ಬೆಳಗಾವಿ: ತಂಬಾಕು ಉತ್ಪನಗಳ ಹುಕ್ಕಾ ಬಾರ್ ಅಂಗಡಿಗಳ ಮೇಲೆ ಬೆಳಗಾವಿ ಪೊಲೀಸರು ಭರ್ಜರಿ ದಾಳಿ ಮಾಡಿದ್ದು, ಅಂದಾಜು 4.50 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ ಹುಕ್ಕಾ ವಶಕ್ಕೆ ಪಡೆಯಲಾಗಿದ್ದು, ಇಬ್ಬರು ಆರೋಪಿಗಳಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೇಂದ್ರ ಸರಕಾರದಿಂದ ನಿಷೇಧವಾಗಿರುವ ಹುಕ್ಕಾ ಬಾರ್ ಹಾಗೂ ತಂಬಾಕು ಉತ್ಪನ್ನದ ಅಂಶಗಳನ್ನು ಯಾವುದೇ ಲೈಸನ್ಸ್ ಇಲ್ಲದೆ, ಎಲ್ಲಿಂದಲೋ ತಂದು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾನೂನು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಮಾಳಮಾರುತಿ, ಮಾರ್ಕೆಟ್ ಹಾಗೂ ಟಿಳಕವಾಡಿ ಠಾಣೆ ಪೊಲೀಸರು ಜಂಟಿಯಾಗಿ ಹುಕ್ಕಾ ಬಾರ್ ಅಂಗಡಿಗಳ ಮೇಲೆ ಮೇಲೆ ದಾಳಿ ಮಾಡಿದ್ದಾರೆ.
ದಾಳಿ ವೇಳೆ 75,500 ರೂ. ಮೌಲ್ಯದ ವಿವಿಧ ಕಂಪನಿಯ 126 ಹುಕ್ಕಾಗಳು, 62 ಸಾವಿರ ರೂ. ಮೌಲ್ಯದ ವಿವಿಧ ಕಂಪನಿಯ 51 ರೋಲ್ ಪೇಪರ್, 15,500 ರೂ. ಮೌಲ್ಯದ 30 ವಿವಿಧ ಕಂಪನಿಯ ಚಾರ್ಕಕೋಲ್, 20,300 ರೂ. ಮೌಲ್ಯದ ವಿವಿಧ ಕಂಪನಿಯ 120 ಬಾಂಗ್ ಪೈಪ್ ಗಳು, 41,500 ರೂ. ಮೌಲ್ಯದ 25 ಪಾಕೀಟ್ ವಿದೇಶಿ ಸಿಗರೇಟ್, 25,300 ರೂ. ಮೌಲ್ಯದ ವಿವಿಧ ಕಂಪನಿಯ ತಂಬಾಕಿನ ಪಾಕೆಟ್ ಸೇರಿದಂತೆ 16, 500 ರೂ. ಮೌಲ್ಯದ ವಿವಿಧ ಕಂಪನಿಯ ಪ್ಲೇವರ್ಸ್ ಪಾಕೆಟ್ ಸೇರಿ ಒಟ್ಟು 4.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಮೂಲದ ಸದ್ಯ ಅನಗೋಳ ನಿವಾಸಿಗಳಾದ ಅಬುಬಕ್ಕರ್ ಜೈನಬ್ ಸಿದ್ಧಿಕ್ (31) ಹಾಗೂ ಶಬಾಬ್ ಶಕೀಲ್ ಅಹ್ಮದ್ (22) ಬಂಧಿತ ಆರೋಪಿಗಳು. ಈ ದಾಳಿಯಲ್ಲಿ ಕಾರ್ಯಾಚರಣೆಯಲ್ಲಿ ಎಸಿಪಿ ಸದಾಶಿವ ಕಟ್ಟಿಮನಿ ಸೇರಿ ಮತ್ತಿತರರು ಭಾಗಿಯಾಗಿದ್ದರು.
ಡಿಸಿಪಿ ರೋಹನ್ ಜಗದೀಶ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮೂರು ತಂಡಗಳನ್ನು ರಚಿಸಿ ಹುಕ್ಕಾ ಬಾರ್ ಮೇಲೆ ದಾಳಿ ಮಾಡಿದ್ದೆವೆ. ವಿದೇಶಿ ತಂಬಾಕು ಉತ್ಪನ್ನ ಹಾಗೂ ಸಿಗರೇಟ್ ತರಿಸಿ ಮಾರಾಟ ಮಾಡಲಾಗ್ತಿತ್ತು. ಬೆಲೆ ಬಾಳುವ ಇ ಸಿಗರೇಟ್ ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಕೇರಳ ಮೂಲದ ಆರೋಪಿಗಳಿಂದ ನಿಷೇಧಿತ ಹುಕ್ಕಾಬಾರ್ ತಂಬಾಕು ಉತ್ಪನ್ನಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದೇವೆ. ಸುರಂಗ ಮಾಡಿ ವಿವಿಧ ಕಂಪನಿಯ ಹುಕ್ಕಾಗಳನ್ನು ಖದೀಮರು ಅಡಗಿಸಿಟ್ಟಿದ್ದರು ಎಂದು ವಿವರಿಸಿದರು.