ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಿಂಗಾಪುರ ಪ್ರವಾಸ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೆ ರಾಜಕಾರಣದಲ್ಲಿ ಅಪರೇಶನ್ ಮಾಸ್ಟರ್ ಮೈಂಡ್ ಖ್ಯಾತಿಯ ರಮೇಶ ಜಾರಕಿಹೊಳಿ ನಡೆಯ ಸುತ್ತ ಅನುಮಾನ ಹುತ್ತ ಹುಟ್ಟಿಕೊಂಡಿದೆ.
ಹೊಸ ಸರಕಾರ ರಚನೆ ಆದಾಗಿನಿಂದ ರಮೇಶ ಜಾರಕಿಹೊಳಿ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇಲ್ಲ. ಈಚೆಗೆ ಮಹಾರಾಷ್ಟ್ರದಲ್ಲಿ ನಡೆದ ಆಪರೇನ್ ಎನ್ ಸಿಪಿ ಕಾರ್ಯಾಚರಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂಬ ಸುದ್ದಿ ಕೇಳಿಬಂದಿತ್ತು.
ಈಗ ಮಾಜಿ ಸಿಎಂ ಸಿಂಗಾಪುರಕ್ಕೆ ಜಿಗಿದ ಬೆನ್ನಲ್ಲೇ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬೀಳಿಸಲು ದೂರದಲ್ಲಿ ಎಚ್ಡಿಕೆ-ಬಿಜೆಪಿ ಸೇರಿ ಖೆಡ್ಡಾ ತೋಡಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.ಇದಕ್ಕೆ ಡಿಸಿಎಂ ಡಿಕೆಶಿ ಹೇಳಿಕೆ ಮತ್ತಷ್ಟು ಟ್ವಿಸ್ಟ್ ನೀಡಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿ ಮುಖಂಡರು ದೂರದಲ್ಲಿ ಕುಳಿತು ಕಾಂಗ್ರೆಸ್ ಸರಕಾರ ಬೀಳಿಸಲು ಪ್ಲಾನ್ ನಡೆಸಿದ್ದಾರೆ ಎಂಬ ಬಾಂಬ್ ಸಿಡಿಸಿದ್ದಾರೆ.
ಡಿಕೆಶಿ ಈ ಹೇಳಿಕೆ ಬೆನ್ನಲ್ಲೇ ರಮೇಶ ಜಾರಕಿಹೊಳಿ ಅವರತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಈ ಮಧ್ಯೆ ರಮೇಶ ಜಾರಕಿಹೊಳಿ ನಿನ್ನೆ ದೆಹಲಿಯಲ್ಲಿ ಕಾಣಿಸಿಕೊಂಡಿದ್ದು, ಸಂಸತ್ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಈ ಹಿಂದೆ ಜೆಡಿಎಸ್- ಕಾಂಗ್ರೆಸ್ ಸರಕಾರ ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿ ಕಾಂಗ್ರೆಸ್ ಸರಕಾರ ಪತನಗೊಳಿಸುವ ಮಹತ್ವದ ಜವಾಬ್ದಾರಿ ನೀಡಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ.