Breaking News

ಬೆಳಗಾವಿಯಲ್ಲಿ ಇಲೆಕ್ಷನ್ ನೀತಿ ಸಂಹಿತೆ ಫಿನೀಶ್ ಆದ್ಮೇಲೆ…!!

ಅತಿವೃಷ್ಟಿ-ಪ್ರಾಣಹಾನಿ ತಡೆಗೆ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ, ಮೇ 22(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅತಿವೃಷ್ಟಿ ಅಥವಾ ಪ್ರವಾಹ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಮೇ 22) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ತಾಲ್ಲೂಕಿನಲ್ಲಿ ವಿಪತ್ತು ನಿರ್ವಹಣಾ ಸಭೆಯನ್ನು ನಡೆಸಿ ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳ ನಿರ್ವಹಣೆಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಬೆಂಗಳೂರಿನಲ್ಲಿ ನಡೆದಂತಹ ದುರ್ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಯಾವುದೇ ರೀತಿಯ ವಿದ್ಯುತ್ ದುರ್ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಜಮೀನುಗಳಲ್ಲಿ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮವಾಗಿ ಕೆಲವೆಡೆ ಜೀವಹಾನಿಯಾದ ಬಗ್ಗೆ ವರದಿಯಾಗಿರುತ್ತವೆ. ಇಂತಹ ಘಟನೆಗಳು ಮರುಕಳಿಸಬಾರದು.

ಚರಂಡಿ, ಗಟಾರು ಹೂಳೆತ್ತಲು ಸೂಚನೆ:

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇರುವ ಚರಂಡಿಗಳು, ದೊಡ್ಡ ದೊಡ್ಡ ಗಟಾರುಗಳ ಹೂಳೆತ್ತುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕು. ನೀರು ಸರಾಗವಾಗಿ ಹರಿದು ಹೋಗುವಂತೆ ಸ್ವಚ್ಛಗೊಳಿಸಬೇಕು.
ನದಿಯಲ್ಲಿ ಈಜಲು ತೆರಳಿದಾಗ ಪ್ರಾಣಹಾನಿ ಸಂಭವಿಸುತ್ತದೆ. ಆದ್ದರಿಂದ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಇದಲ್ಲದೇ ನದಿ ಪಾತ್ರದ ಅಪಾಯಕಾರಿ ಸ್ಥಳಗಳ ಬಗ್ಗೆ ಫಲಕ ಅಳವಡಿಸಬೇಕು.

ಅನೇಕ ಕಡೆ ಮರಗಳು ಉರುಳಿ ಬಿದ್ದು ಪ್ರಾಣಹಾನಿ ಸಂಭವಿಸುತ್ತಿವೆ. ಆದ್ದರಿಂದ ರಸ್ತೆಬದಿಯ ಮರಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಅಗತ್ಯವೆನಿಸಿದರೆ ಅರಣ್ಯ ಇಲಾಖೆಯ ಜತೆಗೂಡಿ ನಿಯಮಾನುಸಾರ ಟೊಂಗೆಗಳನ್ನು ಅಥವಾ ಮರವನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

ಕುಡಿಯುವ ನೀರಿನ ಕೊರತೆ ಕಂಡುಬಂದರೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.

ಕಂಟ್ರೋಲ್ ರೂಮ್ ಆರಂಭಿಸಲು ಸೂಚನೆ:

ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಹಾಯಕ್ಕಾಗಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗುವುದು. ಅದೇ ರೀತಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೂಡ ಜನರಿಗೆ ತುರ್ತು ನೆರವು ನೀಡಲು ಸಹಾಯವಾಗುವಂತೆ ಕಂಟ್ರೋಲ್ ರೂಮ್ ಆರಂಭಿಸಬೇಕು.

ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಎಲ್ಲ ನದಿಯ ಒಳಹರಿವು ಮೇಲೆ ನಿರಂತರ ನಿಗಾ ವಹಿಸಬೇಕು.
ತುರ್ತು ಸೇವೆಗೆ ಅಗತ್ಯವಿರುವ ಬೋಟ್, ಜೆಸಿಬಿ ಮತ್ತಿತರ ಉಪಕರಣಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು.

ಕಾಳಜಿ ಕೇಂದ್ರ ಪಟ್ಟಿ ಸಿದ್ಧಪಡಿಸಲು ಸೂಚನೆ:

ಪ್ರವಾಹ ಸಂದರ್ಭದಲ್ಲಿ ಜನರನ್ನು ರಕ್ಷಿಸಿದ ಬಳಿಕ ಅವರಿಗೆ ಸೂಕ್ತ ವಸತಿ, ಊಟೋಪಹಾರ ಒದಗಿಸಲು ಅನುಕೂಲವಾಗುವಂತೆ ಕಾಳಜಿ ಕೇಂದ್ರ ಸ್ಥಾಪಿಸಬೇಕಾಗುತ್ತದೆ. ಆದ್ದರಿಂದ ಕಾಳಜಿ ಕೇಂದ್ರಗಳ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಮಳೆಯ ಮುನ್ಸೂಚನೆ ಕುರಿತು ಪ್ರತಿಯೊಂದು ಗ್ರಾಮಗಳ ಜನರಿಗೆ ಮಾಹಿತಿಯನ್ನು ನೀಡಲು ಡಂಗುರ ಸಾರಬೇಕು.

ಸಿಡಿಲು, ಸಚೇತ್ ಹಾಗೂ ಧಾಮಿನಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಸಿಡಿಲು ಬರುವ 30 ನಿಮಿಷಗಳ ಮುಂಚೆಯೇ ಇವುಗಳಲ್ಲಿ ಮಾಹಿತಿ ಲಭಿಸಲಿದೆ.
ಮರಗಳು ಉರುಳಿ ಬಿದ್ದಾಗ ತಕ್ಷಣವೇ ತೆರವುಗೊಳಿಸಲು ಅಗತ್ಯವಿರುವ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಸಿದ್ಧವಾಗಿಟ್ಟುಗೊಳ್ಳಬೇಕು.
ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು‌ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳು ಮತ್ತು ಶಾಲಾ ಕೊಠಡಿಗಳನ್ನು ಗುರುತಿಸಬೇಕು. ಅದೇ ರೀತಿ ಶಿಥಿಲಗೊಂಡ ಮನೆಗಳನ್ನು ಗುರುತಿಸಬೇಕು. ಸಾಧ್ಯವಾದರೆ ಮಳೆಗಾಲದಲ್ಲಿ ಸುರಕ್ಷಿತ ಜಾಗೆಯಲ್ಲಿ ಇರುವಂತೆ ಮನವೊಲಿಸಬೇಕು ಎಂದು ತಿಳಿಸಿದರು.

ಎನ್.ಡಿ.ಆರ್.ಎಫ್. ತಂಡ ಜೂನ್ ನಲ್ಲಿ ಆಗಮಿಸಲಿದ್ದು, ಕಳೆದ ಬಾರಿಯಂತೆ ನದಿತೀರದ ಗ್ರಾಮಗಳಲ್ಲಿ ಅವರು ಪರಿಶೀಲನೆ ನಡೆಸಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮಾತನಾಡಿ, ತುರ್ತು ಸಂದರ್ಭದಲ್ಲಿ ಬರುವ ಕರೆಗಳನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದರು.

ತುರ್ತು ಸಂದರ್ಭದಲ್ಲಿ ಸ್ಪಂದಿಸಲು ತಂಡಗಳನ್ನು ರಚಿಸಬೇಕು. ಪ್ರತಿಯೊಬ್ಬರಿಗೂ ತಮ್ಮ ಕೆಲಸದ ಬಗ್ಗೆ ಸ್ಪಷ್ಟ ಅರಿವು ಇರಬೇಕು. ಅಗತ್ಯವಾದ ತರಬೇತಿ ಮತ್ತು ಅಗತ್ಯ ಸಲಕರಣೆಗಳನ್ನು ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯ ಕೆಲ ಪ್ರಮುಖ ರಸ್ತೆಗಳ ಬದಿಯಲ್ಲಿ ದೊಡ್ಡ ದೊಡ್ಡ ಕಂದಕಗಳಿದ್ದು, ವಾಹನಗಳು ಸುರಕ್ಷಿತವಾಗಿ ಸಾಗಲು ಅನುಕೂಲವಾಗುವಂತೆ ಫಲಕಗಳನ್ನು ಅಳವಡಿಸಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಸ್ಥಳಾಂತರ ಮಾಡಲಾದ ಗ್ರಾಮಗಳಲ್ಲಿ ಈಗಲೂ ಜನರು ವಾಸವಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನದಿತೀರದ ಅಂತಹ ಗ್ರಾಮಗಳ ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಬಲರಾಮ್ ಚವಾಣ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲ ತಹಶೀಲ್ದಾರರು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
****

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *