ಬೆಳಗಾವಿ: ಉತ್ತರ ಕರ್ನಾಟಕ ವಿಶೇಷವಾಗಿ ಬೆಳಗಾವಿ ಹಾಗೂ ಬೀದರ್ ಜಿಲ್ಲೆಯಲ್ಲಿ ಮರಾಠಿ ಮತದರಾರರ ಸಂಖ್ಯೆ ಹೆಚ್ಚಿದ್ದು, ಈ ಸಮುದಾಯಕ್ಕೆ ಆದ್ಯತೆ ನೀಡಬೇಕಿದೆ. ಬೆಳಗಾವಿ ಜಿಲ್ಲೆಯಲ್ಲಿ ಮರಾಠಾ ಸಮುದಾಯದ ಮತದಾರರೇ ನಿರ್ಣಾಯಕ ಆಗಿರುವ ಹಲವಾರು ಕ್ಷೇತ್ರಗಳಿವೆ.ಈ ಕ್ಷೇತ್ರಗಳಲ್ಲಿ ಪಕ್ಷದಲ್ಲಿರುವ ಮರಾಠಿ ನಾಯಕರನ್ನು ಗುರುತಿಸಿ ಮುಂಬರುವ ಚುನಾವಣೆಯ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಆಗ್ರಹಿಸಿದರು ಎಂದು ತಿಳಿದು ಬಂದಿದೆ.
ಬೆಳಗಾವಿಯ ಸಂಕಮ್ ಹೋಟೆಲ್ ದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈ ಒತ್ತಾಯ ಮಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ಜಿಲ್ಲಾ ವಿಭಜನೆ ವಿಚಾರದಲ್ಲಿ ಪಕ್ಷದ ಕೆಲ ಮುಖಂಡರ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ವಿಭಜನೆ ಕುರಿತಾಗಿ ಸಚಿವ ಉಮೇಶ ಕತ್ತಿ ಅವರು ಧ್ವನಿ ಎತ್ತಿರುವುದು ಸರಿಯಲ್ಲ. ಇದರಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶಿಸಿ ಸಚಿವ ಉಮೇಶ ಕತ್ತಿಯವರಿಗೆ ಖಡಕ್ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಗ್ರಾಮೀಣ ಜಿಲ್ಲೆಯ ಬಹುತೇಕ ಶಾಸಕರು ಧ್ವನಿಗೂಡಿಸಿದರು ಎಂದು ಗೊತ್ತಾಗಿದೆ.
ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು.
*ಕೋರ್ ಕಮಿಟಿಗೆ ಗುತ್ತಿಗೆದಾರ ಆತ್ಮಹತ್ಯೆ ಶಾಕ್ !*
ಒಳಗೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಡೆಯುತ್ತಿರುವಾಗಲೇ ಇದೇ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಕಮೀಷನ್ ಆರೋಪ ಮಾಡಿದ್ದ ನಗರದ ಗುತ್ತಿಗೆದಾರ ಸಂತೋಷ ಪಾಟೀಲ ಡೆತ್ ನೋಟ್ ಬರೆದಿಟ್ಟು ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಕೋರ್ ಕಮಿಟಿ ಚರ್ಚೆಯ ದಿಕ್ಕೇ ಬದಲಾಯಿತು. ಪಕ್ಷದ ಸ್ಥಳೀಯ ಸಮಸ್ಯೆಗಳ ಬಗ್ಗೆ ನಡೆಯಬೇಕಾದ ಚರ್ಚೆ ಹಿನ್ನೆಲೆಗೆ ಸರಿದು ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಆರೋಪ ಮಾಡಿದ 40 ಪರ್ಸೆಂಟ್ ಕಮೀಷನ್ ಕುರಿತಾಗಿ ಗಂಭೀರ ಚರ್ಚೆ ನಡೆಯಿತು. ಇಂತಹ ಆರೋಪಗಳು ಮತ್ತೆ ಯಾವ್ಯಾವ ಸಚಿವರ ವಿರುದ್ಧ ಕೇಳಿ ಬರುತ್ತಿದೆ ಎಂದು ಅರುಣ್ ಸಿಂಗ್ ಮಾಹಿತಿ ಪಡೆದುಕೊಂಡರು.
ಹೊರಗೆ ಆಪ್ ಗಲಾಟೆ
ಹೋಟೆಲ್ ಒಳಗೆ ಕೋರ್ ಕಮಿಟಿ ಸಭೆ ನಡೆಯುತ್ತಿರುವಾಗಲೇ ರಾಜೀವ್ ಟೋಪನ್ನವರ ನೇತೃತ್ವದಲ್ಲಿ ಆಪ್ ಕಾರ್ಯಕರ್ತರು ಬಿಜೆಪಿ ಮುಖಂಡರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಹೋಟೆಲ್ ನತ್ತ ಬರುತ್ತಿದ್ದ ಆಪ್ ಕಾರ್ಯಕರ್ತರನ್ನು ಪೊಲೀಸರು ಗೇಟ್ ಬಳಿಯೇ ತಡೆದು ವಶಕ್ಕೆ ಪಡೆದರು.
ಮುಂಜಾನೆ ಅತ್ಯಂತ ಹುರುಪಿನಲ್ಲಿದ್ದ ಬಿಜೆಪಿ ನಾಯಕರು ಮಧ್ಯಾಹ್ನ ಈ ಸುದ್ದಿ ಹೊರಬೀಳುತ್ತಿದ್ದಂತೆ ಮಂಕಾದಂತೆ ಕಂಡುಬಂತು. ಮಾಧ್ಯಮವರು ಬೆಳಗ್ಗೆಯಿಂದಲೇ ಬಿಜೆಪಿ ನಾಯಕರ ಮಾತನಾಡಿಸಲು ಹೋಟೆಲ್ ಆವರಣದಲ್ಲಿ ಬೀಡುಬಿಟ್ಟಿದ್ದರು. ಆದರೆ, ಗುತ್ತಿಗೆದಾರನ ಆತ್ಮಹತ್ಯೆ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಯಾವೊಬ್ಬ ಮುಖಂಡರು ಮಾಧ್ಯಮದವರತ್ತ ಸುಳಿಯಲಿಲ್ಲ. ಹೊರೆಗೆ ಬಂದರೂ ತುಟಿ ಬಿಚ್ಚಲಿಲ್ಲ. ಒಟ್ಟಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸುವುದಕ್ಕಾಗಿ ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದ್ದ ಮೆಗಾಪ್ಲಾನ್ ಗೆ ಗುತ್ತಿಗೆದಾರನ ಆತ್ಮಹತ್ಯೆ ಸುದ್ದಿ ಬಹಳಷ್ಟು ಸಂಚನಲ ಮೂಡಿಸಿದೆ.