ಬೆಳಗಾವಿ ,ಯಾರ ಬಾಯಿಗೆ ಬೀಳುತ್ತೆ ಕುಂದಾ….ಚಿಕ್ಕೋಡಿಯಲ್ಲಿ ವಿಜಯಮಾಲೆ ಯಾರ ಕೊರಳಿಗೆ..??
ಬೆಳಗಾವಿ
ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಉಳಿದಿದ್ದು, ಅಭ್ಯರ್ಥಿಗಳ ಎದೆ ಢವ.. ಢವ.. ಶುರುವಾಗಿದೆ.
ಬೆಳಗಾವಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ ಹೆಬ್ಬಾಳಕರ ಸ್ಪರ್ಧಿಸಿದ್ದಾರೆ. ಹಾಗಾಗಿ, ಇಲ್ಲಿ ಕಾಂಗ್ರೆಸ್- ಬಿಜೆಪಿ ನಡುಗೆ ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟಿತ್ತು. ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಚುನಾವಣಾ ಪ್ರಚಾರದ ವೇಳೆ ಶೆಟ್ಟರ್ ವಿರುದ್ಧ ವೈಯಕ್ತಿಕವಾಗಿ ಟೀಕಾಸ್ತ್ರ ಮಾಡಿದ್ದಲ್ಲದೇ, ಶೆಟ್ಟರ್ ಹೊರಗಿನವರು ಎಂದು ಆರೋಪಿಸಿದ್ದರು.
ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮರು ಆಯ್ಕೆ ಬಯಿಸಿದ್ದರೆ, ಕಾಂಗ್ರೆಸ್‌ನಿಂದ ಯುವನಾಯಕಿ, ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ತೀವ್ರ ಪೈಪೋಟಿಯೊಡ್ಡಿದ್ದಾರೆ. ಇಲ್ಲಿ ಕೂಡ ಕೈ- ಕಮಲದ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಸಚಿವ ಸತೀಶ ಜಾರಕಿಹೊಳಿ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಎರಡೂ ಪಕ್ಷದವರು ಅಬ್ಬರ ಪ್ರಚಾರ ಕಾರ್ಯವನ್ನೂ ಮಾಡಿದ್ದಾರೆ. ಆದರೆ, ಮತದಾರ ಪ್ರಭು ಯಾರ ಕೈಹಿಡಿಯುತ್ತಾರೆ? ಯಾರಿಗೆ ಕೈ ಕೊಡುತ್ತಾರೆ? ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಹಾಗೆ ನೋಡಿದರೆ ಬೆಳಗಾವಿ ಮತ್ತು ಚಿಕ್ಕೋಡಿ ಬಿಜೆಪಿ ಭದ್ರಕೋಟೆ. ಬಿಜೆಪಿ ಭದ್ರಕೋಟೆ ಬೇಧಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನವನ್ನೂ ಮಾಡಿದೆ. ಈ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿದ್ದರೆ, ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ನಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು, ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಇನ್ನೇನು ಚುನಾವಣಾ ಫಲಿತಾಂಶದ ದಿನಗಣನೇ ಆರಂಭವಾಗುತ್ತಿದ್ದಂತೆಯೇ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರಲ್ಲಿ ತಳಮಳ ಹೆಚ್ಚಿಸಿದೆ. ಮಳೆ ನಿಂತ ಮೆಲೆ ಮರದ ಹನಿ ಉದುರುವಂತೆ ಲೋಕಸಬಾ ಚುನಾವಣೆ ಮುಗಿದ ಮೇಲೆಯೂ ಆಯಾ ಪಕ್ಷಗಳ ಕಾರ್ಯಕರ್ತರಲ್ಲಿ ಫಲಿತಾಂಶದ ಲೆಕ್ಕಾಚಾರವೂ ನಿಂತಿಲ್ಲ. ಆಯಾ ಪಕ್ಷಗಳ ಕಾರ್ಯಕರ್ತರ ಫಲಿತಾಂಶಕ್ಕೆ ಜೂನ್ 4 ರಂದು ಉತ್ತರ ಸಿಗಲಿದೆ.
ಒಂದೆಡೆ ಫಲಿತಾಂಶ ಅಭ್ಯರ್ಥಿಗಳು, ವಿವಿಧ ಪಕ್ಷಗಳ ಮುಖಂಡರಿಗೆ ಉಸಿರಾಟ ಹೆಚ್ಚಿಸಿದ್ದರೆ, ಇನ್ನೊಂದೆಡೆ ಮತ ಎಣಿಕೆ ಕಾತುರದಿಂದ ಕಾಯುತ್ತಿರುವ ಸಾರ್ವಜನಿಕರು ಹೋಟೆಲ್, ಬಸ್ ನಿಲ್ದಾಣ, ಹಳ್ಳಿ ಕಟ್ಟೆ, ಪಂಚಾಯಿತಿ ಕಟ್ಟೆ ಹಾಗೂ ಗುಡಿಗಳಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಚರ್ಚೆಗಳೇ ನಡೆಯುತ್ತಿವೆ.
ಏನೇ ಆಗಲಿ ಬೆಳಗಾವಿ ಕುಂದಾ ಯಾರ ಬಾಯಿಗೆ ಬೀಳುತ್ತದೆಯೋ? ಚಿಕ್ಕೋಡಿಯ ಗೆಲುವಿನ ಹಾರ ಯಾರ ಕೊರಳಿಗೆ ಬೀಳುತ್ತದೆಯೋ ಎನ್ನುವುದನ್ನು ಜೂನ್ 4ರವರೆಗೆ ಕಾಯ್ದುನೋಡಬೇಕಷ್ಟೇ.