ರಸ್ತೆ ರಿಪೇರಿ,ಡಿವೈಡರ್ ಗಳಿಗೆ ಸುಣ್ಣ ಬಣ್ಣ, ಗಣ್ಯರಿಗೆ ಊಟ,ವಸತಿ ವ್ಯವಸ್ಥೆ ಮಾಡಿಕೊಂಡು ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿಯ ಸುವರ್ಣಸೌಧ ಸಜ್ಜಾಗಿದೆ.
ಸುವರ್ಣಸೌಧದ ದಶಮಾನೋತ್ಸವದ ಅಂಗವಾಗಿ ಸೌಧಕ್ಕೆ ಆತ್ಯಂತ ಆಕರ್ಷಕವಾದ ದೀಪಾಲಂಕಾರ ಮಾಡಲಾಗಿದ್ದು, ಹೊರಗಡೆ ಲೈಟೀಂಗ್ ನಾಳೆಯಿಂದ ವಿರೋಧಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ಫೈಟೀಂಗ್ ನಡೆಯೋದು ಫಿಕ್ಸ್ ಆಗಿದ್ದು ಎರಡು ವಾರಗಳ ಕಾಲ ಬೆಳಗಾವಿಯ ಶೆಡ್ಯುಲ್ ಫುಲ್ ಟೈಟ್ ಆಗಿದೆ.
ಡಿಸೆಂಬರ್ 4 ರಿಂದ ರಾಜ್ಯದ ಚಳಿಗಾಲ ಅಧಿವೇಶನ ಆರಂಭವಾಗಲಿದೆ.ಅಧಿವೇಶನಕ್ಕೆ ಬೆಳಗಾವಿಯ ಸುವರ್ಣಸೌಧವೂ ಸಿಂಗಾರಗೊಂಡಿದೆ. ಅಧಿವೇಶನ ಯಶಸ್ವಿಗೆ ಇಡೀ ಜಿಲ್ಲಾಡಳಿತವೇ ಕಾರ್ಯಮಗ್ನವಾಗಿದ್ದು, ಅಧಿಕಾರಿಗಳು ಹಗಲಿರಳು ಶ್ರಮಿಸುತ್ತಿದ್ದಾರೆ. ನಾಳೆಯ ಹೊತ್ತಿಗೆ ಇಡೀ ಸರ್ಕಾರ ಬೆಳಗಾವಿಗೆ ಶಿಫ್ಟ್ ಆಗಲಿದ್ದು, ಐದು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜಿಸಲಾಗಿದೆ.
ಡಿಸೆಂಬರ್ 4 ರಿಂದ ಆರಂಭವಾಗಲಿರುವ ಚಳಿಗಾಲ ಅಧಿವೇಶನಕ್ಕೆ ಉತ್ತರ ಕರ್ನಾಟಕ ಶಕ್ತಿ ಕೇಂದ್ರ ಎಂದು ಕರೆಯಿಸಿಕೊಳ್ಳುವ ಸುವರ್ಣಸೌಧ ಸಜ್ಜುಗೊಂಡಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಿರುವ ಸಿದ್ದರಾಮಯ್ಯನವರ ಹೊಸ ಸರ್ಕಾರದ ಮೊದಲ ಚಳಿಗಾಲ ಅಧಿವೇಶನ ಇದಾಗಿದೆ. ತೀವ್ರ ಬರದ ಛಾಯೆ ಮಧ್ಯೆಯೇ ಅಧಿವೇಶನ ಯಶಸ್ವಿಗೆ ಇಡೀ ಜಿಲ್ಲೆಯ ಅಧಿಕಾರಿಗಳು ಹಗಲಿರಳು ಎನ್ನದೇ ಶ್ರಮಿಸುತ್ತಿದ್ದಾರೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಈ ವರ್ಷ ಐವತ್ತು ವರ್ಷ ತುಂಬಿವೆ. ಈ ಕಾರಣಕ್ಕೆ 10 ದಿನಗಳ ಸುವರ್ಣಸೌಧಕ್ಕೆ ದೀಪಾಲಂಕರ ಮಾಡಲಾಗ್ತಿದೆ. ಇನ್ನು ಅಧಿವೇಶನಕ್ಕೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಟಿಯು ಗೆಸ್ಟ್‍ಹೌಸ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಉಪಮುಖ್ಯಮಂತ್ರಿ ಡಿಕೆಶಿ ಪ್ರವಾಸಿ ಮಂದಿರದಲ್ಲಿ ತಂಗಲಿದ್ದಾರೆ. ಇನ್ನುಳಿದ ಸಚಿವರಿಗೆ ಯುಕೆ-27 ಹಾಗೂ ಮೇರಿಯಟ್ ಹೋಟೆಲ್‍ನಲ್ಲಿ ರೂಂ ಕಾಯ್ದಿರಿಸಲಿಸಲಾಗಿದೆ. ಶಾಸಕರು- ಅಧಿಕಾರಿಗಳು ಇನ್ನುಳಿದ ಹೋಟೆಲ್‍ಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಇನ್ನು 10 ದಿನಗಳ ಕಾಲ ಈ ಭಾಗದ ವಿಶೇಷ ಭೋಜನದ ವ್ಯವಸ್ಥೆನ್ನು ಜಿಲ್ಲಾಡಳಿತ ಮಾಡಿದೆ.
ಸುವರ್ಣಸಂಭ್ರಮ ಹಿನ್ನಲೆಯಲ್ಲಿ ಅಧಿವೇಶನದ ಒಂದು ಸುವರ್ಣಸೌಧದಲ್ಲಿ ಮನರಂಜನೆ ಕಾರ್ಯಕ್ರಮ ನಡೆಸಲು ಸರ್ಕಾರ ನಿರ್ಧರಿಸಿದೆ. ಅಧಿವೇಶನ ಅಂತಿಮ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಡಾ. ನಿತೇಶ ಪಾಟೀಲ ಮಾಹಿತಿ ನೀಡಿದ್ದಾರೆ
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತದೆ ಎಂಬ ಕಾರಣಕ್ಕೆ ಭದ್ರತೆ ದೃಷ್ಟಿಯಿಂದ 5 ಸಾವಿರ ಪೊಲೀಸರ ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಭದ್ರತೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಸುಮಾರು 2 ಸಾವಿರ ಪೊಲೀಸರ ವಾಸ್ತವ್ಯಕ್ಕೆ ಸುವರ್ಣಸೌಧಕ್ಕೆ ಸಮೀಪ ಇರುವ ಅಲಾರವಾಡ ಗ್ರಾಮದಲ್ಲಿ ಬೃಹತ್ ಟೌನ್‍ಶಿಪ್ ನಿರ್ಮಿಸಲಾಗಿದೆ. ಪಿಸಿಯಿಂದ ಹವಾಲ್ದಾರ್ ದರ್ಜೆಯ ಪೊಲೀಸ್ ಸಿಬ್ಬಂದಿಗೆ ನಾಲ್ಕು ಜರ್ಮನ್ ಟೆಂಟ್ ಹಾಗೂ ಪಿಎಸ್‍ಐ ದರ್ಜೆಯ ಅಧಿಕಾರಿಗಳಿಗೆ ಚಿಕ್ಕದಾದ ಜರ್ಮನ್ ಟೆಂಟ್ ಹಾಕಿ ಟೌನ್‍ಶಿಪ್ ನಿರ್ಮಿಸಲಾಗಿದೆ. ಒಂದು ಜರ್ಮನ್ ಟೆಂಟ್‍ನಲ್ಲಿ 500 ಸಿಬ್ಬಂದಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಕಾಟ್-ಬೆಡ್, ಫ್ಯಾನ್, ಚಾರ್ಜಿಂಗ್ ಪಾಯಿಂಟ್, ಬಿಸಿ ನೀರು ವ್ಯವಸ್ಥೆ, ಊಟ-ಉಪಹಾರಕ್ಕೆ ಭೋಜನಾಲಯ, ಮನರಂಜನೆಗೆ ಟಿವಿ ರೂಂ, ಸ್ನಾನ ಮಾಡಲು ಬಿಸಿನೀರು ಹಾಗೂ ಶೌಚಗೃಹಗಳನ್ನು ನಿರ್ಮಿಸಲಾಗಿದೆ.
ಇನ್ನು ಮಚ್ಛೆ, ಆಟೋನಗರ, ಎಪಿಎಂಸಿ ಪೊಲೀಸ್ ತರಬೇತಿ ಶಾಲೆ, ಸಾಂಬ್ರಾ ಎರ್‍ಮನ್ ಶಾಲೆಯಲ್ಲಿ ಇನ್ನುಳಿದ 3 ಸಾವಿರ ಪೊಲೀಸ್ ಸಿಬ್ಬಂದಿಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಟೌನ್‍ಶಿಪ್‍ಗೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಸಿದ್ದರಾಮಮಪ್ಪ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಸಿದ್ದರಾಮಪ್ಪ, ಅಧಿವೇಶನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೊಲೀಸರ ವಾಸ್ತವ್ಯಕ್ಕೆ ಹೈಟೆಕ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಹೇಳಿದ್ದಾರೆ.
ಒಟ್ಟಾರೆ ನಾಳೆ ಸೋಮವಾರದಿಂದ ಕುಂದಾನಗರಿ ಬೆಳಗಾವಿಯಲ್ಲಿ ಮಂತ್ರಿಗಳ ಓಡಾಟ, ಸೈರನ್ ಸದ್ದು, ಪ್ರತಿಭಟನೆಗಳ ಅಬ್ಬರ ಹೆಚ್ಚಾಗಲಿದೆ.