ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಉಚ್ಚ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಘಟನೆ ರಾಜ್ಯದ ನಾಗರಿಕರಿಗೆ ಅತ್ಯಂತ ದುರದೃಷ್ಟಕರವಾದದ್ದು ಎಂದು ಪರಿಗಣಿಸಿದ ನ್ಯಾಯಾಲಯ, ಅಗತ್ಯವಿರುವಾಗ ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಿ, ಸಿಟಿ ರವಿ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿತು.
ಪೊಲೀಸರು ಕಾನೂನು ಕ್ರಮ ಅನುಸರಿಸದೆ ಬಂಧಿಸಿರುವುದನ್ನು ಪ್ರಶ್ನಿಸಿ ಜಾಮೀನು ಅರ್ಜಿ ಸಲ್ಲಿಸಿದ್ದ ಸಿಟಿ ರವಿ ತಾನು ಬಿಡುಗಡೆಗೆ ಅರ್ಹ ಎಂದು ಹೇಳಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ಜಿ. ಉಮಾ ಅವರನ್ನೊಳಗೊಂಡ ನ್ಯಾಯಪೀಠ ಮಧ್ಯಂತರ ಆದೇಶ ನೀಡಿತು.
ಎಂಎಲ್ಸಿ ರವಿ ಕೇಸ್ ಬೆಂಗಳೂರಿಗೆ ಶಿಫ್ಟ್
ಬೆಳಗಾವಿಯಲ್ಲಿ ಇವತ್ತು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಘಟನಾವಳಿ
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ ಸಂಬಂಧ ಬಂಧಿಸಲ್ಪಟ್ಟ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಅರ್ಜಿ ವಿಚಾರ ಸಂಬಂಧ ಬೆಳಗಾವಿ 5ನೇ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಮಹತ್ವದ ಆದೇಶ ನೀಡಿದೆ. ರವಿ ಅವರ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ನ್ಯಾಯಾಧೀಶರಾದ ಸ್ಪರ್ಶ ಡಿಸೋಜ್ ಆದೇಶ ಹೊರಡಿಸಿದ್ದಾರೆ.ಏತ್ಮಧ್ಯೆ ಸಿ.ಟಿ. ರವಿ ಅವರನ್ನು ತಕ್ಷಣವೇ ಬಿಡುಗಡೆಗೊಳಿುವಂತೆ ಹೈಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ ರವಿ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಸಿ.ಟಿ. ರವಿ ಅವರನ್ನು ಕರೆದುಕೊಂಡು ಪೊಲೀಸರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಇವರ ವಾಹನದ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ ಸೇರಿದಂತೆ ಬಿಜೆಪಿ ನಾಯಕರ ವಾಹನಗಳು ಹೊರಟಿವೆ.
ಹಿರೇಬಾಗೇವಾಡಿ ಪೊಲೀಸರು ಶುಕ್ರವಾರ ಬೆಳಗ್ಗೆ ಬೆಳಗಾವಿ ನ್ಯಾಯಾಲಯಕ್ಕೆ ರವಿ ಅವರನ್ನು ಹಾಜರುಪಡಿಸಿದರು. ಆ ಸಂದರ್ಭದಲ್ಲಿ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದರು. ವಾದ- ಪ್ರತಿವಾದ ಆಲಿಸಿರುವ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಆದರೆ ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದರು. ಅದರಂತೆ ಬೆಳಗಾವಿ ನ್ಯಾಯಾಲಯ ಬೆಂಗಳೂರಿಗೆ ಕರೆದೊಯ್ಯಲು ಎಷ್ಟು ಸಮಯ ಬೇಕು ಎಂದು ಕೇಳಿದೆ. ಇದಕ್ಕೆ ಪೊಲೀಸರು ವಿಮಾನದ ಮೂಲಕ ಹೋಗುವುದಾದರೆ 2 ಗಂಟೆ, ರಸ್ತೆ ಮೂಲಕ ಹೋಗುವುದಾದರೆ 12 ಗಂಟೆ ಬೇಕು ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಎಂಬುದು ನನಗೆ ತಿಳಿಸಿಲ್ಲ
ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ ಸಿ.ಟಿ. ರವಿ ಅವರು, ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಎಂಬುದನ್ನು ನನಗೆ ತಿಳಿಸಿಲ್ಲ. ಯಾರೂ ಕೂಡ ನನ್ನ ಪ್ರಶ್ನೆಗೆ ಉತ್ತರಿಸಿಲ್ಲ. ಗುರುವಾರ ಮಧ್ಯಾಹ್ನ ವಿಧಾನಸಭಾ ಕಾರಿಡಾರ್ನಲ್ಲಿ ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಮಂತ್ರಿ ಧಮಕಿ ಹಾಕಿದ್ದರು. ರಾತ್ರಿ ನನ್ನನ್ನು ಪೊಲಿಸರು ಎಲ್ಲೆಲ್ಲೋ ಕರೆದೊಯ್ಯತ್ತಿದ್ದರು. ದೇವರ ಮೇಲೆ ಭಾರ ಹಾಕಿ ನಾನು ಹೋದೆ. ನಿಮ್ಮನ್ನ ನೋಡಿಕೊಳ್ಳುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ಕೌನ್ಸಿಲ್ ಹಾಲ್ ಒಳಗೆ ಹೇಳಿದ್ದರು.
ನನ್ನನ್ನು ಪೊಲಿಸರು ನಿಗೂಢ ಜಾಗಕ್ಕೆ ಕರೆತಂದು ನಿಲ್ಲಿಸಿದ್ದಲ್ಲದೆ ದೂರ ಹೋಗಿ ಮಾತನಾಡುತ್ತಾ ಇದ್ದರು. ಖಾನಾಪುರದಲ್ಲಿ ನನಗೆ ಹೊಡೆದರು, ತಲೆಯಲ್ಲಿ ರಕ್ತ ಬರುತ್ತಿತ್ತು ಎಂದು ನ್ಯಾಯಾಧೀಶರ ಮುಂದೆ ಸಿಟಿ ರವಿ ಹೇಳಿದರು. ಇದೇ ವೇಳೆ, ಯಾರು ಹೊಡೆದಿದ್ದಾರೆ ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿ, ಯಾರು ಹೊಡೆದರು ಎಂದು ಗೊತ್ತಾಗಲಿಲ್ಲ. ಪೊಲಿಸರೇ ಹೊಡೆದಿರಬಹುದು, ಅವರೇ ಎತ್ತಿಕೊಂಡು ಹೋದರು ಎಂದರು.
ಸಿ.ಟಿ. ರವಿ ಪರವಾಗಿ ಹಿರಿಯ ವಕೀಲ ಎಂ.ಬಿ. ಜಿರಲಿ ವಾದ ಮಂಡಿಸಿದರು. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅರವಿಂದ್ ಬೆಲ್ಲದಸೇರಿದಂತೆ ಇತರೆ ಬಿಜೆಪಿ ನಾಯಕರು ಕೋರ್ಟ್ ಹಾಲ್ನಲ್ಲಿ ನಿಂತುಕೊಂಡು ವಾದ ಆಲಿಸಿದರು.
ರಾತ್ರಿಯಿಡೀ ಸುತ್ತಾಡಿಸಿದ ಪೊಲೀಸರು
ಸುವರ್ಣ ವಿಧಾನಸೌಧದ ಆವರಣದಲ್ಲೇ ಬಂಧಿಸಲ್ಪಟ್ಟ ಸಿ.ಟಿ. ರವಿ ಅವರನ್ನು ಪೊಲೀಸರು ರಾತ್ರಿಯಿಡೀ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಪೊಲೀಸ್ ಠಾಣೆಗಳತ್ತ ಅಲೆದಾಡಿಸಿದ್ದಾರೆ. ರಾತ್ರಿಇಡೀ ನಿದ್ದೆಗೆಟ್ಟು ರವಿ ಅವರು ಪ್ರತಿಭಟನೆಯನ್ನೂ ನಡೆಸಿದರು.ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ಖಾನಾಪುರ ಪೊಲೀಸ್ ಠಾಣೆಯಿಂದ ಜೀಪಿನಲ್ಲಿ ಕರೆದುಕೊಂಡು ಹೋದ ಪೊಲೀಸರು ಕಿತ್ತೂರು, ಸವದತ್ತಿ, ರಾಮದುರ್ಗ, ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪೊಲೀಸ್ ಠಾಣೆವರೆಗೂ ಸುತ್ತಾಡಿಸಿದರು. ಮಧ್ಯರಾತ್ರಿ 3 ಗಂಟೆ ಸುಮಾರಿಗೆ ರವಿ ಅವರ ತಲೆಗೆ ಬ್ಯಾಂಡೇಜ್ ಹಾಕಿ ಪ್ರಥಮ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಇದಕ್ಕೂ ಮೊದಲು ಕಿತ್ತೂರಿನಲ್ಲಿ ಮಧ್ಯರಾತ್ರಿ 1. 45ರ ಸುಮಾರಿಗೆ ಅರ್ಧ ಗಂಟೆಗಳ ಕಾಲ ಪೊಲೀಸ್ ವಾಹನ ನಿಂತೆ ಇತ್ತು. ರಾಮದುರ್ಗದಲ್ಲೂ ಕೆಲ ಹೊತ್ತು ವಾಹನ ನಿಲ್ಲಿಸಲಾಗಿದ್ದು 3:00 ವರೆಗೆ ಸುತ್ತಾಡಿಸಿ ರಾಮದುರ್ಗಕ್ಕೆ ಕರೆತಂದು ತಲೆಗೆ ಬ್ಯಾಂಡೇಜ್ ಹಚ್ಚಲಾಗಿದೆ. ಬೆಳಗಿನ ಜಾವ 5 ಗಂಟೆ ಬಳಿಕ ಗೌಪ್ಯ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗಲಾಗಿದೆ.
ರವಿ ಬಂಧನದಲ್ಲಿ ಕಾನೂನು ಉಲ್ಲಂಘಟನೆ- ಆರ್. ಅಶೋಕ
ವಿಧಾನ ಪರಿಷತ್ ಸದಸ್ಯ ಸಿಟಿ ರವಿಯವರನ್ನು ಬಂಧಿಸುವಲ್ಲಿ ಹಲವು ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಅರ್. ಅಶೋಕ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ನೋಟೀಸ್ ನೀಡದೆ ಬಂಧಿಸಲಾಗಿದೆ, ಬಂಧಿಸುವ ಮೊದಲು ಸಭಾಪತಿಗಳಿಗೆ ದೂರು ಸಲ್ಲಿಸಲಾಗಿಲ್ಲ, ಪೊಲೀಸರು ಮೇಲಿಂದ ಬರುವ ಆದೇಶಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಚಿತಾವಣೆ ಮೇರೆಗೆ ಇದೆಲ್ಲ ನಡೆಯುತ್ತಿದೆ, ಸುವರ್ಣ ಸೌಧದ ಅವರಣದಲ್ಲೇ ಅವರಿಬ್ಬರು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನ್ಯಾಯಾಲಯದಲ್ಲಿ ರವಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದರು.
ರವಿ ಅವರನ್ನು ಪೊಲೀಸರು ಬಂಧಿಸಿದ್ದು ಏಕೆ- ವಿಜಯೇಂದ್ರ ಪ್ರಶ್ನೆ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿ.ಟಿ.ರವಿ ಪದ ಬಳಕೆ ಮಾಡಿರುವ ಯಾವುದೇ ದಾಖಲೆಗಳು ಇಲ್ಲ ಎಂದು ರೂಲಿಂಗ್ ಕೊಟ್ಟಿದ್ದಾರೆ. ಪೊಲೀಸರು ಬಂಧಿಸಿದ್ದು ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಹಿಳೆಯ ಮೇಲೆ ಘನತೆ ಧಕ್ಕೆಯಾಗಿರುವುದು ಗಂಭೀರವಾಗಿ ಇರುವ ಆರೋಪ. ಇದು ಸಂಪೂರ್ಣ ತನಿಖೆಯಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಎಫ್ಎಸ್ಎಲ್ ಗೆ ಕಳುಹಿಸಿ ಪರೀಕ್ಷೆಯಾಗಬೇಕು. ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಒತ್ತಾಯಿಸಿದರು.