ ಬೆಳಗಾವಿಯ ಕಣಬರ್ಗಿ ರಸ್ತೆಯ ದೇಸಾಯಿ ಲಾನ್ಸ್‌ನಲ್ಲಿ ನಡೆದ ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಟಾರ್ಗೇಟ್ ಮಾಡಿ ಟೀಕಾಸ್ತ್ರ ಪ್ರಯೋಗಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರನ್ನು ಹಳೆಯ ಎತ್ತಿಗೆ ಹೋಲಿಕೆ ಮಾಡಿದರೆ, ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರು ಪ್ರಕಾಶ ಹುಕ್ಕೇರಿ ೩೩ ಹೆಜ್ಜೆ ನಡೆದು ತೋರಿಸಲಿ ಎಂದು ಸವಾಲು ಹಾಕಿದರು.
ಇನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಪದವೀಧರ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಸುನೀಲ ಸಂಕ ನನ್ನ ಗೆಳೆಯ. ಆತನಿಗೆ ಈ ಕ್ಷೇತ್ರದ ವ್ಯಾಪ್ತಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಬರುತ್ತವೆ ಎಂಬ ವಿಚಾರವೇ ಗೊತ್ತಿಲ್ಲ. ಈಗ ಅವರು ಪ್ರಚಾರ ಕಾರ್ಯದಿಂದ ದೂರುಳಿದ್ದಿದ್ದಾರೆ. ಬಿಜೆಪಿ ಗೆಲುವಿನ ಹಾದಿ ಸುಗಮವಾಗಿದೆ ಎಂದರು.
ಕಾರಜೋಳ ಹೇಳಿದ್ದೇನು?
ಒಕ್ಕಲುತನ ಮಾಡುವವರ ಮನೆಯಲ್ಲಿ ಎತ್ತುಗಳನ್ನು ಕಟ್ಟಿರುತ್ತಾರೆ. ಆ ಎತ್ತುಗಳು ಮುಪ್ಪಾಗಿ ನೇಗಿಲು, ಗಳೆ ಹೊಡೆಯಲು ಶಕ್ತಿ ಕಳೆದುಕೊಂಡರೆ, ಆ ಎತ್ತುಗಳ ಹೆಗಲು ತೊಳೆದು ಪೂಜೆ ಮಾಡಿ ಊರಿನಲ್ಲಿ ಬಿಡುವ ಪದ್ದತಿ ಅನಾದಿಕಾಲದಿಂದಲೂ ಇದೆ. ಕಳೆದ ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಅಲ್ಲಿನ ಜನ ಈ ಎತ್ತ ( ಪ್ರಕಾಶ ಹುಕ್ಕೇರಿ) ಯಾವುದೇ ಕೆಲಸ ಮಾಡಲು ಬರುವುದಿಲ್ಲ ಎಂದು ಪೂಜೆ ಮಾಡಿ ಬಿಟ್ಟು ಬಿಟ್ಟಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಯಾರೂ ಅಭ್ಯರ್ಥಿ ಸಿಗಲಿಲ್ಲ ಎಂಬ ಕಾರಣದಿಂದ ಮತ್ತೆ ಅದೇ ಎತ್ತು ತಂದು ನಿಲ್ಲಿಸಿದೆ. ಆ ಮುದಿ ಎತ್ತಿಗೆ ೩೩ ಹೆಜ್ಜೆಯಷ್ಟೇ ಅಲ್ಲ. ಅದರಿಂದ ೧೦ ಹೆಜ್ಜೆ ನಡೆಯಲು ಸಾಧ್ಯಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಮಾತನಾಡಿ, ವಾಯವ್ಯ ಶಿಕ್ಷಕರ ಕ್ಷೇತ್ರದ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ೩೩ ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ನನಗೆ ಈಗ ೪೭ ವಯಸ್ಸು. ನನಗೆ ಎಲ್ಲ ಕ್ಷೇತ್ರದಲ್ಲಿ ಓಡಾಡುವ ಶಕ್ತಿಯಿದೆ. ಕೆಲಸವನ್ನೂ ನಾನು ಮಾಡುತ್ತಿದ್ದೇನೆ. ಆದರೆ, ಕಾಂಗ್ರೆಸ್ ೩೩ ಹೆಜ್ಜೆ ನಡೆಯಲು ಬಾರದಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.ಆ ಅಭ್ಯರ್ಥಿ ೩೩ ಹೆಜ್ಜೆ ನಡೆದು ತೋರಿಸಲಿ ಎಂದು ನೇರವಾಗಿ ಪ್ರಕಾಶಹುಕ್ಕೇರಿ ಅವರಿಗೆ ಸವಾಲು ಹಾಕಿದರು.
ಲಕ್ಷ್ಮಣ ಸವದಿ ಹೇಳಿದ್ದು
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಅಥಣಿಯವ. ಆತ ನನ್ನ ಗೆಳೆಯ. ನೀನ್ಯಾಕೇ ಚುನಾವಣೆಗೆ ನಿಂತಿದೀ ಎಂದು ನಾನು ಆತನಿಗೆ ಕೇಳಿದೆ. ಆದರೆ, ಆತನಿಗೆ ವಾಯವ್ಯ ಪದವೀದರ ಕ್ಷೇತ್ರದ ವ್ಯಾಪ್ತಿ ಮೂರು ಜಿಲ್ಲೆಗಳದ್ದು ಎನ್ನುವ ವಿಚಾರವೇ ಗೊತ್ತಿಲ್ಲ. ಈ ವಿಚಾರ ಗೊತ್ತಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ. ನಾಮಪತ್ರಕ್ಕೂ ಸಹಿ ಮಾಡುತ್ತಿರಲಿಲ್ಲ. ನಮ್ಮ ಅಜ್ಜ, ತಂದೆಯ ಕಾಲದಿಂದಲೂ ನಾವು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ ಎಂದು ಹೇಳಿದ. ಆತ ಚುನಾವಣಾ ಪ್ರಚಾರ ಕಾರ್ಯದಿಂದ ದೂರುಳಿದಿದ್ದಾನೆ. ಚುನಾವಣೆಯಲ್ಲಿ ಆರಿಸಿ ಬರುವುದಾದರೆ ನಿರಾಣಿ ಅವರೇ ಗೆದ್ದು ಬರಲಿಯೆಂದು ಸಂಕ ಹೇಳಿದ್ದಾರೆ. ಹಾಗಾಗಿ ಬಿಜೆಪಿಗೆ ಗೆಲುವಿನ ದಾರಿ ಸುಗಮವಾಗಿದೆ ಎಂದು ಹೇಳಿದರು.