ಬೆಳಗಾವಿ- ಮಹಾನಗರಿ,ಕುಂದಾನಗರಿಗೆ ನೀರು ಸರಬರಾಜು ಮಾಡುವ ಜಲದ ಮೂಲ ರಾಕಸಕೊಪ್ಪ ಜಲಾಶಯದಲ್ಲಿ ಕೇವಲ ಮೂರು ಅಡಿ,ರಾಡಿ ನೀರು ಮಾತ್ರ ಬಾಕಿ ಉಳಿದಿಕೊಂಡಿದ್ದು ಜೂನ್ ಹದಿನೈದರವರೆಗೆ ಮಾನ್ಸೂನ್ ಶುರುವಾಗದಿದ್ದರೆ,ಡೆಡ್ ಸ್ಟೋರೇಜ್ ನಿಂದ ನೀರು ಪಂಪ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.
ಬೆಳಗಾವಿ ಮಹಾನಗರಕ್ಕೆ ಹಿಡಕಲ್ ಜಲಾಶಯ ಮತ್ತು ರಾಕಸಕೊಪ್ಪ ಜಲಾಶಯದಿಂದ ನೀರು ಪೂರೈಕೆ ಮಾಡಲಾಗುತ್ತದೆ. ಹಿಡಕಲ್ ಜಲಾಶಯದಿಂದ ನೀರು ಪಂಪ್ ಮಾಡಿ ಬೆಳಗಾವಿಯ ಬಸವನಕೊಳ್ಳದಲ್ಲಿ ನೀರು ಶುದ್ಧೀಕರಣ ಮಾಡಿ ನಗರದ ಆಯ್ದ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ರಾಕಸಕೊಪ್ಪ ಜಲಾಶಯದಿಂದ ನೀರು ಪಂಪ್ ಮಾಡಿ ಲಕ್ಷ್ಮೀ ಟೇಕಡಿಯಲ್ಲಿ ನೀರು ಶುದ್ಧೀಕರಣ ಮಾಡಿ ಬೆಳಗಾವಿ ನಗರದ ನಿಗದಿತ ಭಾಗಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.ಇದು ಬೆಳಗಾವಿ ಮಹಾನಗರದ ನೀರು ಸರಬರಾಜು ಮಾಡುವ ಶೆಡ್ಯುಲ್.
ರಾಕಸಕೊಪ್ಪ ಜಲಾಶಯದಲ್ಲಿ ನೀರು ಖಾಲಿ ಆಗಿದೆ.ಕೇವಲ ಮೂರು ಅಡಿ ರಾಡಿ ನೀರು ಮಾತ್ರ ಬಾಕಿ ಇದೆ.ಹೀಗಾಗಿ ಈ ಜಾಶಯದಿಂದ ನೀರು ಸರಬರಾಜು ಮಾಡುವ ಬೆಳಗಾವಿ ಮಹಾನಗರದ ಪ್ರದೇಶಗಳಿಗೆ ಐದು ದಿನಕ್ಕೊಮ್ಮೆ,ಆರು ದಿನಕ್ಕೊಮ್ಮೆ ನೀರು ಸಪ್ಲಾಯ್ ಆಗುತ್ತಿದೆ. ಹಿಡಕಲ್ ಜಲಾಶಯದಲ್ಲಿ ನೀರಿನ ಪ್ರಮಾಣ ಇದ್ದರೂ ಸಹ ಸಾಮರ್ಥ್ಯ ಕ್ಕಿಂತ ಹೆಚ್ಚು ನೀರು ಪಂಪಿಂಗ್ ಆಗುತ್ತಿಲ್ಲ.ನಗರದಲ್ಲಿ ನೀರು ಸರಬರಾಜು ಸರಿಯಾಗಿ ಆಗದ ಕಾರಣ,ನಗರದಲ್ಲಿ ಸುಮಾರು 30 ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುವ ಅನಿವಾರ್ಯತೆ ಎದುರಾಗಿದೆ.
ಬೆಳಗಾವಿ ಮಹಾನಗರಕ್ಕೆ ನೀರು ಸರಬರಾಜು ಮಾಡುವ ಗುತ್ತಿಗೆಯನ್ನು L&T ಕಂಪನಿ ಪಡೆದಾಗಿನಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆ ಹಳ್ಳ ಹಿಡಿದು ಹೋಗಿದೆ.ಈ ಕಂಪನಿಗೆ ಮೂಗುದಾರ ಹಾಕಿ ಕಂಟ್ರೋಲ್ ಮಾಡುವವರು ಯಾರೂ ಇಲ್ಲದಂತಾಗಿದೆ.ಹೀಗಾಗಿ ಬೆಳಗಾವಿಯ ಜನ ನೀರಿಗಾಗಿ ಪರದಾಡಬೇಕಾಗಿದೆ.