ಬೆಳಗಾವಿ: ಸಿದ್ದರಾಮಯ್ಯ ನೇತೃತ್ವದ ಸಂಪುಟದ ಮೊದಲ ಪಟ್ಟಿಯಲ್ಲೆ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿರುವ ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ. ಸಚಿವರಾದ ನಂತರ ಮೊಟ್ಟ ಮೊದಲ ಬಾರಿಗೆ ಭಾನುವಾರ ಬೆಳಗಾವಿಗೆ ಆಗಮಿಸುತ್ತಿರುವ ತಮ್ಮ ನೆಚ್ಚಿನ ನಾಯಕನಿಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ.
ಹೌದು 4ನೇ ಬಾರಿ ಕರ್ನಾಟಕದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸತೀಶ ಜಾರಕಿಹೊಳಿ ಸದ್ಯ ರಾಜ್ಯ ರಾಜಕಾರಣದ ಮೋಸ್ಟ್ ಪವರ್ ಫುಲ್ ಲೀಡರ್ ಆಗಿ ಹೊರ ಹೊಮ್ಮಿದ್ದಾರೆ. ಅಲ್ಲದೇ ಅತ್ತ ಬೆಂಗಳೂರಿನಲ್ಲಿ ಸತೀಶ ಮಂತ್ರಿ ಸ್ಥಾನ ಸ್ವೀಕರಿಸುತ್ತಿದ್ದಂತೆ ಇತ್ತ ಬೆಳಗಾವಿಯಲ್ಲಿ ಅವರ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ನಗರದ ರಾಣಿ ಚನ್ನಮ್ಮ ವೃತ್ತ, ಗೋವಾವ್ಹೇಸ್ ನ ವಿಶ್ವಗುರು ಬಸವೇಶ್ವರ ವೃತ್ತ ಬಳಿ ಹಾಗೂ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಸತೀಶ ಜಾರಕಿಹೊಳಿ ಅವರ ದೊಡ್ಡ ಗಾತ್ರದ ಕಟೌಟ್ ಗಳು ರಾರಾಜಿಸುತ್ತಿವೆ. ಅಲ್ಲದೇ ಸಂಕಮ್ ಹೋಟೆಲ್ ರಸ್ತೆ, ಅಶೋಕ ವೃತ್ತ ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ರಸ್ತೆ, ಅಂಬೇಡ್ಕರ್ ರಸ್ತೆ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಶುಭಾಶಯ ಮತ್ತು ಸ್ವಾಗತ ಕೋರುವ ಕಟೌಟ್ ಗಳು ಎಲ್ಲರ ಗಮನ ಸೆಳೆಯುತ್ತಿವೆ. ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಘೋಷಣೆ ಆಗುವ ಮುಂಚೆಯೇ ಅವರ ಅಭಿಮಾನಿಗಳು ಈ ಕಟೌಟ್ ಹಾಕಿದ್ದು ಮತ್ತೊಂದು ವಿಶೇಷವಾಗಿದೆ.
10 ಸಾವಿರ ಬೈಕ್ ರ್ಯಾಲಿ:
ಮೂರು ದಿನಗಳ ಅಧಿವೇಶನ ಬಳಿಕ, ದೆಹಲಿಗೆ ಪ್ರಯಾಣ ಬೆಳೆಸಲಿರುವ ಸತೀಶ ಜಾರಕಿಹೊಳಿ, ಭಾನುವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಈ ವೇಳೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಅದ್ಧೂರಿ ಬೈಕ್ ರ್ಯಾಲಿ ಮೂಲಕ ಅವರನ್ನು ಸ್ವಾಗತಿಸಲು ಅಭಿಮಾನಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಸುಮಾರು 10 ಸಾವಿರ ಬೈಕ್ ಗಳು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದು, ತೆರೆದ ವಾಹನದಲ್ಲಿ ಸತೀಶ ಮೆರವಣಿಗೆ ನಡೆಸಲಿದ್ದಾರೆ. ರಾಣಿ ಚನ್ನಮ್ಮ, ಡಾ. ಬಿ.ಆರ್.ಅಂಬೇಡ್ಕರ್, ಧರ್ಮವೀರ ಸಂಭಾಜಿ ಮಹಾರಾಜ, ವಿಶ್ವಗುರು ಬಸವೇಶ್ವರ, ಸಂಗೊಳ್ಳಿ ರಾಯಣ್ಣ ಸೇರಿ ಮುಂತಾದ ಮಹಾಪುರುಷರ ಪುತ್ಥಳಿಗಳಿಗೆ ಅಂದು ಸತೀಶ ಗೌರವ ಸಮರ್ಪಿಸಲಿದ್ದಾರೆ.
11 ಶಾಸಕರು ಭಾಗಿ:
ಬೆಳಗಾವಿ ಜಿಲ್ಲೆ 18 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಲ್ಲಿ ಸತೀಶ ಜಾರಕಿಹೊಳಿ ಅವರ ಶ್ರಮ ಸಾಕಷ್ಟಿದೆ. ಹೀಗಾಗಿ ಸತೀಶ ಜಾರಕಿಹೊಳಿ ಅವರ ಈ ಅದ್ಧೂರಿ ಸ್ವಾಗತ ಮೆರವಣಿಗೆಯಲ್ಲಿ ಕಾಂಗ್ರೆಸ್ ನ 11 ಶಾಸಕರು ಕೂಡ ಭಾಗವಹಿಸಲಿದ್ದಾರೆ. ಅಲ್ಲದೇ ಸಾವಿರಾರು ಕೈ ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾಗುವ ಮೂಲಕ ಭಾನುವಾರ ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಒಟ್ಟಾರೆ ಕರ್ನಾಟಕದ ಮಾಸ್ ಲೀಡರ್, ಮಾಸ್ಟರ್ ಮೈಂಡ್ ಎಂದು ಕರೆಸಿಕೊಳ್ಳುವ ಸತೀಶ ಜಾರಕಿಹೊಳಿ ಅವರನ್ನು ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳು, ಅಂದು ಬೆಳಗಾವಿಯಲ್ಲಿ ಹಬ್ಬದ ರೀತಿ ಸೆಲೆಬ್ರೇಶನ್ ಮಾಡಲು ನಿರ್ಧರಿಸಿದ್ದಾರೆ.
ಈಗಿನ ಮಾಹಿತಿ ಪ್ರಕಾರ ಸಚಿವ ಸತೀಶ್ ಜಾರಕಿಹೊಳಿ ಅವರು ಭಾನುವಾರ ಬೆಳಗಾವಿಗೆ ಬರ್ತಾರೆ ಎಂದು ಹೇಳಲಾಗುತ್ತಿದೆ.ಕೊನೆಯ ಘಳಿಗೆ ಯಲ್ಲಿ ಸತೀಶ್ ಸಾಹುಕಾರ್ ಬೆಳಗಾವಿಗೆ ಬರುವ ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.ದಿನಾಂಕ ಬದಲಾದರೂ ಸಹ ಅಭಿಮಾನಿಗಳ ಸ್ವಾಗತ ಮಾಡಿಕೊಳ್ಳುವ ಸಂಭ್ರಮದಲ್ಲಿ ಯಾವುದೇ ವ್ಯತ್ಯಾಸ ಆಗೋದಿಲ್ಲ.