ಮಾನವ ಹಕ್ಕುಗಳು ಆಯೋಗದ ಸಭೆ; ಮೃತ ಕಾರ್ಮಿಕನ ದೇಹದ ಅವಶೇಷಗಳು ಗೌರವಪೂರ್ವಕ ಹಸ್ತಾಂತರ: ಅಧಿಕಾರಿಗಳ ಸ್ಪಷ್ಟನೆ
ನಾವಗೆ ಅಗ್ನಿ ದುರಂತ: ಸ್ಪಷ್ಟ ವರದಿ ಸಲ್ಲಿಸಲು ಎಸ್.ಕೆ.ವಂಟಿಗೋಡಿ ಸೂಚನೆ
ಬೆಳಗಾವಿ, -: ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯ ಅಗ್ನಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕನ ದೇಹದ ಅವಶೇಷಗಳನ್ನು ಗೌರವಪೂರ್ವಕವಾಗಿ ಹಸ್ತಾಂತರಿಸಿಲ್ಲ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಗೌರವಪೂರ್ವಕವಾಗಿ ಹಸ್ತಾಂತರಿಸಿರುವ ಕುರಿತು ಸ್ಪಷ್ಟನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಸೂಚನೆ ನೀಡಿದರು.
ಅಗ್ನಿ ದುರಂತ ನಡೆದಿದ್ದ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಆ.19) ನಡೆದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯ ಅಗ್ನಿ ದುರಂತದ ಪ್ರಕರಣದ ಕುರಿತು ಪತ್ರಿಕೆಗಳಲ್ಲಿ ಸಾಕಷ್ಟು ಭಿನ್ನವಾದ ಅಭಿಪ್ರಾಯಗಳು ಪ್ರಕಟವಾಗಿವೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಆಯೋಗದದಿಂದ ನಿಖರವಾದ ವರದಿಯನ್ನು ಆಧರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಸ್ಪಷ್ಟ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಈ ಪ್ರಕರಣದಲ್ಲಿ ಎಲ್ಲ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ. ಅಗ್ನಿದುರಂತದಲ್ಲಿ ಮೃತ ಪಟ್ಟಿರುವ ವ್ಯಕ್ತಿಯ ದೇಹದ ಅವಶೇಷಗಳನ್ನು ಮಡಿಕೆಯಲ್ಲಿ ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.
ಎಸ್.ಕೆ.ವಂಟಿಗೋಡಿ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು. ಮೃತರ ಕುಟುಂಬಕ್ಕೆ ಅಂಬ್ಯುಲೆನ್ಸ್ ಮೂಲಕ ಮೃತ ದೇಹ ಹಸ್ತಾಂತರಿಸಬೇಕು. ಇಂತಹ ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಣೆ ಜೊತೆಗೆ ಮಾನವೀಯತೆ ಮರೆಯಬಾರದು. ಸರ್ಕಾರದ ಮಾರ್ಗಸೂಚಿ ಪ್ರಕಾರ ಮೃತ ದೇಹವನ್ನು ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು.
ಕಾರ್ಮಿಕ ಇಲಾಖೆ; ನಿರಂತರ ಪರಿಶೀಲನೆ ಕ್ರಮ ವಹಿಸಿ:
ಕಾರ್ಮಿಕರಿಗೆ ಅಗತ್ಯ ರಕ್ಷಣಾತ್ಮಕ ಪರಿಕರಗಳನ್ನು ನೀಡಿರುವ ಬಗ್ಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಕಾರ್ಮಿಕರು ಗಾಯಗೊಂಡಲ್ಲಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಮೆಡ್ ಕಿಟ್ ಕಡ್ಡಾಯವಾಗಿ ಇರಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು. ಇದರಿಂದ ಸಂಭವಿಸಬಹುದಾದ ದುರಂತಗಳನ್ನು ತಪ್ಪಿಸಬಹುದು ಎಂದು ವಂಟಿಗೋಡಿ ತಿಳಿಸಿದರು.
ಸಕ್ಕರೆ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಬಹಳಷ್ಟು ಅನಾನುಕೂಲಗಳು ಇರುತ್ತವೆ ಅಂಥವುಗಳನ್ನು ಕೂಡ ಪರಿಶೀಲಿಸಬೇಕು. ದುರಂತ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಿಬೇಕು. ಜಿಲ್ಲಾಡಳಿತದಿಂದ ಈ ಬಗ್ಗೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದು ಹೇಳಿದರು.
ಸಂಬಂಧಿಸಿದ ಅಧಿಕಾರಿಗಳು ಅಗ್ನಿ ದುರಂತದ ಕುರಿತು ಸ್ಪಷ್ಟ ತನಿಖಾ ಕಾರ್ಯ ಕೈಗೊಳ್ಳಬೇಕು. ಇಂತಹ ಪ್ರಕರಣಗಳು ಸಂಭವಿಸಿದಲ್ಲಿ ತಾಲ್ಲೂಕು ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ನೇರ ಹೊಣೆಯಾಗಿತ್ತಾರೆ. ಹಾಗಾಗಿ ಮೃತ ದೇಹವನ್ನು ಕುಟುಂಬಗಳಿಗೆ ಗೌರವಪೂರ್ವಕವಾಗಿ ಹಸ್ತಾಂತರಿಸಬೇಕು. ಮಾನವ ಹಕ್ಕುಗಳು ಉಲ್ಲಂಗಣೆಯಾಗದಂತೆ ನೋಡಿಕೊಂಡು ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕಾರ್ಯ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಯ ವಸತಿನಿಯಗಳಲ್ಲಿ ಹಕ್ಕು ಉಲ್ಲಂಘನೆಯಾದಲ್ಲಿ ಕೂಡಲೇ ದೂರು ನೀಡಬೇಕು. ಬಸ್ ನಿಲ್ದಾಣ, ವಸತಿ ನಿಲಯಗಳು, ಪೊಲೀಸ್ ಠಾಣೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಪ್ರಕರಣಗಳ ಹೆಚ್ಚಾಗಿ ಕಂಡು ಬರುತ್ತವೆ. ಪ್ರಕರಣಗಳ ಮಾಹಿತಿ ಬಂದರೆ ತಕ್ಷಣವೇ ಸಂಬಂಧಿಸಿದ ತಹಶೀಲ್ದಾರ್ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಂದ ಮಾನವ ಹಕ್ಕುಗಳು ಆಯೋಗದಿಂದ ಜಾಗೃತಿ, ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುವುದು. ಬಳಿಕ ವಿವಿಧ ಇಲಾಖೆಗಳ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಬೆಳಗಾವಿ ತಹಶೀಲ್ದಾರ್ ಬಸವರಾಜ ನಾಗರಾಳ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸೂರ್ಯನಾರಾಯಣ ಭಟ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಅಗ್ನಿಶಾಮಕ ದಳದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಇದಕ್ಕೂ ಮುಂಚೆ ಅಗ್ನಿ ದುರಂತ ನಡೆದಿದ್ದ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದರು.
ದುರಂತದ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
****