ಬೆಳಗಾವಿ: ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಬೆಳಗಾವಿ ಪೊಲೀಸರು ಏಕಾಏಕಿ ದಾಳಿ ಮಾಡಿದ್ದು, ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಬೆಳ್ಳಂಬೆಳಿಗ್ಗೆ ಜೈಲಿನ ಮೇಲೆ ದಾಳಿ ಮಾಡಲಾಗಿದೆ.
ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾರ್ಬಾನ್ಯಾಂಗ್ ಮಾರ್ಗದರ್ಶನದಲ್ಲಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದ ತಂಡವು ಜೈಲಿನಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ದಿಢೀರ್ ದಾಳಿ ನಡೆಸಿದೆ. ಒಂದು ಗಂಟೆಗೂ ಹೆಚ್ಚು ಕಾಲ ಜೈಲಿನ ಆವರಣದಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಡಿಸಿಪಿಗೆ ನಗರದ ಐದೂ ವಿಭಾಗದ ಎಸಿಪಿಗಳು ಕೂಡ ಈ ವೇಳೆ ಸಾಥ್ ಕೊಟ್ಟರು.
ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಇದೇ ಬೆಳಗಾವಿ ಹಿಂಡಲಗಾ ಜೈಲಿನಿಂದಲೇ ಜೀವಬೆದರಿಕೆ ಕರೆ ಮಾಡಿದ್ದ ಆರೋಪವಿತ್ತು. ಅಲ್ಲದೇ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಗಲಾಟೆ, ಮೊಬೈಲ್ ಬಳಕೆ ಸೇರಿ ಬಹಳಷ್ಟು ಆರೋಪಗಳು ಕೇಳಿ ಬಂದಿದ್ದವು. ಆ ಹಿನ್ನೆಲೆಯಲ್ಲಿ ಇಂದು ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ರೋಹನ್ ಜಗದೀಶ್ ನಮ್ಮ ಎಸಿಪಿಗಳು, ಇನ್ಸಪೆಕ್ಟರ್ ಗಳು ಸೇರಿ 146 ಸಿಬ್ಬಂದಿಗಳೊಂದಿಗೆ ಜೈಲಿನಲ್ಲಿ ತಪಾಸಣೆ ಮಾಡಿದ್ದೇವೆ. ಶ್ವಾನದಳದೊಂದಿಗೆ ಬಂದು ಇಡೀ ಜೈಲು ತಪಾಸಣೆ ಮಾಡಿದ್ದು, ಜೈಲಿನೊಳಗೆ ವಾಸ್ತವತೆ ಏನಿದೆ ಎಂದು ತಿಳಿಯಲು ಈ ರೀತಿ ತಪಾಸಿಸಲಾಗಿದೆ. ತಂಬಾಕು, ಬೀಡಿ, ಸಿಗರೇಟು, ಸಣ್ಣ ಪುಟ್ಟ ಚಾಕಗಳು ಒಳಗಡೆ ಸಿಕ್ಕಿವೆ. ಭದ್ರತೆ ಇದ್ದರೂ ಸಹ ಒಳಗೆ ಇಂಥವೆಲ್ಲ ಏಕೆ ಹೋಗ್ತಿದೆ ತನಿಖೆ ಮಾಡಬೇಕಾಗಿದೆ. ಸದ್ಯಕ್ಕೆ ಮೊಬೈಲ್ ಸಿಕ್ಕಿಲ್ಲ. ಆದರೆ, ಮೊಬೈಲ್ ಚಾರ್ಜರ್ ಗಳು ಸಿಕ್ಕಿವೆ. ಬ್ಲೂಟೂತ್ ಡಿವೈಸ್ ಗಳು ಸಿಕ್ಕಿವೆ. ಅವುಗಳನ್ನು ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.