ಬೆಂಗಳೂರು- ಇಂದು ಬೆಳಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಗೆ ಧಿಡೀರ್ ಭೇಟಿ ನೀಡಿ ಗೌಪ್ಯಸಭೆ ನಡೆಸಿದ್ದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದು, ಪರ್ಸನಲ್ ಚರ್ಚೆ ನಡೆಸಿದ್ದಾರೆ. ಕ್ರೆಸೆಂಟ್ ರಸ್ತೆಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ ನಡೆದಿರುವ ಈ ಸಭೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ವಿಶೇಷವಾಗಿ ಕಾಂಗ್ರೆಸ್‌ನಲ್ಲಿ ಊಹಾಪೋಹಗಳನ್ನು ಹುಟ್ಟುಹಾಕಿದೆ.
ಸಭೆ ಮುಗಿದ ಕೂಡಲೇ ಶಿವಕುಮಾರ್ ನವದೆಹಲಿಗೆ ತೆರಳಿದ್ದಾರೆ. ಈ ಹಿಂದೆ ಜಾರಕಿಹೊಳಿ ತಮ್ಮ ತವರು ಜಿಲ್ಲೆ ಬೆಳಗಾವಿಯಲ್ಲಿ ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ಪ್ರಾಬಲ್ಯಕ್ಕೆ ಸವಾಲು ಹಾಕಿ ಲಿಂಗಾಯತ ನಾಯಕಿಯಾಗಿ ಹೊರಹೊಮ್ಮುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಶಿವಕುಮಾರ್ ನೀಡಿದ ಪ್ರಾಮುಖ್ಯತೆ ಮತ್ತು ಬೆಂಬಲದಿಂದ ಪಿಡಬ್ಲ್ಯೂಡಿ ಸಚಿವರು ಅಸಮಾಧಾನಗೊಂಡಿದ್ದರು.
ಇತ್ತೀಚೆಗೆ ಶಿವಕುಮಾರ್ ಬೆಳಗಾವಿಗೆ ಆಗಮಿಸಿದಾಗ ಅವರಿಗೆ ಸ್ವಾಗತ ಕೋರುವ ಕಾರ್ಯಕ್ರಮದಿಂದಲೂ ಸತೀಶ್ ಜಾರಕಿಹೊಳಿ ಹೊರಗುಳಿದಿದ್ದರು. ಅಲ್ಲದೇ, ಶಿವಕುಮಾರ್ ಅವರನ್ನು ಹೊರಗಿಟ್ಟು ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಡಿನ್ನರ್ ಮೀಟ್‌ನಲ್ಲಿ ಹಾಜರಾಗಿದ್ದರು. ಈ ಬೆಳವಣಿಗೆ ದೊಡ್ಡ ಸಂಚಲನ ಮೂಡಿಸಿತ್ತು. 2028ರಲ್ಲಿ ಸಿಎಂ ಸ್ಥಾನಕ್ಕೆ ನಾನು ಕೂಡಾ ಸ್ಪರ್ಧಿ ಎಂದು ಜಾರಕಿಹೊಳಿ ಹೇಳಿದ್ದರು.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಾರಕಿಹೊಳಿ, ಶಿವಕುಮಾರ್, ಪಕ್ಷ ಸಂಘಟನೆ, ಲೋಕಸಭೆ ಚುನಾವಣೆ, ಜಿಲ್ಲಾಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಅದನ್ನು ಬಿಟ್ಟು ಬೇರೆ ವಿಷಯ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು. ಆದರೆ ಈ ಸಭೆಯ ಮೂಲಕ ಸಚಿವ ಜಾರಕಿಹೊಳಿ ಅವರೊಂದಿಗಿನ ಅಸಮಾಧಾನ ನಿವಾರಿಸಲು ಶಿವಕುಮಾರ್ ಬಯಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಚರ್ಚಿಸಲು ಶಿವಕುಮಾರ್ ನವದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ತಾವು ಆಕಾಂಕ್ಷಿಯಲ್ಲ. ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಜವಾಬ್ದಾರಿ ಇದೆ. ಸದ್ಯಕ್ಕೆ ನಾನು ಅಷ್ಟಕ್ಕೇ ಸೀಮಿತವಾಗಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯ ಮಂತ್ರಿಗಳು ರಾಜಕೀಯ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ, ಕೆಲವು ಜಿಲ್ಲಾಧ್ಯಕ್ಷರ ಬದಲಾವಣೆ ಕುರಿತು ಮಾಲೋಚನೆಗಳಾಗಿವೆ. ಬಂದಷ್ಟೇ ವೇಗವಾಗಿ ವಾಪಸ್ ಹೋಗಿದ್ದಾರೆ. ನಮ್ಮ ಚರ್ಚೆಯ ವೇಳೆ ಬೆಳಗಾವಿ ಜಿಲ್ಲಾ ರಾಜಕಾರಣ ಕುರಿತು ಚರ್ಚೆ ನಡೆದಿಲ್ಲ ಎಂದರು.
ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಕೆಲ ಸಮಸ್ಯೆಗಳಿವೆ. ಕಾಲಕಾಲಕ್ಕೆ ಅವು ಉದ್ಭವಿಸು ತ್ತವೆ ಮತ್ತು ಬಗೆಹರಿಯುತ್ತದೆ. ಅದನ್ನು ನಾವು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುತ್ತೇವೆ. ಉಪಮುಖ್ಯಮಂತ್ರಿಯವರು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈ ಬಗ್ಗೆ ಅವರೊಂದಿಗೆ ಚರ್ಚಿ ಸುವ ಅಗತ್ಯವೂ ಇಲ್ಲ. ಬೆಳಗಾವಿ ಯೊಂದೇ ಅಲ್ಲ ಎಲ್ಲ ಜಿಲ್ಲೆಗಳಲ್ಲೂ ಸ್ಥಳೀಯ ಸಮಸ್ಯೆಗಳು ಇದ್ದೇ ಇರುತ್ತವೆ. ನಮ್ಮ ಸರ್ಕಾರವಷ್ಟೇ ಅಲ್ಲ ಹಿಂದಿನ ಸರ್ಕಾರದಲ್ಲೂ ಆ ರೀತಿಯ ಸಮಸ್ಯೆಗಳಿದ್ದವು ಎಂದು ಹೇಳಿದರು.
ಸದ್ಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದು ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಿರ್ಧರಿಸಿದೆ. ಲೋಕಸಭೆ ಚುನಾವಣೆವರೆಗೂ ಯಥಾಸ್ಥಿತಿಯೇ ಮುಂದುವರೆಯುವ ಸಾಧ್ಯತೆಗಳಿವೆ. ಚಂದ್ರಪ್ಪ ಅವರನ್ನು ಹೊರತುಪಡಿಸಿದರೆ ಉಳಿದ ನಾಲ್ವರು ಕಾರ್ಯಾಧ್ಯಕ್ಷರು ಒಂದಲ್ಲ ಒಂದು ಹುದ್ದೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಿ ಎಂದು ಎಲ್ಲರೂ ಹೇಳಿದ್ದಾರೆ. ಅದು ಚರ್ಚೆಯ ಹಂತದಲ್ಲೂ ಇದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುರಂಗಮಾರ್ಗ ರಸ್ತೆಗಳ ನಿರ್ಮಾಣದ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಯೋಜನೆ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆದರೆ ಯಾವ ಇಲಾಖೆ ಕಾಮಗಾರಿಯನ್ನು ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧಾರವಾಗಿಲ್ಲ. ಬಿಬಿಎಂಪಿಯೇ ಅಥವಾ ಲೋಕೋಪಯೋಗಿ ಇಲಾಖೆಯೇ ಎಂಬುದನ್ನು ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಯವರು ಚರ್ಚಿಸಿ ನಿರ್ಧರಿಸಬೇಕಾಗುತ್ತದೆ. ಈ ವಿಷಯದಲ್ಲಿ ತಮ್ಮ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದಾಶಿವ ಆಯೋಗದ ವರದಿ ಜಾರಿಯಾಗ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಒಮ್ಮೆ ಈ ಬಗ್ಗೆ ನಿರ್ಧಾರ ತೆಗೆದುಕೊಂಡು ಆ ಸಮುದಾಯಗಳಿಗೆ ನ್ಯಾಯ ದೊರಕಿಸಬೇಕಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರು ವರದಿ ಜಾರಿಗೆ ಒತ್ತಾಯಿಸಿ ಮಾದಿಗ ಸಮುದಾಯದ ಮುಖಂಡರು, ಶಾಸಕರು ಮತ್ತು ಸಚಿವರ ಮನೆಗಳಿಗೆ ಮುತ್ತಿಗೆ ಹಾಕಬೇಕು ಎಂದು ಕರೆ ನೀಡಿರುವುದು ತಪ್ಪಲ್ಲ.
ಸಚಿವರಾಗಿದ್ದರೂ ಕೆಲವೊಮ್ಮೆ ಸಮುದಾಯದ ಜೊತೆಯಲ್ಲೂ ನಿಲ್ಲಬೇಕಾಗುತ್ತದೆ. ಇದನ್ನು ಸರ್ಕಾರದ ವಿರುದ್ಧ ಎಂದು ಭಾವಿಸಲಾಗುವುದಿಲ್ಲ ಎಂದರು. ಮಾದಿಗ ಸಮುದಾಯದವರು ಶಾಸಕರ ಮನೆಗೆ ಮುತ್ತಿಗೆ ಹಾಕುವುದು ಹೊಸದೇನಲ್ಲ. ಎಷ್ಟು ಜನ ಬರುತ್ತಾರೋ ಬರಲಿ ನಾನು ಸಿದ್ದನಿದ್ದೇನೆ. ಊಟ ಉಪಚಾರ ಎಲ್ಲವನ್ನು ತಯಾರಿ ಮಾಡಿಕೊಂಡು ಅವರ ಜೊತೆ ಒಂದು ಗಂಟೆ ನಾನು ಕೂಡ ಸಾಂಕೇತಿಕವಾಗಿ ಧರಣಿ ಮಾಡುತ್ತೇನೆ ಎಂದು ಹೇಳಿದರು.
ಕಾಂತರಾಜು ಆಯೋಗದ ವರದಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಮೊದಲು ಅದು ಸರ್ಕಾರಕ್ಕೆ ಸಲ್ಲಿಕೆಯಾಗಲಿ. ಆ ಬಳಿಕ ವಿಧಾನಸಭೆಯಲ್ಲಿ ಒಂದು ವಾರ ಕಾಲ ನಿರಂತರ ಚರ್ಚೆಯಾಗಲಿ ಎಲ್ಲ ಸಮುದಾಯಗಳು ಅಭಿಪ್ರಾಯ ಹೇಳುವ ಮೂಲಕ ಯಾರಿಗೂ ಅನ್ಯಾಯವಾಗದಂತೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಲೋಪವಿದ್ದರೆ ಸಾರಸಗಟಾಗಿ ತಿರಸ್ಕಾರ ಮಾಡಬಹುದು ಇಲ್ಲವಾದರೆ ಅಂಗೀಕಾರದ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.