Breaking News

ಬೆಳಗಾವಿಯಲ್ಲಿ ಬಸ್ ಹತ್ತಿದ ಗಣ್ಯರು,ವಡಗಾವಿಗೆ ಹೋದ್ರು..!!

ಬೆಳಗಾವಿ, ): ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲಗಪಿಸುವ “ಶಕ್ತಿ” ಯೋಜನೆಯ ಸದ್ಬಳಕೆ‌ ಮಾಡಿಕೊಂಡು ಮಹಿಳೆಯರು ಸಬಲರಾಗಬೇಕು. ಈ ಯೋಜನೆಯಡಿ ಶೈಕ್ಷಣಿಕ ಪ್ರವಾಸ, ವೃತ್ತಿ ಕೌಶಲ ವೃದ್ಧಿಯಂತಹ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಮಹಿಳೆಯರು ಎಲ್ಲ ರೀತಿಯಿಂದಲೂ ಸಬಲರಾಗಬೇಕು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಹಿಳೆಯರಿಗೆ ಕಿವಿಮಾತು ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದ ವತಿಯಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯಾಗಿರುವ “ಶಕ್ತಿ” ಯೋಜನೆಗೆ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ (ಜೂ.11) ಚಾಲನೆ ನೀಡಿ ಅವರು ಮಾತನಾಡಿದರು.

ಈ ದಿನ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೈಲಿಗಲ್ಲು. ಮಹಿಳೆಯರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ಚಾಲನೆ ದೊರಕಿದೆ. ಈ ಯೋಜನೆಯು ದೇಶಕ್ಕೆ ಮಾದರಿಯಾಗಲಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಐತಿಹಾಸಿಕ ಯೋಜನೆ ಜಾರಿಗೆ ತರಲಾಗಿದೆ. ಯೋಜನೆಯ ಪರ-ವಿರೋಧ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ.

ಈ ಯೋಜನೆಯಿಂದ ಮಹಿಳಾ ಸಮುದಾಯಕ್ಕೆ ಆರ್ಥಿಕವಾಗಿ ಲಾಭವಾಗಲಿದೆ. ಪ್ರತಿದಿನ ಕೆಲಸಕ್ಕೆ ಹೋಗುವ ಮಹಿಖೆಯರು, ಸಣ್ಣಪುಟ್ಟ ಕೆಲಸಗಳಿಗೆ ದೈನಂದಿನ ಪ್ರಯಾಣ ಮಾಡುವರಿಗೆ ಇದರಿಂದ ಪ್ರಯೋಜನ ಆಗಲಿದೆ.

ಮೊದಲ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇನ್ನುಳಿದ ಗ್ಯಾರಂಟಿ ಯೋಜನೆಗಳು ಕೂಡ ಜಾರಿಗೆ ತರಲಾಗುತ್ತಿದೆ‌. ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಪಕ್ಷ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರಲಾಗಯತ್ತಿದೆ.

ಮಹಿಳೆಯರು ಶಕ್ತಿ ಕಾರ್ಡುಗಳನ್ನು ಪಡೆದುಕೊಂಡು ರಾಜ್ಯದಲ್ಲೆಡೆ ಪ್ರಯಾಣ ಮಾಡಲಿದ್ದಾರೆ. ಸರಕಾರಕ್ಕೆ ಆರ್ಥಿಕ ಹೊರೆಯಾದರೂ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯು ಕೂಡ ಲಾಭ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗ್ಯಾರಂಟಿ ಅನುಷ್ಠಾನದಿಂದ ಸರಕಾರಕ್ಜೆ ವಾರ್ಷಿಕ 60 ಸಾವಿರ ಕೋಟಿ ಹೊರೆಯಾದರೂ ಪ್ರವಾಸೋದ್ಯಮ ಪ್ರಗತಿಯಾಗುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಯಾಗಲಿದೆ.
ಗ್ಯಾರಂಟಿ ಮಾತ್ರವಲ್ಲದೇ ಸರಕಾರ ನೀಡಿರುವ ಉಳಿದ ಭರವಸೆಗಳನ್ನು ಕೂಡ‌ ಹಂತ ಹಂತವಾಗಿ ಈಡೇರಿಸಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಪಕ್ಷ ನೀಡಿರುವ ಗ್ಯಾರಂಟಿ ಗಳನ್ನು ಜಾರಿಗೆ ತರಲಾಗುತ್ತಿದೆ. “ಶಕ್ತಿ” ಯೋಜನೆ ಅನುಷ್ಠಾನದ ಮೂಲಕ ಗ್ಯಾರಂಟಿ ಈಡೇರಿಕೆಗೆ ಚಾಲನೆ ದೊರೆತಿದೆ ಎಂದು ಸಮಾರಂಭದ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಳೆದ ಸರಕಾರದ ಅವಧಿಯಲ್ಲಿ 265 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿರುತ್ತದೆ ಎಂದು ಸ್ಮರಿಸಿದರು.

 

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆಸಿಫ್(ರಾಜು) ಸೇಠ್ ಅವರು, ಶಕ್ತಿ ಯೋಜನೆಯ ಜಾರಿಯಿಂದ ಸರಕಾರಕ್ಕೆ ನಷ್ಟವಾಗಲಿದೆ ಎಂದು ಬಹುತೇಕ ಜನರು ವಾದ ಮಂಡಿಸಿದರು. ಆದರೆ ನಷ್ಟವಾದರೂ ಪರವಾಗಿಲ್ಲ; ಮಹಿಳೆಯರು ಸಬಲರಾಗಬೇಕು ಎಂಬ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಹೇಳಿದರು.
ಮಹಿಳೆಯರು ಮಾತ್ರ ಬಸ್ ನಲ್ಲಿ ಪ್ರಯಾಣಿಸುವುದಿಲ್ಲ. ಇಡೀ ಕುಟುಂಬವೇ ಪ್ರಯಾಣ ಮಾಡುವುದರಿಂದ ಸಾರಿಗೆ ಸಂಸ್ಥೆಗೆ ಪರೋಕ್ಷವಾಗಿ ಆದಾಯ ಕೂಡ ಬರಬಹುದು. ವ್ಯವಹಾರ ಹೆಚ್ಚಾದಂತೆ ನಷ್ಟದ ಬದಲು ಒಟ್ಟಾರೆ ಲಾಭದ ಪ್ರಮಾಣ ಹೆಚ್ಚಾಗಬಹುದು ಎಂದು ಅವರು ವಿಶ್ಲೇಷಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ, ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವೇಣುಗೋಪಾಲ್ ಆರ್. ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ್ ರಾಠೋಡ ಸ್ವಾಗತಿಸಿದರು. ಸುನೀತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಅಲಂಕೃತ ಬಸ್ ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಮಹಿಳೆಯರ ಉಚಿತ ಬಸ್ ಪ್ರಯಾಣದ “ಶಕ್ತಿ” ಯೋಜನೆಗೆ ಚಾಲನೆ ನೀಡಿದರು.

ಮಹಿಳೆಯರಿಂದ ತುಂಬಿದ ನಗರ ಸಾರಿಗೆ ಸಂಸ್ಥೆಯ ಬಸ್ ಗಳು ಸಾಂಕೇತಿಕವಾಗಿ ಬೆಳಗಾವಿಯಿಂದ ವಡಗಾವಿಯವರೆಗೆ ಪ್ರಯಾಣ ಬೆಳೆಸಿದವು. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಸೇರಿದಂತೆ ಅನೇಕ ಗಣ್ಯರು ಹಾಗೂ ಅಧಿಕಾರಿಗಳು ಕೂಡ ಬಸ್ ಪ್ರಯಾಣ ಮಾಡಿದರು.
ಈ ಕಾರ್ಯಕ್ರಮದ ಬಳಿಕ ಅಧಿಕೃತವಾಗಿ “ಶಕ್ತಿ” ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣ ಸೇವೆ ಆರಂಭಗೊಂಡಿತು.
***

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *