ಪಣಜಿ: ಜೀವನೋಪಾಯಕ್ಕಾಗಿ ಉತ್ತರ ಕರ್ನಾಟಕ ಭಾಗದಿಂದ ಗೋವಾಕ್ಕೆ ಬರುವ ಕರ್ನಾಟಕದ ವಲಸೆ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮನವಿ ಮಾಡಿದ್ದಾರೆ.
ಈ ಸಂಬಂಧ ಲಾಡ್ ಅವರು ಮನವಿ ಪತ್ರವನ್ನು ಪ್ರಮೋದ್ ಸಾವಂತ್ ಅವರಿಗೆ ಸಲ್ಲಿಸಿದ್ದಾರೆ.
ಕರ್ನಾಟಕದ ವಲಸೆ ಕಾರ್ಮಿಕರ ದುಃಸ್ಥಿತಿ ಬಗ್ಗೆ ಕರ್ನಾಟಕ ಸರ್ಕಾರದ ಗಮನಕ್ಕೆ ಬಂದಿದೆ. ಪೊಲೀಸರು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಕನ್ನಡಿಗರಿಗೆ ಉಂಟಾಗುತ್ತಿರುವ ತೊಂದರೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಗೋವಾ ಮತ್ತು ಕರ್ನಾಟಕಕ್ಕೆ ಸಾಂಸ್ಕೃತಿಕ ಬಂಧವಿದೆ. ಎರಡು ರಾಜ್ಯಗಳು ಆತಿಥ್ಯಕ್ಕೆ ಹೆಸರಾಗಿವೆ. ಜನರ ಜೀವನಕ್ಕೆ ಮೂಲ ಅವಶ್ಯಕತೆಗಳಾದ ಸಾರ್ವಜನಿಕ ಪಡಿತರ ವ್ಯವಸ್ಥೆ, ಆರೋಗ್ಯ ಸೌಲಭ್ಯ, ಇತರ ಸಾಮಾಜಿಕ ಸೌಲಭ್ಯ ಗಳನ್ನು ಕರ್ನಾಟಕದ ವಲಸೆ ಕಾರ್ಮಿಕರಿಗೆ ವಿಸ್ತರಿಸಿ ಎಂದು ಸಚಿವರು ವಿನಂತಿಸಿದ್ದಾರೆ.