ಎರಡು ಲಕ್ಷ ಮತಗಳಿಂದ ಮೃಣಾಲ್ ಹೆಬ್ಬಾಳ್ಕರ್‌ಗೆ ಗೆಲುವು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ
*ರಾಮದುರ್ಗ* : ಗಂಡು ಮೆಟ್ಟಿನ ನಾಡು ಬೆಳಗಾವಿ ಜಿಲ್ಲೆಯ ಮಣ್ಣಿನ ಮಗ ಮೃಣಾಲ್ ಹೆಬ್ಬಾಳ್ಕರ್ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು. ರಾಮದುರ್ಗದ ರಾಠಿ ಫಾರ್ಮ್ ಹೌಸ್‌ನಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಸಮ್ಮಿಲ ಸ್ವಾಭಿಮಾನಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ನಾವು ಹೋದಲೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ನನ್ನ ಸ್ವಕ್ಷೇತ್ರ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದಲೇ 60 ಸಾವಿರಕ್ಕೂ ಅಧಿಕ ಮತಗಳು ಲೀಡ್, ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ ಕ್ಷೇತ್ರಗಳಿಂದ 85 ಸಾವಿರ ಮತಗಳ ಮುನ್ನಡೆ ಸಿಗುವ ವಿಶ್ವಾಸವಿದೆ. ರಾಮದುರ್ಗದಲ್ಲಿ ಸಿಕ್ಕಿರುವ ಬೆಂಬಲ ನೋಡಿದರೆ, ಕಾಂಗ್ರೆಸ್ ಅಭ್ಯರ್ಥಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಮೂಡುತ್ತಿದೆ ಎಂದರು.
2014ರಲ್ಲಿ ನಾನು ಲೋಕಸಭೆಗೆ ನಿಂತಾಗ ಇಲ್ಲಿಯ ಜನರು ನನ್ನ ಪರವಾಗಿ ಸಾಕಷ್ಟು ಹೋರಾಟ ಮಾಡಿದ್ರು, ಇದೀಗ ಹತ್ತು ವರ್ಷಗಳ ಬಳಿಕ ನನ್ನ ಮಗ ಬಂದಿದ್ದಾನೆ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. 2014ರಲ್ಲಿ ಎಲ್ಲರೂ ಶ್ರಮವಹಿಸಿದರೂ ಸೋತೆವು. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ನಮ್ಮ ನಾಯಕ ಅಶೋಕ್ ಪಟ್ಟಣ್ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಅಭ್ಯರ್ಥಿ ಗೆಲುವಿಗೆ ಅನುಕೂಲವಾಗಲಿದೆ ಎಂದರು.ನನಗೆ ಕೊಟ್ಟ ರೀತಿಯಲ್ಲೇ ನಿಮ್ಮ ಸೇವೆ ಮಾಡಲು ನನ್ನ ಮಗನಿಗೂ ಅವಕಾಶ ಮಾಡಿಕೊಡಿ ಎಂದರು ಹೇಳಿದರು.
ಕ್ಷೇತ್ರದ ಮನೆ ಮಗನಂತಿರುವ ಮೃಣಾಲ್ ಹೆಬ್ಬಾಳ್ಕರ್, ನಿಮ್ಮೆಲ್ಲರ ಮನೆ ಮಗನಾಗಿ ಕೆಲಸ ಮಾಡಲಿದ್ದಾನೆ. ಕ್ಷೇತ್ರದ ಸಮಸ್ಯೆಗಳು ಅವನಿಗೆ ಅರಿವಿದ್ದು, ನಿಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡಲಿದ್ದಾನೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಸೋತರೂ ಮಾಜಿ ಮುಖ್ಯಮಂತ್ರಿ ಅಂತ ಹೇಳಿ ಅವರ ಹಿರಿತನಕ್ಕೆ ಗೌರವ ನೀಡಿ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಏಕಾಏಕಿ ದೆಹಲಿಗೆ ಹೋದ ಶೆಟ್ಟರ್ ಬಿಜೆಪಿ ಸೇರ್ಪಡೆಗೊಂಡರು. ಇದೀಗ ಬೆಳಗಾವಿಯಿಂದ ಲೋಕಸಭೆ ಪ್ರವೇಶಿಸಲು ಕನಸು ಕಾಣುತ್ತಿದ್ದಾರೆ. ಬೆಳಗಾವಿಯಿಂದ ಸ್ಪರ್ಧಿಸಲು ಅವರಿಗೆ ಯಾವ ನೈತಿಕತೆ ಇದೆ ಎಂದು ಸಚಿವರು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ
ಕರ್ನಾಟಕದ ಏಳು ಕೋಟಿ ಜನರಿಗೆ ನಾನೊಬ್ಬಳೆ ಮಹಿಳಾ ಸಚಿವೆಯಾಗಿ ನಿಂತಿದ್ದೇನೆ, ಇಂದು ರಾಜ್ಯಾದ್ಯಂತ ಸೇವೆ ಮಾಡುವ ಅವಕಾಶ ಲಭಿಸಿದೆ. ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಕಳೆದ ವರ್ಷ ವಿಧಾನಸಭೆ ಚುನಾವಣೆ ಪೂರ್ವ ನಾವು ಪಂಚ ಯೋಜನೆಯ ಗ್ಯಾರಂಟಿ ಕಾರ್ಡ್ಗಳನ್ನು ಹಂಚಿದ್ದವು. ಸರ್ಕಾರ ರಚನೆಯಾದ ಬಳಿಕ ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ಸಚಿವರು ತಿಳಿಸಿದರು.
ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಕಾಂಗ್ರೆಸ್ ಸರ್ಕಾರ ಇರೋವರೆಗೂ ಯೋಜನೆಗಳು ಇರುತ್ತವೆ ಎಂದರು.
ಅಶೋಕ್ ಪಟ್ಟಣ್ ಸಚಿವರಾಗಬೇಕಿತ್ತು
ಸದನದ ಹಿರಿಯ ಶಾಸಕರಾದ ಅಶೋಕ್ ಪಟ್ಟಣ್ ಅವರು ಸಚಿವರಾಗಬೇಕಿತ್ತು. ಅದು ನನ್ನ ಅಪೇಕ್ಷೆಯೂ ಆಗಿತ್ತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಆದರೆ, ಬದ್ಧತೆಗೆ ಹೆಸರಾಗಿರುವ ಅಶೋಕ್ ಪಟ್ಟಣ್ ಅವರು, ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ಇದ್ದಾರೆ ಎಂದರು.
ಮಹಿಳಾ ಕೋಟಾದಲ್ಲಿ ನನಗೆ ಸಚಿವೆಯಾಗುವ ಅವಕಾಶ ಲಭಿಸಿತು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಈ ಚುನಾವಣೆ ಸಿದ್ದರಾಮಯ್ಯ ನೇತೃತ್ವದ ಅಭಿವೃದ್ಧಿ ಹಾಗೂ ೫ ಗ್ಯಾರಂಟಿ ಯೋಜನೆಗಳ ಮೇಲೆ ನಡೆಯುತ್ತಿದೆ ಎಂದು ಹೇಳಿದರು.
ಕಳೆದ ೧೦ ತಿಂಗಳಲ್ಲಿ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಸಿದ್ದರಾಮಯ್ಯ ನವರು ಕಳೆದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ೫ ವರ್ಷದಲ್ಲಿ ೫ ಲಕ್ಷ ಮನೆಗಳನ್ನು ನಿರ್ಮಿಸಿದ್ದರು. ಬಳಿಕ ನಾಲ್ಕು ವರ್ಷಗಳ ಆಡಳಿತ ನಡೆಸಿದ ಬಿಜೆಪಿ ಬಡ ಜನರಿಗೆ ಒಂದೇ ಒಂದು ಮನೆಯನ್ನು ನಿರ್ಮಾಣ ಮಾಡಲಿಲ್ಲ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರ ಪ್ರತಿ ವರ್ಷ ೬೦ ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಶಕ್ತಿ ವೃದ್ಧಿಸಿದ್ದು, ಮಹಿಳೆಯರನ್ನು ಸಮಲೀಕರಣ ಮಾಡುವುದೇ ನಮ್ಮ ಸರ್ಕಾರದ ಉದ್ದೇಶ ಎಂದು ಹೇಳಿದರು.
ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಮೃಣಾಲ್ ಹೆಬ್ಬಾಳ್ಕರ್ ಇನ್ನೂ ಯುವಕ, ನಮ್ಮ ಜಿಲ್ಲೆಯ ಭವಿಷ್ಯದ ನಾಯಕ ಎಂದು ಹೇಳಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬಹಳ ವರ್ಷಗಳಾಗಿವೆ. ಈ ಬಾರಿ ನಮ್ಮ ಗೆಲುವಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಸಚಿವರು ತಿಳಿಸಿದರು.
ತಾಯಿ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಜೀವನ ಆರಂಭಿಸಿದ್ದು, ಜನರ ಪ್ರೀತಿ ವಿಶ್ವಾಸ ನೋಡಿದ ಮೇಲೆ ಜೀವನ ಪೂರ್ತಿ ಸಮಾಜ ಸೇವೆ ಮಾಡಬೇಕು ಎಂದು ತೀರ್ಮಾನಿಸಿರುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.
ಅಭಿವೃದ್ಧಿಗೆ ಮತ್ತೊಂದು ಹೆಸರೇ ಅಶೋಕ್ ಪಟ್ಟಣ್ ಅವರು, ಅವರೇ ನನಗೆ ಸ್ಫೂರ್ತಿ. ಅವರ ಮಾರ್ಗದರ್ಶನದಲ್ಲಿ ಮುಂದುವರಿಯುವೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಸಂಘಟನಾ ಚತುರ ಅಶೋಕ್ ಪಟ್ಟಣ್ ಅವರ ನೇತೃತ್ವದಲ್ಲಿ ರಾಮದುರ್ಗ ಕ್ಷೇತ್ರದಿಂದ ೩೦ ಸಾವಿರ ಮತಗಳ ಲೀಡ್ ನಿರೀಕ್ಷೆ ಇಡಲಾಗಿದೆ. ೮ ಕ್ಷೇತ್ರಗಳ ಪೈಕಿ ೫ ಜನ ಕಾಂಗ್ರೆಸ್ ಶಾಸಕರಿದ್ದು, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚು ಮುನ್ನಡೆ ಸಿಗುವ ವಿಶ್ವಾಸವಿದೆ ಎಂದರು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಪ್ರಚಾರಕ್ಕೆ ಬರುವರು ಎಂದು ತಿಳಿಸಿದರು.
ಅಶೋಕ್ ಪಟ್ಟಣ್ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ನಾಯಕರು ತೆಗೆದುಕೊಂಡ ನಿರ್ಧಾರದಿಂದ ಬೆಳಗಾವಿಗೆ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಗೆ ಪ್ರಿಯಾಂಕಾಗೆ ಟಿಕೆಟ್ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರೂ, ಸರ್ಕಾರದ ಮುಖ್ಯ ಸಚೇತಕರೂ ಆಗಿರುವ ಅಶೋಕ್ ಪಟ್ಟಣ್ ಮಾತನಾಡಿ, ಮೃಣಾಲ್ ಹೆಬ್ಬಾಳಕರ್ ಅವರನ್ನು ಅತ್ಯಧಿಕ ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ರಾಮದುರ್ಗ ಕೆರೆಗಳ ತುಂಬಿಸಲು ಪ್ರಯತ್ನ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ರಾಮದುರ್ಗ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕೆರೆ ತುಂಬಿಸುವ ಯೋಜನೆಗೆ ಶಾಸಕ ಅಶೋಕ್ ಪಟ್ಟಣ್ ನೇತೃತ್ವದಲ್ಲಿ ಪ್ರಯತ್ನಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಚುನಾವಣೆ ಮುಗಿದ ಕೂಡಲೇ ಹೊಸ ಸಂಸತ್ ಸದಸ್ಯರ ಮೊದಲ ಕೆಲಸವೇ ಡಿ.ಕೆ.ಶಿವಕುಮಾರ್ ಅವರ ಬಳಿ ನಿಯೋಗ ಕೊಂಡೊಯ್ದು ಕೆರೆ ತುಂಬಿಸುವ ಯೋಜನೆಗೆ ಮಂಜೂರು ಮಾಡಿಸುವುದು ಎಂದು ಹೇಳಿದರು.
ರಾಮದುರ್ಗ ವಿಧಾನಸಭಾ ಕ್ಷೇತ್ರದ ಕೆ ಚಂದರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ನಡೆಸಿದ ಸಚಿವರು, ಬದ್ಧತೆಗೆ ಮತ್ತೊಂದು ಹೆಸರು ಕಾಂಗ್ರೆಸ್ ಪಕ್ಷ, ಕಳೆದ 10 ತಿಂಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
10 ವರ್ಷಗಳ ಹಿಂದೆ ನನ್ನ ಪರವಾಗಿ ನಿವೆಲ್ಲರೂ ಓಡಾಡಿದರೂ ನಾನು ಸೋಲಬೇಕಾಯಿತು. ಇದೀಗ 10 ವರ್ಷಗಳ ಬಳಿಕ ಮಗನೊಂದಿಗೆ ಬಂದಿದ್ದೇನೆ. ರಾಮದುರ್ಗದ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಕೆರೆ ತುಂಬಿಸುವ ಯೋಜನೆಗೆ ಚುನಾವಣೆ ಮುಕ್ತಾಯದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
2023ರ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೇವು. ಇದೀಗ ಕೊಟ್ಟ ಮಾತನ್ನು ಈಡೇರಿಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್ ಅಭ್ಯರ್ಥಿಗೆ ಇರಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೋರಿದರು.