ಗೋಕಾಕ ಮಹಾಲಕ್ಷ್ಮಿ ಬ್ಯಾಂಕ್ ಬಹುಕೋಟಿ ವಂಚನೆ ಕೇಸ್
ಬೆಳಗಾವಿ: ಗೋಕಾಕಿನ ಮಹಾಲಕ್ಷ್ಮಿ ಕೋಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದಿದ್ದ ಬಹುಕೋಟಿ ವಂಚನೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಜಮಖಂಡಿಯ ಹೊಸ ಬಬಲಾದಿ ಮಠದ ಸ್ವಾಮೀಜಿಯನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಠ ಬಾಗಲಕೋಟೆಯ ಜಮಖಂಡಿಯಲ್ಲಿದೆ. ಮಠದ ಸದಾಶಿವ ಹಿರೇಮಠ ಸ್ವಾಮೀಜಿ ವಶಕ್ಕೆ ಪಡೆದಿರುವ ಸಿಐಡಿ ಇಡೀ ರಾತ್ರಿ ವಿಚಾರಣೆ ನಡೆಸಿದೆ. ಗೋಕಾಕ ನಗರ ಠಾಣೆಯಲ್ಲಿ ಸಿಐಡಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ಸ್ವಾಮೀಜಿ ತಗಲಾಕ್ಕಿಕೊಂಡಿದ್ದು ಹೇಗೆ?
ಈ ವಂಚನೆ ಪ್ರಕರಣದಲ್ಲಿ ಸ್ವಾಮೀಜಿ ತಗಲಾಕ್ಕಿಕೊಂಡಿದ್ದು ಹೇಗೆ? ಎಂಬುದು ಇಂಟ್ರೆಸ್ಟಿಂಗ್ ಆಗಿದೆ. ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಿಂದಲೇ ಸದಾಶಿವ ಹಿರೇಮಠ ಸ್ವಾಮೀಜಿ ಖಾತೆಗೆ ಲಕ್ಷ ಲಕ್ಷ ಹಣ ವರ್ಗಾವಣೆ ಆಗಿದೆ. 60 ಲಕ್ಷಕ್ಕೂ ಅಧಿಕ ಹಣ ಸ್ವಾಮೀಜಿ ಹಾಗೂ ಕುಟುಂಬಸ್ಥರಿಗೆ ವರ್ಗಾವಣೆ ಮಾಡಲಾಗಿದೆ. ಸದಾಶಿವ ಹಿರೇಮಠ ಸ್ವಾಮೀಜಿ, ಸ್ವಾಮೀಜಿ ಪತ್ನಿ ಹಾಗೂ ಪುತ್ರನ ಖಾತೆಗೆ ಈ ಹಣ ವರ್ಗಾವಣೆ ಆಗಿದೆ. ಈ ಹಣದಲ್ಲಿ ಸದಾಶಿವ ಹಿರೇಮಠ ಸ್ವಾಮೀಜಿ ನಿವೇಶನ ಖರೀದಿಸಿದ್ದಾರೆಂಬ ಮಾಹಿತಿ ಇದೆ. ಅಲ್ಲದೇ ಹೊಸ ಬಬಲಾದಿ ಮಠದ ಜಾತ್ರೆ ಹಾಗೂ ಅನ್ನ ಸಂತರ್ಪಣೆಗೂ ಆರೋಪಿ ಲಕ್ಷಾಂತರ ಹಣ ನೀಡಿರುವ ಬಗ್ಗೆಯೂ ತನಿಖೆಯಿಂದ ಬಟಾಬಯಾಲಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯೇ ಸದಾಶಿವ ಹಿರೇಮಠ ಸ್ವಾಮೀಜಿಯನ್ನು ಸಿಐಡಿ ವಶಕ್ಕೆ ಪಡೆದಿದೆ.
ಪ್ರಾಯಶ್ಚಿತಕ್ಕಾಗಿ ಸ್ವಾಮೀಜಿಗೆ ಹಣ ನೀಡಿದ್ನಾ ಆರೋಪಿ…!
ಪ್ರಾಯಶ್ಚಿತ್ತಕ್ಕಾಗಿ ಸ್ವಾಮೀಜಿ ಅಕೌಂಟ್‌ಗೆ ಆರೋಪಿ ಸಾಗರ ಸಬಕಾಳೆ ಹಣ ವರ್ಗಾವಣೆ ಮಾಡಿದ್ನಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಗರ ಸಬಕಾಳೆ ಪ್ಯೂನ್ ಆಗಿದ್ದ. ಸಾಗರ ಸಬಕಾಳೆ ಸೇರಿ ಇತರೇ ಸಿಬ್ಬಂದಿಯಿಂದ ಬ್ಯಾಂಕಿಂಗೆ ಕೋಟಿ ಕೋಟಿ ವಂಚನೆ ಮಾಡಿದ್ದಾರೆ. ಬ್ಯಾಂಕಿನಲ್ಲಿ ಅಕ್ರಮವಾಗಿ 76 ಕೋಟಿ ಸಾಲ ಪಡೆದು ಮರಳಿಸದೇ ಈ ಎಲ್ಲರೂ ವಂಚನೆ ಮಾಡಿದ್ದಾರೆ. ಆರ್‌ಬಿಐ ಅಧಿಕಾರಿಗಳೇ ದಂಗಾಗುವಂತೆ ಈ ಆರೋಪಿಗಳು ವಂಚನೆ ಮಾಡಿದ್ದಾರೆ. ಅಡಿಟ್ ವೇಳೆ ಸಾಲಗಾರರ ಸೀಟ್ ಹಾಗೂ ಠೇವಣಿ ಸೀಟ್ ತಿದ್ದುಪಡಿ ಮಾಡಿದ್ದರು. ಮೂರು ವರ್ಷಗಳ ಅಡಿಟ್ ವೇಳೆ ವಂಚನೆ ಪ್ರಕರಣ ಬೆಳಕಿಗೆ ಬಾರದಂತೆ ನೋಡಿಕೊಂಡಿದ್ದರು. ಈ ಹಣದಿಂದಲೇ ಆರೋಪಿಗಳು ಗೋಕಾಕ್, ಬೆಳಗಾವಿ, ಹುಬ್ಬಳ್ಳಿಯಲ್ಲಿ ಜಾಗ ಖರೀದಿಸಿದ್ದರು. ಬ್ಯಾಂಕ್ ಮಾಲೀಕ ನೀಡಿದ ದೂರಿನನ್ವಯ ಬೆಳಗಾವಿ ಪೊಲೀಸರು ಪ್ರಕರಣ ಬೇಧಿಸಿ ಆಸ್ತಿ ಜಪ್ತಿ ಮಾಡಿದ್ದರು. ಬಳಿಕ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿತ್ತು..