ಜಾನುವಾರುಗಳಿಗೆ ಲಸಿಕೆ ಕಡ್ಡಾಯ; ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ
ಬೆಳಗಾವಿ, -ರಾಷ್ಟೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 05ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು ಜಿಲ್ಲೆಯಲ್ಲಿ ಏಪ್ರಿಲ್ 01 ರಿಂದ ಏಪ್ರಿಲ್ 30 ವರೆಗೆ ಹಮ್ಮಿಕೊಳ್ಳಲಾಗಿದ್ದು, ಬ್ಯಾನರ್, ಪೋಸ್ಟರ್ ಮತ್ತು ಕರಪತ್ರಗಳನ್ನು ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಮಾ.29) ನಡೆದ ರಾಷ್ಟೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯ 05ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಅಭಿಯಾನದ ಕುರಿತು ಅವರು ಮಾತನಾಡಿದರು.
ಜಾನುವಾರು ಮಾಲೀಕರ ಮನೆ ಬಾಗಿಲಿಗೆ ತೆರಳಿ ಹಸು, ಎತ್ತು, ಎಮ್ಮೆ ಮತ್ತು ಕರುಗಳಿಗೆ ಉಚಿತವಾಗಿ ಲಸಿಕೆದಾರರು ಕಾಲು ಬಾಯಿಬೇನೆ ಲಸಿಕೆಯನ್ನು ಹಾಕುವ ಗುರಿ ಹೊಂದಲಾಗಿದೆ. ಅದರಂತೆ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ತಿಳಿಸಿದರು.
ಜಿಲ್ಲೆಯಲ್ಲಿ 20ನೇ ಜಾನುವಾರು ಗಣತಿಯ ಪ್ರಕಾರ ಒಟ್ಟು 13,93,711 ಜಾನುವಾರುಗಳಿವೆ ಆದರೆ ವಾಸ್ತವದಲ್ಲಿ ಜಾನುವಾರು ಸಂಖ್ಯೆ ಕಡಿಮೆ ಇರುತ್ತವೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ ಕೂಲೇರ ಅವರು ತಿಳಿಸಿದರು.
ಲಸಿಕೆ ಸರಬರಾಜು ಮತ್ತು ಲಸಿಕೆಯನ್ನು ಶೇಖರಣೆ ಮಾಡಲು ಶೀಥಲಿಕರಣ ವ್ಯವಸ್ಥೆ:
ಜಿಲ್ಲೆಗೆ ಕೇಂದ್ರ ಕಚೇರಿಯಿಂದ 11,20,000 ಡೋಸ್ ಗಳಷ್ಟು ಕಾಲುಬಾಯಿ ಬೇನೆ ಲಸಿಕೆಯು ಸರಬರಾಜು ಆಗಿದೆ. 04ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 1,65,000 ಡೋಜ್ ಲಸಿಕೆಯು ಬಾಕಿ ಉಳಿದಿರುವ ಪ್ರಯುಕ್ತ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 12,85,000 ಡೋಸ್ ಗಳಷ್ಟು ಕಾಲುಬಾಯಿ ಬೇನೆ ಲಸಿಕೆಯು ಲಭ್ಯವಿರುತ್ತದೆ.
ಸದರಿ ಲಸಿಕೆಯನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಭ್ಯವಿರುವ ವಾಕ್-ಇನ್ ಕೂಲರ್ ಶೀಥಲಿಕರಣ ಸುವ್ಯವಸ್ಥೆಯನ್ನು ಹೊಂದಿರುವ ತಾಲೂಕುಗಳಿಗೆ ಶೀಥಲಿಕರಣ ವ್ಯವಸ್ಥೆಯುಳ್ಳ 06 ವಾಹನಗಳಲ್ಲಿ ಸರಬರಾಜು ಮಾಡಿ, ಲಸಿಕೆಯನ್ನು ಸುವ್ಯವಸ್ಥಿತವಾಗಿ ಶೀಥಲಿಕರಣ ಶೇಖರಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕಾಲು ಬಾಯಿ ಬೇನೆ ಲಸಿಕೆ ಕಾರ್ಯಕ್ರಮ ಜರಗುವ ಸಂಧರ್ಭದಲ್ಲಿ ಲಸಿಕೆಯನ್ನು ಸುವ್ಯವಸ್ಥಿತವಾಗಿ ಶೀಥಲಿಕರಣ ವ್ಯವಸ್ಥೆಯಲ್ಲಿ ಶೇಖರಣೆ ಮಾಡಲು ಜಿಲ್ಲೆಯ ಅಥಣಿ, ಬೆಳಗಾವಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಕಾಗವಾಡ, ಖಾನಾಪೂರ, ಕಿತ್ತೂರು, ಮೂಡಲಗಿ, ನಿಪ್ಪಾಣಿ, ರಾಮದುರ್ಗ, ಬೈಲಹೊಂಗಲ, ಸವದತ್ತಿ, ಯರಗಟ್ಟಿ ರಾಯಬಾಗ ತಾಲೂಕುಗಳಲ್ಲಿ ಲಸಿಕೆಯನ್ನು ತಾಲೂಕಿನ ಅಧಿನದಲ್ಲಿ ಬರುವ ಎಲ್ಲ ಪಶುಸಂಸ್ಥೆಗಳಿಗೆ ಸರಬರಾಜು ಮಾಡಲಾಗುವುದು. ಲಸಿಕೆದಾರರು ವಿವಿಧ ವಾರ್ಡ/ಗ್ರಾಮಗಳಲ್ಲಿರುವ ಜಾನುವಾರು ಮಾಲೀಕರ ಮನೆ ಬಾಗಿಲಿಗೆ ಹೋಗಿ ಅರ್ಹ ಜಾನುವಾರುಗಳಿಗೆ ಲಸಿಕೆಯನ್ನು ಮಾಡಲು 847 Vaccine Carriers ಗಳು ಲಭ್ಯವಿದ್ದು, ಇದರಿಂದ ಲಸಿಕೆಯ ಗುಣ ಮಟ್ಟವನ್ನು ಹಾಳಾದಂತೆ ಕಾಪಾಡಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಲಸಿಕೆದಾರರ ವಿವರ:
ಜಿಲ್ಲೆಯಲ್ಲಿ ಒಟ್ಟು 15 ತಾಲೂಕುಗಳಲ್ಲಿ 913 ಲಸಿಕೆದಾರರನ್ನೊಳಗೊಂಡ 457 ಲಸಿಕಾ ತಂಡಗಳನ್ನು ರಚಿಸಿ, ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ಅರ್ಹ ದನ ಮತ್ತು ಎಮ್ಮೆಗಳಿಗೆ ಲಸಿಕೆ ಹಾಕಲಾಗುವುದು.
ಪ್ರತಿ ದಿನ ಅರ್ಹ ಜಾನುವಾರುಗಳಿಗೆ ಕಾಲು ಬಾಯಿ ಬೇನೆ ಲಸಿಕೆಯನ್ನು ಜಾನುವಾರುಗಳಿಗೆ ನೀಡಿದ ಮಾಹಿತಿಯನ್ನು ಭಾರತ ಪಶುಧನ ತಂತ್ರಾಂಶದಲ್ಲಿ ಇಂಧೀಕರಿಸಲು ಪ್ರತಿಯೊಬ್ಬ ಲಸಿಕೆದಾರರಿಗೆ ಪ್ರತ್ಯೇಕ ಯೂಜರ್-ಐಡಿಯನ್ನು ಈಗಾಗಲೇ ನೀಡಲಾಗಿದೆ. ಆ ಯೂಜರ್ ಐಡಿಗಳಿಗೆ ಜಾನುವಾರುಗಳಿಗೆ ಲಸಿಕೆಯನ್ನು ಹಾಕುವ ಗ್ರಾಮ/ವಾರ್ಡಗಳನ್ನು ಮ್ಯಾಪಿಂಗ್ ಮಾಡಿ ಲಸಿಕೆದಾರರಿಗೆ ನೀಡಲಾಗಿರುತ್ತದೆ.
ಲಸಿಕೆದಾರರು ಜಾನುವಾರುವಿಗೆ ಲಸಿಕೆಯನ್ನು ಹಾಕಿ, ಸದರಿ ಪ್ರಗತಿಯ ವರದಿಯನ್ನು ಭಾರತ ಪಶುಧನ ತಂತ್ರಾಂಶದಲ್ಲಿ ಮಾಹಿತಿಯನ್ನು ನಮೂದಿಸಲು ತಿಳಿಸಲಾಗಿದೆ.
ಇಲಾಖೆಯ ವೆಬ್‌ಸೈಟ್ AHVS KDP-MIS ತಂತ್ರಾಂಶದಲ್ಲಿ ಲಸಿಕೆ ಹಾಕಲಾದ ಗ್ರಾಮವಾರು, ಜಾನುವಾರು ಮಾಲೀಕರ ವರ್ಗವಾರು ಪ್ರತಿ ದಿನ ನಿಗದಿತ ಸಮಯದೊಳಗೆ ಕ್ರೋಡೀಕೃತ ಮಾಹಿತಿಯನ್ನು ದಾಖಲಿಸಲಾಗುವುದು ಎಂದು ಡಾ.ರಾಜೀವ್ ಕೂಲೇರ್ ತಿಳಿಸಿದರು.
ಪಶು ಸಖಿಯರು ಕಾರ್ಯನಿರ್ವಹಣೆ:
ಪಶು ಸಖಿಯರು ಇಲಾಖೆ ಹಾಗೂ ರೈತರ ಸಂಪರ್ಕ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ, ಈಗಾಗಲೇ ಪಶು ಸಖಿಯರು ಕಂದು ರೋಗ ಲಸಿಕಾ ಕಾರ್ಯಕ್ರಮ ಅನುಷ್ಠಾನದ ಪೂರ್ವದಲ್ಲಿ 4 ರಿಂದ 8 ತಿಂಗಳ ಹೆಣ್ಣು ಕರುಗಳ ಗಣತಿಯನ್ನು ಮಾಡಿ ಪಶು ಸಂಸ್ಥೆಗಳಿಗೆ ನಿಡಿರುತ್ತಾರೆ, ಅದರಂತೆ ಮಾರ್ಚ್ 16, 2024 ರಿಂದ ಮಾರ್ಚ್ 30, 2024 ರವರೆಗೆ ಕಂದು ರೋಗ ಲಸಿಕಾ ಕಾರ್ಯಕ್ರಮವನ್ನು ಲಸಿಕೆದಾದರರು ಜಾನುವಾರು ಮಾಲೀಕರ ಮನೆ ಬಾಗಿಲಿಗೆ ಹೋಗಿ ಅರ್ಹ ಹೆಣ್ಣು ಜಾನುವಾರುಗಳಿಗೆ ಕಂದು ರೋಗ ಲಸಿಕೆಯನ್ನು ಉಚಿತವಾಗಿ ಹಾಕಲು ತಿಳಿಸಲಾಗಿದೆ.
ಇದಲ್ಲದೇ ಇಲಾಖೆಯ ವಿವಿಧ ಲಸಿಕಾ ಕಾರ್ಯಕ್ರಮಗಳ ಕುರಿತು ರೈತರ ಮನೆ ಬಾಗಿಲಿಗೆ ಪಶು ಸಖಿಯರು ಹೋಗಿ ರೈತರಿಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ ಕೂಲೇರ ಹೇಳಿದರು.
5ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಮಾರ್ಗಸೂಚಿಗಳನ್ವಯ ಜಿಲ್ಲೆಯ ಎಲ್ಲ ಗ್ರಾಮ/ವಾರ್ಡಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಕಾಲು ಬಾಯಿ ಬೇನೆ ರೋಗದಿಂದ ಜಾನುವಾರುಗಳನ್ನು ರಕ್ಷಿಸಿ, ಗೋ ಸಂಪತ್ತಿನ ಆರೋಗ್ಯವನ್ನು ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಪೋಸ್ಟರ್ ಬಿಡುಗಡೆ:
ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಿಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು ರಾಷ್ಟೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯ 05ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಿಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಲೋಕೇಶ, ಜಿ.ಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಿಟರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
****