ಬೆಳಗಾವಿ-ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ನಡುವಿನ ರಾಜಕೀಯ ಸಮರ ಮುಂದುವರೆದಿದೆ. ಈ ಸಮರ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ರಾಜಕೀಯ ಕಾಳಗ ಅಲ್ಲ ಇದೊಂದು ಬೆಳಗಾವಿ ಜಿಲ್ಲೆಯ ಪಾಲಿಟೀಕಲ್ ವಲ್ಡ್ ವಾರ್ ಎನ್ನುವದರಲ್ಲಿ ಅನುಮಾನವೇ ಇಲ್ಲ.
ಸ್ಮಾರ್ಟ್ ಸಿಟಿ,ಬುಡಾ ನಿವೇಶನ ಹಂಚಿಕೆ, ಮತ್ತು ಮಹಾನಗರ ಪಾಲಿಕೆಯಲ್ಲಿ ಶಾಸಕ ಅಭಯ ಪಾಟೀಲ ಬ್ರಷ್ಟಾಚಾರ ಮಾಡಿದ್ದಾರೆ ಎನ್ನುವದು ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಬೆಂಬಲಿಗರ ಆರೋಪ, ನಿಮ್ಮದೇ ಸರ್ಕಾರವಿದೆ ಬೇಕಾದ್ರೆ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎನ್ನುವದು ಶಾಸಕ ಅಭಯ ಪಾಟೀಲ ಅವರ ಉತ್ತರ.ಬ್ರಷ್ಟಾಚಾರದ ಆರೋಪದ ಕುರಿತು ಈ ಇಬ್ಬರು ನಾಯಕರ ನಡುವೆ ಕಳೆದ ಎರಡು ತಿಂಗಳುಗಳಿಂದ ವಾಕ್ ಸಮರ ನಡೆಯುತ್ತಲೇ ಇದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಡಳಿತಾರೂಢ ಬಿಜೆಪಿ ಕೈಗೊಂಡ ತೆರಿಗೆ ಹೆಚ್ಚಳ ಮಾಡುವ ನಿರ್ಣಯವನ್ನು ತಿರುಚಿ ಪಾಲಿಕೆ ಆಯುಕ್ತರು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಮತ್ತು ವಿವಿಧ ಇಲಾಖೆಗಳಿಗೆ ಶಿಫಾರಸು ಮಾಡುವ ನಿರ್ಣಯ ಕೈಗೊಳ್ಳಲು ಪಾಲಿಕೆಯಲ್ಲಿ ಮುಂದಾದರು, ಇದೇ ಸಭೆಯಲ್ಲಿ ಭಾಗವಹಿಸಿದ ಸಚಿವ ಸತೀಶ್ ಜಾರಕಿಹೊಳಿ ,ಪಾಲಿಕೆ ಆಯಯಕ್ತರಿಂದ ತಪ್ಪಾಗಿದ್ದರೆ ಸರ್ಕಾರಕ್ಕೆ ವರದಿ ಮಾಡಿ, ಅದನ್ನು ಬಿಟ್ಟು ಬೇರೆ ಇಲಾಖೆಗಳಿಗೆ ಪಾಲಿಕೆ ನಿರ್ಣಯ ಕಳುಹಿಸಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡಲು ಅವಕಾಶ ನೀಡುವದಿಲ್ಲ ಎಂದು ಸತೀಶ್ ಜಾರಕಿಹೊಳಿ ಶಾಸಕ ಅಭಯ ಪಾಟೀಲರ ವಾದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಪಾಲಿಕೆಯಲ್ಲಿ ನಡೆದ ವಾದ ವಿವಾದವಾಗಿ ಮೇಯರ್ ಶೋಭಾ ಸೋಮನಾಚೆ ಪಾಲಿಕೆಯಲ್ಲಿ ಸತೀಶ್ ಜಾರಕಿಹೊಳಿ ಹಸ್ತಕ್ಷೇಪ ಮಾಡುತ್ತಿದ್ದಾರೆ ನನಗೆ ಕಿರುಕಳ ಕೊಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿ ಪತ್ರ ಬರೆದಿದ್ದಾರೆ. ಪಾಲಿಕೆಯಲ್ಲಿ ತಿರುಚಿ ತಿದ್ದಲಾಗಿದೆ ಎನ್ನಲಾಗಿರುವ ತೆರಿಗೆ ಹೆಚ್ಚಳದ ನಿರ್ಣಯಕ್ಕೆ ಮೇಯರ್ ಶೋಭಾ ಸೋಮನಾಚೆ ಅವರೂ ಸಹ ಸಹಿ ಮಾಡಿದ್ದಾರೆ.ಮೇಯರ್ ಸಹಿ ಮಾಡಿರುವ ಮೂಲ ಪ್ರತಿ ಪಾಲಿಕೆಯಿಂದ ಮಿಸ್ಸಿಂಗ್ ಆಗಿದೆ ಎಂದು ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಪೋಲೀಸರಿಗೆ ದೂರು ನೀಡಿದ್ದಾರೆ.
ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಮೇಯರ್
ಸತೀಶ್ ಜಾರಕಿಹೊಳಿ ವಿರುದ್ದ ಬೆಳಗಾವಿ ಮೇಯರ್ ಶೋಭಾ ಸೋಮನಾಚೆ ಅವರು ರಾಜ್ಯಪಾಲರಿಗೆ ದೂರು ನೀಡಿದ ಬೆನ್ನಲ್ಲಿಯೇ ರಾಜ್ಯಪಾಲರು ಇಂದು ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಬರುತ್ತಿದ್ದು ಬೆಳಗಾವಿ ಮೇಯರ್ ಶೋಭಾ ಸೋಮನಾಚೆ ಅವರು ರಾಜ್ಯಪಾಲರನ್ನು ಖುದ್ದಾಗಿ ಭೇಟಿಯಾಗಿ ಪಾಲಿಕೆಯಲ್ಲಿ ನಡೆಯುತ್ತಿರುವ ನಡುವಳಿಕೆಗಳ ಕುರಿತು ರಾಜ್ಯಪಾಲರ ಗಮನ ಸೆಳೆಯಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.