ಬೆಳಗಾವಿ- ಧಾರವಾಡ-ಕಿತ್ತೂರು- ಬೆಳಗಾವಿ ರೈಲ್ವೆ ಮಾರ್ಗ ನಿರ್ಮಾಣ ಕುರಿತಂತೆ ಕಿತ್ತೂರು-ಬೆಳಗಾವಿ ನಡುವೆ ಭೂಸ್ವಾಧೀನಕ್ಕೆ ಅಗತ್ಯವಾದ ಭೂ ಸಮೀಕ್ಷೆ ಕಾರ್ಯ ತಕ್ಷಣ ಕೈಗೊಳ್ಳಬೇಕೆಂದು ಸಂಸದೆ ಮಂಗಳಾ ಅಂಗಡಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯ ನೈರುತ್ಯ ರೈಲ್ವೆ ಮಹಾಪ್ರಬಂಧಕ ಸಂಜೀವ ಕಿಶೋರಿ ಅವರನ್ನು ಸೋಮವಾರ ಭೇಟಿ ಮಾಡಿ ಆಗ್ರಹಿಸಿದರು.ಬೆಳಗಾವಿ-ಕಿತ್ತೂರು-ಧಾರವಾಡ ನಡುವಿನ ಸುಮಾರು 73 ಕಿಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ 2019ರಲ್ಲಿ ಅನುಮೋದನೆ ನೀಡಿ 974 ಕೋಟಿ ರೂ. ಅನುದಾನವನ್ನು ಸಹ ಬಿಡುಗಡೆ ಮಾಡಿದೆ.ಆದರೆ, ನಾಲ್ಕು ವರ್ಷ ಕಳೆದರೂ ನಿಗದಿತ ಮಟ್ಟಕ್ಕೆ ಕಾಮಗಾರಿಯಲ್ಲಿ ಪ್ರಗತಿಯಾಗಿಲ್ಲ. ಕಿತ್ತೂರು-ಬೆಳಗಾವಿ ನಡುವಿನ ಆಯ್ದ ಮಾರ್ಗಗಳಲ್ಲಿ ರೈಲ್ವೆ ಅಧಿಕಾರಿಗಳು ಭೂಸ್ವಾಧೀನಕ್ಕೆ ಭೂಮಿಯ ಸಮೀಕ್ಷೆ ನಡೆಸಿ ಗುರುತಿಸಬೇಕಿದೆ.ಈ ಕಾರ್ಯವನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಿದರೆ ಮಾತ್ರ ಭೂಸ್ವಾಧೀನ ಕಾರ್ಯ ಕೈಗೊಳ್ಳಬಹುದಾಗಿದೆ.ಕಾರಣ ಕೂಡಲೇ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಟಿಳಕವಾಡಿಯ ಲೆವೆಲ್ ಕ್ರಾಸಿಂಗ್ ನಂ.281 ಹತ್ತಿರ ನಡೆಯುತ್ತಿರುವ ರೈಲ್ವೆ ಮೇಲ್ಸೆತುವೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ವಾಹನ ಮಚಾರಕ್ಕೆ ಅಡಚಣೆಯಾಗಿ ವಾಹನ ಸವಾರರು ಪರದಾಡುವಂತಾಗಿದೆ. ಸ್ಥಗಿತಗೊಂಡಿರುವ ಕಾಮಗಾರಿ ಪುನಾರಂಭಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಫಂಡರಪೂರಕ್ಕೆ ಉತ್ತರ ಕರ್ನಾಟಕ ಭಾಗದ ಸಹಸ್ರಾರು ಭಕ್ತರು ದಿನನಿತ್ಯ ಹೋಗಿಬರುತ್ತಾರೆ. ಭಕ್ತರ ಅನುಕೂಲಕ್ಕಾಗಿ ಬೆಳಗಾವಿಯಿಂದ ಫಂಡರಪುರಕ್ಕೆ ನೇರ ರೈಲು ಸಂಪರ್ಕ ಕಲ್ಪಸಲು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಮಹಾಪ್ರಬಂಧಕರು ಶೀಘ್ರದಲ್ಲೇ ಈ ರೈಲು ಆರಂಭಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬೆಳಗಾವಿ-ಪುಣೆ, ಬೆಳಗಾವಿ- ಚೆನ್ನೈ ಮಧ್ಯೆ ರೈಲು ಸಂಪರ್ಕ ಕಲ್ಪಿಸಲು ಸಂಸದರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಈ ವಿಷಯವನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಸಂಸದೆ ಮಂಗಳಾ ಅಂಗಡಿ ಅವರಿಗೆ ರೈಲ್ವೆ ಮಹಾಪ್ರಬಂಧಕರು ಆಶ್ವಾಸನೆ ನೀಡಿದ್ದಾರೆ.