ಬೆಳಗಾವಿ
ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ ತೆರವಿಗೆ ಪೊಲೀಸ್‌ರು ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾದ ವೇಳೆ ಅದಕ್ಕೆ ಕಣಬರ್ಗಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ಶುಕ್ರವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿದರು.
ಯಾವುದೇ ಕಾರಣಕ್ಕೂ ಚನ್ನಮ್ಮನ ಪ್ರತಿಮೆಯನ್ನು ತೆರವುಗೊಳಿಸದಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿಯೂ ನಡೆಯಿತು. ಶನಿವಾರ ಬೆಳಗಿನ ಜಾವ 4.30ರ ಸುಮಾರಿಗೆ ಸೇರಿದ್ದ ಜನರ ಗುಂಪನ್ನು ಪೊಲೀಸರು ಚದುರಿಸಿದರು. ಈ ಘಟನೆಯಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಚನ್ನಮ್ಮ ಪ್ರತಿಮೆ ತೆರವು ಮಾಡದೇ ಪೊಲೀಸರು, ಪಾಲಿಕೆ ಅಧಿಕಾರಿಗಳು ತೆರಳಿದರು.
ಕಣಬರ್ಗಿಯಲ್ಲಿ ರಾಣಿ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕೆಂಬ ಬೇಡಿಕೆ ಇತ್ತು. ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಇದರಿಂದಾಗಿ ಬೇಸತ್ತು ಕನ್ನಡಪರ ಹೋರಾಟಗಾರರು ಎರಡು ದಿನಗಳ ಹಿಂದಷ್ಟೇ ಫೈಬರ್‌ನಿಂದ ಸಿದ್ಧಮಾಡಿದ ಚನ್ನಮ್ಮನ ಅಶ್ವಾರೂಢ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಅನುಮತಿ ಪಡೆಯದೇ ಪ್ರತಿಷ್ಠಾಪನೆ ಮಾಡಿರುವ ಈ ಪ್ರತಿಮೆಯನ್ನು ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳು ಗ್ರಾಮಸ್ಥರಿಗೆ ಎರಡು ದಿನಗಳ ಗಡುವು ನೀಡಿದ್ದರು.
ಶುಕ್ರವಾರ ರಾತ್ರಿ ಪೊಲೀಸರ ಬಿಗಿ ಭದ್ರತೆಯಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಮೆಯನ್ನು ತೆರವುಗೊಳಿಸಲು ಮುಂದಾದರು. ಇದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪಾಲಿಕೆಯಿಂದ ಅನುಮತಿ ಪಡೆದ ಬಳಿಕ ಚನ್ನಮ್ಮನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಲಾಗುತ್ತದೆ. ಸದ್ಯ ಈ ಪ್ರತಿಮೆ ತೆರವುಮಾಡುವಂತೆ ಪೊಲೀಸರು ಪ್ರತಿಭಟನೆಕಾರರು ಮನವೊಲಿಸುವ ಯತ್ನ ವಿಫಲವಾಯಿತು.
ಗ್ರಾಮಸ್ಥರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆಯಾಗಿದ್ದು, ಭಾನುವಾರ ಬೆಳಗ್ಗೆ ಪೂಜೆ ಸಲ್ಲಿಸಿದ ಬಳಿಕ ಚನ್ನಮ್ಮನ ಪ್ರತಿಮೆ ತೆರವುಗೊಳಿಸಲಾಗುವುದು. ಬಳಿಕ ಪಾಲಿಕೆಯಿಂದ ಅನುಮತಿ ನೀಡಿದ ಬಳಿಕ ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.