ಬೆಳಗಾವಿ-ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸಿ,ಪಾಲಿಕೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಹುಮತದ ಅಧಿಕಾರ ಪಡೆದಿರುವ ಬಿಜೆಪಿಯ ಆಡಳಿತದ ಪ್ರಪ್ರಥಮ ಸಾಮಾನ್ಯ ಸಭೆ,ನಾಳೆ ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆಯಲಿದೆ.
ವಿಧಾನಸಭೆಯ ಬಜೆಟ್ ಅಧಿವೇಶನ ವಿರೋಧ ಪಕ್ಷದ ನಾಯಕನಿಲ್ಲದೇ ನಡೆಯುತ್ತಿದೆ.ಅಲ್ಲಿ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರ ಕಗ್ಗಂಟಾಗಿದ್ದು,ಇಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ ವಿರೋಧ ಪಕ್ಷದ ನಾಯಕನ ವಿಚಾರ ಕಾಂಗ್ರೆಸ್ಸಿಗೆ ಕಗ್ಗಂಟಾಗಿದೆ.ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪಾಲಿಕೆಯಲ್ಲಿ ತಿಕ್ಕಾಟ ಮುಂದುವರೆದಿದ್ದು,ಈ ವಿಚಾರದಲ್ಲಿ ಒಮ್ಮತ ಮೂಡುವ ಲಕ್ಷಣಗಳು ಕಾಣುತ್ತಿಲ್ಲ.
ಬೆಳಗಾವಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಗರ ಸೇವಕರಾದ ಬಾಬಾಜಾನ್ ಮತವಾಲೆ,ರಿಯಾಜ ಕಿಲ್ಲೇದಾರ್ ಸೋಹೆಲ್ ಸಂಗೊಳ್ಳಿ,ಅವರ ನಡುವೆ ಪೈಪೋಟಿ ನಡೆದಿದ್ದು,ಇನ್ನುವರೆಗೆ ಯಾರ ಹೆಸರೂ ಅಂತಿಮವಾಗದೇ ಇರುವದರಿಂದ ನಾಳೆ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ವಿರೋಧ ಪಕ್ಷದ ನಾಯಕನಿಲ್ಲದೇ ನಡೆಯಲಿದೆ.ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಅಸೀಪ್ ರಾಜು ಸೇಠ ಅವರು ಇವತ್ತು ತುರ್ತಾಗಿ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡರೆ ಮಾತ್ರ ನಾಳೆ ನಡೆಯುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಯಾಗುವ ಸಾಧ್ಯತೆಗಳಿವೆ.
ನಾಳೆ ನಡೆಯಲಿರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆಯ ಅಧಿಕಾರಿಗಳ ವರ್ಗಾವಣೆಯ ವಿಚಾರವೂ ಚರ್ಚೆಗೆ ಬರಲಿದೆ.ಮೂರು ವರ್ಷಕ್ಕಿಂತ ಅತೀ ಹೆಚ್ಚು ಅವಧಿಯವರೆಗೆ ಬೆಳಗಾವಿ ಪಾಲಿಕೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆನ್ನುವ ವಿಚಾರ ಈಗಾಗಲೇ ಸಭೆಯ ಅಜೇಂಡಾದಲ್ಲಿ ಫಿಕ್ಸ್ ಆಗಿದೆ.