ಘಟಪ್ರಭಾ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಪ್ರಕರಣ!
ಮುಖ್ಯ ಆರೋಪಿ ಅರೆಸ್ಟ್! ನ್ಯಾಯಾಲಯಕ್ಕೆ ಹಾಜರು!
ಘಟಪ್ರಭಾ: ಹನಿ ಟ್ರ್ಯಾಪ್ ಆರೋಪದಡಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಘಟಪ್ರಭಾ ಪೊಲೀಸರು ಸಂತ್ರಸ್ತ ಮಹಿಳೆ ನೀಡಿದ ಮಾಹಿತಿ ಆಧಾರದ ಮೇಲೆ ಮಹಿಳೆಯರು ಸೇರಿದಂತೆ 25 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಮುಖ್ಯ ಆರೋಪಿ ಅರ್ಜುನ ಗಂಡವ್ವಗೊಳ ಇವನನ್ನು ಶನಿವಾರ ರಾತ್ರಿ ಬಂದಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೃತ್ಯದಲ್ಲಿ ಇತನಿಗೆ ಸಹಕರಿಸಿದ ಮಹಿಳೆಯರು ಮತ್ತು ಪುರುಷರು ಸೇರಿದಂತೆ ಒಟ್ಟು 25 ಕ್ಕೂ ಹೆಚ್ಚು ಜನರ ಮೇಲೆ ಆಯ್.ಪಿ.ಸಿ ಕಲಂ 143, 147,342, 323,354 (ಬಿ), 355,307,504 ಸ.ಕ 149 ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಘಟಪ್ರಭಾ ಪೊಲೀಸರು ಇನ್ನೂಳಿದ ಆರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿರುವ ಸಂತ್ರಸ್ತ ಮಹಿಳೆ ನೀಡಿದ ದೂರಿನಲ್ಲಿ ಸುಮಾರು 25 ಕ್ಕೂ ಹೆಚ್ಚಿನ ಜನರು ಗುಂಪು ಕಟ್ಟಿಕೊಂಡು ನನ್ನ ಮನೆಗೆ ಒಮ್ಮೆಲೆ ಆಗಮಿಸಿ ನನ್ನ ಮೇಲೆ ಹಲ್ಲೆ ಮಾಡಿ, ನೀನು ನಮ್ಮ ಮೇಲೆ ನೀಡಿರುವ ಕೇಸನ್ನು ಹಿಂದಕ್ಕೆ ತೆಗೆದುಕೋ ಮತ್ತು ನಮಗೆ 5 ಲಕ್ಷ ರೂಪಾಯಿ ನೀಡಿದಿದ್ದರೆ ಊರನ್ನು ಬಿಟ್ಟು ಹೋಗು ಅಂತ ಹೆದರಿಸಿ ಆರೋಪಿತರು ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ರಸ್ತೆಯಲ್ಲಿ ಮೆರವಣಿಗೆ ಮಾಡಿ ಕೊರಳಲ್ಲಿ ಚಪ್ಪಲಿ ಹಾರ ಹಾಕಿ ಸಾರ್ವಜನಿಕವಾಗಿ ನನಗೆ ಮಾನಹಾನಿ ಮಾಡಿ ನನ್ನ ಕೈ ಮುರಿದಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ದಾಖಲಿಸಲಾಗಿದೆ.
ಘಟನೆ ಹಿನ್ನಲೆ: ಶುಕ್ರವಾರ ರಾತ್ರಿ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಹನಿ ಟ್ರ್ಯಾಪ್ ಮೂಲಕ ಅಮಾಯಕ ಜನರನ್ನು ಮೋಸ ಮಾಡುತ್ತಿದ್ದಾಳೆಂದು ಆರೋಪಿಸಿ ಸಂತ್ರಸ್ತ ಮಹಿಳೆಯನ್ನು ಕೆಲವು ಮಹಿಳೆಯರ ಗುಂಪು ಬೈದು ಅವಮಾನಗೊಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ನಡೆದಿತ್ತು. ಈ ಘಟನೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಪೊಲೀಸ ಇಲಾಖೆಗೂ ಮುಜಗರ ತಂದಿದ್ದು, ತಪ್ಪಿಸ್ತರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಡ ಹೆಚ್ಚಿದ ಪರಿಣಾಮ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.