ಕಿತ್ತೂರು ಉತ್ಸವ: ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಬೆಂಗಳೂರು, – ವಿಧಾನಸೌಧದ ಮುಂಭಾಗದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ನಮ್ಮನ ಕಿತ್ತೂರು ಉತ್ಸವ 2023ರ ಅಂಗವಾಗಿ ಆಯೋಜಿಸಲಾದ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ನಾರಿ ಕಿತ್ತೂರು ರಾಣಿ ಚನ್ನಮ್ಮ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆ. ಪ್ರತಿಯೊಬ್ಬರೂ ಈ ನಾಡು ಮತ್ತು ನೆಲವನ್ನು ಪ್ರೀತಿಸಬೇಕು. ಇದು ಪ್ರತಿ ಭಾರತೀಯರ ಜವಾಬ್ದಾರಿ. ಯುವ ಜನರಿಗೆ ಕಿತ್ತೂರು ರಾಣಿ ಚನ್ನಮ್ಮನ ವೀರ ಆದರ್ಶ ಜೀವನದ ಕುರಿತು ಅರಿವು ಮೂಡಿಸುವ ಸಲುವಾಗಿ ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಜಯಂತಿಯನ್ನು ಆಚರಿಸಲು ಆದೇಶಿಸಿದೆ. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಈ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಎಲ್ಲರೂ ಕಿತ್ತೂರು ರಾಣಿ ಚನ್ನಮ್ಮ ಆಗಲು ಸಾಧ್ಯವಿಲ್ಲ. ಆದರೆ, ಅವರ ಧರ್ಯ, ಸಾಹಸ, ದೇಶಪ್ರೇಮ ಹಾಗೂ ಸ್ವಾಭಿಮಾನವನ್ನು ಜೀವನ ದಲ್ಲಿ ಬೆಳಸಿಕೊಳ್ಳಬೇಕು. ಅಕ್ಟೋಬರ್ 23, 24 ಹಾಗೂ 25 ರಂದು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಚನ್ನಮ್ಮ ಕಿತ್ತೂರು ಉತ್ಸವ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಾಡ ಜನರಿಗೆ ಚನ್ನಮ್ಮ ಜಯಂತಿಯ ಶುಭಾಶಯವನ್ನು ತಿಳಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿತ್ತೂರು ಉತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರುಗಳಾದ ವಿನಯ್ ಕುಲಕರ್ಣಿ, ಬಾಬಾ ಸಾಹೇಬ್ ಪಾಟೀಲ್, ಮಹಾಂತೇಶ ಕೌಜಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ. ಧರಣಿದೇವಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *