Breaking News

ಬೆಳಗಾವಿಯ, ಸುವರ್ಣ ಸೌಧದಲ್ಲಿ ಗಡಿ ಆಯೋಗದ ಕಚೇರಿ..

ಗಡಿ ಮತ್ತು ನದಿಗಳ ಸಂರರಕ್ಷಣಾ ಆಯೋಗದ ಸಭೆ
ಗಡಿ ಸಮಸ್ಯೆ-ಅಹವಾಲು ಸ್ವೀಕರಿಸಲು ಸುವರ್ಣ ಸೌಧದಲ್ಲಿ ಗಡಿ ಆಯೋಗದ ಕಚೇರಿ ಸ್ಥಾಪನೆ: ಶಿವರಾಜ್ ಪಾಟೀಲ

ಬೆಳಗಾವಿ, : ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಬೇಡಿಕೆಯಂತೆ ಗಡಿ ಹಾಗೂ ನದಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸ್ಥಳಿಯ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಗಡಿ ಆಯೋಗದ ಕಚೇರಿಯೊಂದನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಲಾಗುವುದು ಎಂದು ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷರಾದ ಶಿವರಾಜ್ ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ (ಮಾ.13) ನಡೆದ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಡಿ ಮತ್ತು ನದಿಗಳ ಆಯೋಗಕ್ಕೆ ಸುವರ್ಣ ವಿಧಾನಸೌಧದಲ್ಲಿ ಎರಡು ಕೊಠಡಿಗಳನ್ನು ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸದರಿ ಆಯೋಗವನ್ನು ಪುನರ್ ರಚನೆಗೆ ಕ್ರಮ ಕೈಗೊಂಡು ಶೀಘ್ರವೇ ಸುವರ್ಣ ಸೌಧದಲ್ಲಿ ಕಚೇರಿ ಸ್ಥಾಪಿಸಿ ಕಚೇರಿಗೆ ಆಯೋಗದ ಸ್ಥಳೀಯ ಸದಸ್ಯರೊಬ್ಬರನ್ನು ನಿಯೋಜಿಸುವುದರ ಮೂಲಕ ಸ್ಥಳೀಯ ಗಡಿ ಹಾಗೂ ನದಿಗಳ ರಕ್ಷಣೆಗೆ ಸಂಬಂಧಿಸಿದಂತೆ ಜನರ, ಸಂಘ-ಸಂಸ್ಥೆಗಳ ಅಹವಾಲುಗಳನ್ನು ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.

ಗಡಿ ಸಮಸ್ಯೆಗಳನ್ನು ಸಂವಿಧಾನಾತ್ಮಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ನಡೆದಿರುತ್ತವೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ಪಟ್ಟಿಯಾದ ಬಳಿಕ ಸಮರ್ಥವಾಗಿ ವಾದ ಮಂಡನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗಡಿ ಸಮಸ್ಯೆಗಳನ್ನು ಸಂವಿಧಾನಾತ್ಮಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ನಡೆದಿರುತ್ತವೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ಪಟ್ಟಿಯಾದ ಬಳಿಕ ಸಮರ್ಥವಾಗಿ ವಾದ ಮಂಡನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಹೋರಾಟಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಲಹೆಗಳು ಮತ್ತು ಹಕ್ಕೊತ್ತಾಯಗಳನ್ನು ಸರಕಾರದ ಗಮನಕ್ಕೆ ತರುವ ಮೂಲಕ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಮಹಾರಾಷ್ಟ್ರ ಮಾದರಿಯಲ್ಲಿ ಗಡಿ ಸಚಿವರನ್ನು ನೇಮಕ ಮಾಡುವ ಬಗ್ಗೆ ಸರಕಾರದ ಗಮನಸೆಳೆಯಲಾಗುವುದು ಎಂದು ಶಿವರಾಜ್ ಪಾಟೀಲ ಭರವಸೆಯನ್ನು ನೀಡಿದರು.

ನಮ್ಮೆಲ್ಲರ ಉದ್ದೇಶ ಒಂದೇ; ಭಾವನೇ ಹಾಗೂ ಮಾಡಬೇಕಾದ ಕೆಲಸವೂ ಒಂದೇ ಆಗಿರುವುದರಿಂದ ಎಲ್ಲರೂ ಸೇರಿಕೊಂಡು ಸರಿಯಾದ ದಿಸೆಯಲ್ಲಿ ಕೆಲಸ ಮಾಡೋಣ. ಸಮಸ್ಯೆ ಹೊಸದಲ್ಲ; ವಿಳಂಬವೇ ದೊಡ್ಡ ಸಮಸ್ಯೆಯಾಗಿದೆ. ಕನ್ನಡಡಪರ ಸಂಘಟನೆಗಳ ಸಲಹೆಗಳ ಆಧಾರದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

ನದಿಗಳು ಮತ್ತು ಗಡಿಗಳ ಸಮಸ್ಯೆ ಎದುರಾದಾಗ ಕಾನೂನಾತ್ಮಕವಾಗಿ ಯಾವ ರೀತಿಯಲ್ಲಿ ರಕ್ಷಣೆ ಮಾಡಬೇಕು ಎಂಬುದನ್ನು ಸರಕಾರಕ್ಕೆ ಸಲಹೆ ರೂಪದಲ್ಲಿ ವರದಿ ನೀಡುವ ಕೆಲಸವನ್ನು ಆಯೋಗ ಮಾಡಲಿದೆ ಎಂದು ತಿಳಿಸಿದರು.

ಯಾವುದೇ ಕಾನೂನುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವಲ್ಲಿ ಅಧಿಕಾರಿಗಳ ಪಾತ್ರ ಅತೀ ಮಹತ್ವದಾಗಿದ್ದು ಅದರಂತೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಕನ್ನಡ ನಾಡು ನುಡಿಗೆ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ.

ಕನ್ನಡ ರಾಜ್ಯೋತ್ಸವಕ್ಕೆ ಅನುದಾನ:

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯೋತ್ಸವವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಆಚರಿಸಲು ಸರಕಾರದಿಂದ ಹೆಚ್ಚಿನ ಅನುದಾನ ದೊರಕಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಶಿವರಾಜ ಪಾಟೀಲ ತಿಳಿಸಿದರು.

ಕನ್ನಡ ಪರ ಹೊರಾಟಗಾರರಾದ ಮಹದೇವ ತಳವಾರ ಮಾತನಾಡಿ, ಮಹಾತ್ಮಾ ಫುಲೆ ಆರೋಗ್ಯ ಯೋಜನೆ ಅನುಷ್ಠಾನಕ್ಕಾಗಿ ಗಡಿಭಾಗದಲ್ಲಿ ಕಚೇರಿ ಆರಂಭಿಸಿರುವಾಗ ಸರಕಾರದಿಂದ ಯಾವುದೇ ಕ್ರಮವಿಲ್ಲ; ಕನ್ನಡ ನಾಮಫಲಕ ಹಾಕಿಸಲು ಹೋರಾಟ ಆರಂಭಿಸಿದರೆ ಪ್ರಕರಣ ದಾಖಲಿಸುತ್ತಾರೆ; ಕನ್ನಡ ಮಾಧ್ಯಮಗಳ ಶಾಲೆಗಳಲ್ಲಿ ಕೊಠಡಿ ಕೊರತೆಯಿದೆ ಎಂಬುದನ್ನು ಮಹದೇವ ತಳವಾರ ಆಯೋಗದ ಅಧ್ಯಕ್ಷರ ಗಮನಸೆಳೆದರು.
ಸ್ಥಳೀಯ ಕನ್ನಡಪರ, ರೈತಪರ ಸಂಘಟನೆಗಳ ಜತೆ ಚರ್ಚಿಸಿ ಗಡಿ ಆಯೋಗದ ಪುನರ್ ರಚನೆ ಮಾಡುವಂತೆ ತಳವಾರ ಒತ್ತಾಯಿಸಿದರು.

ಅಶೋಕ ಚಂದರಗಿ ಅವರು ಮಾತನಾಡಿ, ಮಹಾತ್ಮಾ ಫುಲೆ ಆರೋಗ್ಯ ಯೋಜನೆಯನ್ನು ಗಡಿಭಾಗದ ಐದು ಜಿಲ್ಲೆಗಳಲ್ಲಿ ಮಹಾರಾಷ್ಟ್ರ ಸರಕಾರ ಅನುಷ್ಠಾನ ಮಾಡುತ್ತಿದೆ. ಬೆಳಗಾವಿಯಲ್ಲಿ ಸೇವಾಕೇಂದ್ರಗಳನ್ನು ಆರಂಭಿಸುವ ಮೂಲಕ ಆಟಾಟೋಪ ಹಾಗೂ ಕುತಂತ್ರಗಳನ್ನು ಮಾಡಲಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆಯಾದರೂ ಸರಕಾರ ಅಥವಾ ಆಯೋಗದ ವತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದಕ್ಕೆ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅಸಮಾಧಾನ ವ್ಯಕ್ತಪಡಿಸಿದರು.

ಎಂ.ಇ.ಎಸ್.-ಶಿವಸೇನೆ ನಿಷೇಧಕ್ಕೆ ಒತ್ತಾಯ

ಕನ್ನಡಪರ ಸಂಘಟನೆಯ ಮತ್ತೋರ್ವ ಮುಖಂಡ ದೀಪಕ ಗುಡಗನಟ್ಟಿ ಮಾತನಾಡಿ, ಆಯೋಗದ ವತಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ಸಭೆಗಳನ್ನು ನಡೆಸಿದರೆ ಗಡಿಭಾಗದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವುದು ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು. ಪದೇ ಪದೆ ಗಡಿಭಾಗದಲ್ಲಿ ಭಾಷಾದ್ವೇಷ ಮೂಡಿಸುತ್ತಿರುವ ಎಂ.ಇ.ಎಸ್ ಹಾಗೂ ಶಿವಸೇನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಗುಡಗನಟ್ಟಿ ಒತ್ತಾಯಿಸಿದರು.

ಶ್ರೀನಿವಾಸ್ ತಾಳೂರಕರ ಅವರು, ಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸಬೇಕು ಎಂಬ ಅಧಿಸೂಚನೆ ಹೊರಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶ್ರೀನಿವಾಸ್ ತಾಳೂರಕರ ಅವರು, ಕನ್ನಡ ಬಳಕೆ ಕಡ್ಡಾಯವಾಗುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ‌ ಮೆಟಗುಡ್ ಅವರು, ಗಡಿಭಾಗದ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆ ಬಲ್ಲ ಶಿಕ್ಷಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಆಯೋಗದ ಸದಸ್ಯರುಗಳಾದ ದಿನಕರ ದೇಸಾಯಿ, ಎಸ್.ಎಂ.ಕುಲಕರ್ಣಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿ.ಪಂ. ಸಿ.ಇ.ಓ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಡಿ.ಸಿ.ಪಿ. ರೋಹನ್ ಜಗದೀಶ್, ಮಹಾನಗರ ಪಾಲಿಕೆಯ ಆಯುಕ್ತರಾದ ಪಿ.ಎನ್.ಲೋಕೇಶ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಸೇರಿದಂತೆ ವಿವಿಧ ಕನ್ನಡಪರ ಸಂಘನೆಗಳ ಪದಾಧಿಕಾರಿಗಳು, ವಿವಿಧ ಕನ್ನಡ ಪರ ಹೋರಾಟಗಾರರು ಉಪಸ್ಥಿತರಿದ್ದರು.
****

Check Also

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ …

Leave a Reply

Your email address will not be published. Required fields are marked *