ಬೇಡಿಕೆ ಮಂಡಿಸಿದ ಒಂದೇ ದಿನಕ್ಕೆ ಅನುದಾನ ಹಂಚಿದ ಸಚಿವ ಜಾರಕಿಹೊಳಿ
ಹುಕ್ಕೇರಿ : ಬೇಡಿಕೆ ಮಂಡಿಸಿದ ಒಂದೇ ದಿನದಲ್ಲಿ ಅನುದಾನ ಹಂಚಿಕೆ ಮಾಡುವ ಮೂಲಕ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ತಮ್ಮದು ವಿಭಿನ್ನ ವರ್ಕಿಂಗ್ ಸ್ಟೈಲ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಬೆಂಗಳೂರಿನ ನ್ಯಾಯವಾದಿಗಳ ನಿಯೋಗವು ಸಿವಿಲ್ ಕೋರ್ಟ್ ನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗುರುವಾರ ಮಧ್ಯಾಹ್ನ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ನ್ಯಾಯವಾದಿಗಳ ಮನವಿಗೆ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಜಾರಕಿಹೊಳಿ ಅವರು ಸಂಜೆ ವೇಳೆಗೆ ಈ ಎಲ್ಲಾ ಕಾಮಗಾರಿಗಳ ಬೇಡಿಕೆಗೆ ಅನುದಾನ ಹಂಚಿಕೆ ಮಾಡಿ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದರು.
ನ್ಯಾಯಾಲಯದ ವಿವಿಧ ಕಾಮಗಾರಿಗಳಿಗೆ 2.74 ಕೋಟಿ ಅನುದಾನ ಹಂಚಿಕೆ ಮಾಡಿದ್ದು ಈ ಪೈಕಿ 90 ಲಕ್ಷ ವೆಚ್ಚದಲ್ಲಿ ಕಾರ್ ಪಾರ್ಕಿಂಗ್ ನಿರ್ಮಾಣ, 1 ಕೋಟಿ ವೆಚ್ಚದಲ್ಲಿ ಮಾಡರ್ನ್ ಹೈಟೆಕ್ ಶೌಚಾಲಯ ನಿರ್ಮಾಣ, 59 ಲಕ್ಷ ವೆಚ್ಚದಲ್ಲಿ ಸ್ಕೈ ವಾಕ್, 25 ಲಕ್ಷ ರೂ ವೆಚ್ಚದಲ್ಲಿ ಸುಲಭ ಶೌಚಾಲಯ ನವೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಇನ್ನು ಅನುದಾನ ಹಂಚಿಕೆಯಾದ ಮರುದಿನ ಶುಕ್ರವಾರವೇ ಈ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿದ್ದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ ವರಾಳೆ, ಸಚಿವ ಸತೀಶ್ ಜಾರಕಿಹೊಳಿ, ನ್ಯಾಯಮೂರ್ತಿಗಳಾದ ಜಿ. ನರೇಂದರ, ಪಿ.ಎಸ್ .ದಿನೇಶ್ ಕುಮಾರ್, ಸೋಮಶೇಖರ, ಶಶಿಕಿರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.