Breaking News

ಮಕ್ಕಳ ಕಲ್ಯಾಣದ ಕುರಿತು,ಅಧಿಕಾರಿಗಳ ನೀರೀಳಿಸಿದ ಬೆಳಗಾವಿ ಡಿಸಿ.

ಪೋಕ್ಸೋ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬ ಆಗಬಾರದು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, : ಪೋಕ್ಸೋ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಕ್ರಮ ವಹಿಸಬೇಕು. ಇದಲ್ಲದೇ ಜಿಲ್ಲೆಯಲ್ಲಿ ಭಿಕ್ಷುಕ, ನಿರ್ಗತಿಕ, ಅನಾಥ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ(ಜು.19) ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೋಕ್ಸೋ ಅಥವಾ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಪ್ರಕರಣ ದಾಖಲಿಸಲು ವಿಳಂಬವಾದರೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಸಮನ್ಸ್ ನೀಡಿ ಸೂಕ್ತ ಸಮಜಾಯಿಷಿ ಪಡೆದುಕೊಳ್ಳಬೇಕು ಎಂದರು.

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ ಅವರಿಗೆ ನಿಯಮಾನುಸಾರ ಪುನರ್ವಸತಿ ಕಲ್ಪಿಸಿದಾಗಲೂ ಪದೇ ಪದೇ ಅದೇ ಕೆಲಸದಲ್ಲಿ ತೊಡಗಿದರೆ ಅಂತಹವರ ವಿರುದ್ಧ ಪ್ರಜರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 39 ಮಕ್ಕಳ ಪಾಲನಾ ಸಂಸ್ಥೆಗಳಿದ್ದು, ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯವಿರುವ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸಬೇಕಿದೆ.
ಅನಾಥ ಮಕ್ಕಳು, ಏಕ ಪಾಲಕರನ್ನು ಹೊಂದಿರುವ ಮಕ್ಕಳಿಗೆ ಈ ಸಂಸ್ಥೆಗಳಲ್ಲಿ ಸೇರಿಸಿ ಸರಕಾರದಿಂದ ಉತ್ತಮ ಸೌಲಭ್ಯಗಳನ್ನು ಒದಗಿಸಬಹುದು. ಆದ್ದರಿಂದ ಇಂತಹ ಮಕ್ಕಳ ಪಾಲನಾ ಸಂಸ್ಥೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ತಾತ್ಕಾಲಿಕವಾಗಿ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಾಯೋಜಕತ್ವ ಯೋಜನೆಯಡಿ ಮಕ್ಕಳ ಪಾಲಕರು ಜೈಲಿನಲ್ಲಿದ್ದರೆ, ಅನಾಥ ಮಕ್ಕಳು, ಏಕಪೋಷಕ ಮಕ್ಕಳಿಗೆ ಮಿಷನ್ ವಾತ್ಸಲ್ಯ ಯೋಜನೆಯಡಿ 2022-23 ಸಾಲಿನಿಂದ ಆದ್ಯತೆ ಮೇರೆಗೆ ಮಾಸಿಕ 4 ಸಾವಿರ ರೂಪಾಯಿಗಳಂತೆ ಮಕ್ಕಳ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಧನ ಜಮಾ ಮಾಡಲಾಗುತ್ತಿದೆ. ಮೂರು ವರ್ಷಗಳವರೆಗೆ ಈ ಸೌಲಭ್ಯ ನೀಡಲಾಗುತ್ತಿದ್ದು, ಈ ಯೋಜನೆಯಡಿ301 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ. ಅಗತ್ಯತೆ ಇರುವ ಮಕ್ಕಳು ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ತಕ್ಷಣವೇ ಅವರಿಗೆ ತುರ್ತು ವೆಚ್ಚಕ್ಕಾಗಿ ಪ್ರಥಮ ಹಂತದಲ್ಲಿ 5 ಸಾವಿರ ರೂಪಾಯಿ ಹಾಗೂ 3 ದಿನಕ್ಕಿಂತ ಹೆಚ್ಚು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಸಂದರ್ಭದಲ್ಲಿ ಹೆಚ್ಚುವರಿ 5 ಸಾವಿರ ರೂಪಾಯಿ ನೀಡಲು ಅವಕಾಶವಿದೆ. ಈ ಸೌಲಭ್ಯವನ್ನು ಕೂಡಲೇ ಸಂತ್ರಸ್ತರಿಗೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಉದ್ಯೋಗಸ್ಥ ಮಹಿಳೆಯರ ವಸತಿಗಾಗಿ ಮೂರು ವಸತಿನಿಲಯ ಮಂಜೂರಾಗಿದ್ದು, ಅವುಗಳನ್ನು ಕೂಡಲೇ ಆರಂಭಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಭಿಕ್ಷುಕ, ಅನಾಥ ಮಕ್ಕಳ ರಕ್ಷಣೆಗೆ ಸೂಚನೆ:

ಸಂಕಷ್ಟದಲ್ಲಿರುವ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ರಕ್ಷಿಸಿ ಅವರಿಗೆ ತೆರೆದ ತಂಗುದಾಣದಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಭಿಕ್ಷಾಟನೆ, ಚಿಂದಿ ಆಯುವವರು, ತ್ಯಜಿಸಲ್ಪಟ್ಟಿರುವ, ಬೀದಿಯಲ್ಲಿ ಸುತ್ತುವ ಅನಾಥ ಮಕ್ಕಳು ಹೀಗೆ ಆಶ್ರಯ ಅಗತ್ಯವಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯ ಒದಗಿಸಿ ಸೂಕ್ತ ಶಿಕ್ಷಣ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ನಗರಗಳಲ್ಲಿ ಇರುವ ಪ್ರಮುಖ ವೃತ್ತಗಳು, ರೈಲುನಿಲ್ದಾಣ, ಬಸ್ ನಿಲ್ದಾಣ ಮತ್ತಿತರ ಕಡೆಗಳಲ್ಲಿ ನಿಗಾ ವಹಿಸಬೇಕು. ಇಂತಹ ಮಕ್ಕಳು ಕಂಡುಬಂದರೆ ಕೂಡಲೇ ಅವರನ್ನು ಇಂತಹ ತೆರೆದ ತಂಗುದಾಣಗಳಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಒಂದು ವೇಳೆ ದೀರ್ಘಾವಧಿಯ ಪುನರ್ವಸತಿ ಹಾಗೂ ಶಿಕ್ಷಣ ಅಗತ್ಯವಿರುವ ಮಕ್ಕಳನ್ನು ಸಮಾಜಕಲ್ಯಾಣ ಇಲಾಖೆಯ ವಸತಿನಿಲಯಗಳಲ್ಲೂ ಅವಕಾಶ ಕಲ್ಪಿಸಬಹುದು ಎಂದರು.
ಹೊಸದಾಗಿ ಮಂಜೂರಾಗಿರುವ ಸರಕಾರಿ ಮಕ್ಕಳ ದತ್ತು ಕೇಂದ್ರ ಸ್ಥಾಪನೆಗೆ ಜಾಗೆ ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಬಾಲ್ಯವಿವಾಹ ತಡೆಗೆ ಎಲ್ಲ ಅಧಿಕಾರಿಗಳು ಶ್ರಮಿಸಬೇಕು:

ಬಾಲ್ಯವಿವಾಹ ತಡೆಗಟ್ಟಲು ಅನುಕೂಲವಾಗುವಂತೆ ಮಕ್ಕಳ ರಕ್ಷಣಾಧಿಕಾರಿಗಳನ್ನಾಗಿ ಸರಕಾರವು ಅನೇಕ ಅಧಿಕಾರಿಗಳನ್ನು ನೇಮಿಸಲಾಗಿದೆ‌. ಆದರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾತ್ರ ಇದಕ್ಕೆ ಸೀಮಿತಗೊಳಿಸದೇ ಇತರೆ ಅಧಿಕಾರಿಗಳು ಕೂಡ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಶಾಲಾ ಹಂತದಲ್ಲಿ ಮುಖ್ಯೋಪಾಧ್ಯಾಯರು, ಗ್ರಾಮ ಮಟ್ಟದಲ್ಲಿ ಪಿಡಿಓ ಹಾಗೂ ಇತರೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.
ತಾಲ್ಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದಲ್ಲಿ ಮಹಿಳಾ ಕಾವಲು ಸಮಿತಿಯ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದರು.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಹಾಂತೇಶ ಭಜಂತ್ರಿ ಅವರು ಸಭೆಯನ್ನು ನಿರ್ವಹಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮುರುಳಿಮೋಹನ ರೆಡ್ಡಿ, ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತರಾದ ಸ್ನೇಹಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಶುಭಂ ಶುಕ್ಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಆರ್.ನಾಗರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *